Advertisement

ನಡು ರಸ್ತೆಯಲ್ಲೇ ಒಳಚರಂಡಿ ಕಾಮಗಾರಿ; ಸಂಚಾರಕ್ಕೆ ಸಂಕಷ್ಟ

11:59 PM Feb 09, 2020 | Sriram |

ಮಹಾನಗರ: ನಗರದ ಅನೇಕ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿಯೂ ನಗರದ ಜ್ಯೋತಿ ಚಿತ್ರಮಂದಿರದಿಂದ ಬಂಟ್ಸ್‌ಹಾಸ್ಟೆಲ್‌ ಕಡೆಗೆ ಬರುವ ರಸ್ತೆಯಲ್ಲಿ ಕೆಲವು ದಿನಗಳಿಂದ ನಡು ರಸ್ತೆಯಲ್ಲೇ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

Advertisement

ಜ್ಯೋತಿ ಚಿತ್ರಮಂದಿರದ ಬಳಿ ಈ ಹಿಂದೆ ರಸ್ತೆಯಲ್ಲಿಯೇ ಕೊಳಚೆ ನೀರು ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಳೆದ ತಿಂಗಳು ಅಲ್ಲೇ ಅಕ್ಕಪಕ್ಕದಲ್ಲಿ ಒಳಚರಂಡಿ ಕಾಮಗಾರಿ ನಡೆದರೂ ಸಮಸ್ಯೆ ಬಗೆಹರಿಯಲಿಲ್ಲ. ಇದೀಗ ಆ ಪ್ರದೇಶಕ್ಕೆ ಹೊಸತಾಗಿ ಒಳಚರಂಡಿ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ.

ರಸ್ತೆ ನಡುವೆಯೇ ಕಾಮಗಾರಿ ನಡೆಯುತ್ತಿದ್ದು, ವಿಳಂಬದಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ಆಗಾಗ ರಸ್ತೆ ಅಗೆದು ಸ್ಥಳೀಯರಿಗೆ ಕಿರಿಕಿರಿಯ ಜತೆಗೆ ಆ ಮಾರ್ಗದಲ್ಲಿ ಹಾದು ಹೋಗುವ ವಾಹನ ಸವಾರರಿಗೆ ಅಡ್ಡಿಯುಂಟಾಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹುಡುಕುವ ಪ್ರಯತ್ನಪಾಲಿಕೆ ಮಾಡಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಇದೇ ಮೊದಲಲ್ಲ
ಇದೇ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದು ಇದೇ ಮೊದಲಲ್ಲ. ಜ್ಯೋತಿ ಚಿತ್ರಮಂದಿರದಿಂದ ಬಂಟ್ಸ್‌ಹಾಸ್ಟೆಲ್‌ಗೆ ಸಾಗುವ ರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎನ್ನುವ ಕಾರಣಕ್ಕೆ ಕೆಲವೇ ಮೀಟರ್‌ಗಳ ಅಂತರದಲ್ಲಿ ಕೆಲವು ತಿಂಗಳಿನಿಂದ ಮೂರು ಕಡೆ ಕಾಂಕ್ರೀಟ್‌ ರಸ್ತೆ ಅಗೆಯಲಾಗಿತ್ತು.
ಅದೇ ರೀತಿ ಪಿವಿಎಸ್‌ ವೃತ್ತ ಬಳಿ ತಿಂಗಳ ಹಿಂದೆ ನೀರಿನ ಪೈಪ್‌ಲೈನ್‌ ದುರಸ್ತಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಬಂಟ್ಸ್‌ ಹಾಸ್ಟೆಲ್‌ ಬಳಿಯೂ ಕಾಂಕ್ರೀಟ್‌ ರಸ್ತೆಯನ್ನು ಅಗೆಯಲಾಗಿದ್ದು, ದುರಸ್ತಿ ಮಾಡಿಲ್ಲ. ಗುಂಡಿಗೆ ಮಣ್ಣು ಹಾಕಿ ಮುಚ್ಚಲಾಗಿದ್ದು, ಬಂಟ್ಸ್‌ಹಾಸ್ಟೆಲ್‌ನಿಂದ ಮಲ್ಲಿಕಟ್ಟೆಗೆ ಹೋಗುವ ರಸ್ತೆಯ ಟೊಯೋಟಾ ಶೋರೂಂ ಮುಂಭಾಗ ಪೈಪ್‌ ಒಡೆದು ಹಲವು ಸಮಯದಿಂದ ರಸ್ತೆಯಲ್ಲೇ ನೀರು ಹರಿಯುವ ಕಾರಣಕ್ಕೆ ಈ ರಸ್ತೆಯಲ್ಲೂ ಐದಾರು ಕಡೆ ಕಾಂಕ್ರೀಟ್‌ ತುಂಡರಿಸಿ ಒಳಚರಂಡಿ ಪೈಪ್‌ಲೈನ್‌, ನೀರಿನ ಪೈಪ್‌ಲೈನ್‌ ದುರಸ್ತಿ ಮಾಡಲಾಗಿದೆ.

ಕೊಡಿಯಾಲಬೈಲ್‌ನಿಂದ ಜೈಲ್‌ರಸ್ತೆಗೆ ಸಂಪರ್ಕ ಕಲ್ಪಿಸುವ ಕೊಡಿಯಾಲ್‌ಗ‌ುತ್ತು ಬಳಿ ನಡು ರಸ್ತೆಯಲ್ಲೇ ಅಗೆದು ಕಾಮಗಾರಿ ನಡೆಸುತ್ತಿದ್ದರು. ಒಂದೇ ವರ್ಷದಲ್ಲಿ ಅಕ್ಕ ಪಕ್ಕದಲ್ಲೇ ಮೂರು ಬಾರಿ ಅಗೆಯುವ ಕೆಲಸ ನಡೆದಿತ್ತು.

Advertisement

ಶೀಘ್ರ ಕಾಮಗಾರಿ ಪೂರ್ಣ
ಒಳಚರಂಡಿ ಸಮಸ್ಯೆಯಿಂದಾಗಿ ಜ್ಯೋತಿ ಚಿತ್ರಮಂದಿರದ ಬಳಿ ಕೊಳಚೆ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಒಳಚರಂಡಿ ಕಾಮಗಾರಿ ನಡೆದರೂ ಸಮಸ್ಯೆ ಬಗೆಹರಿಯಲಿಲ್ಲ. ಇದೀಗ ಆ ಪ್ರದೇಶಕ್ಕೆ ಹೊಸತಾಗಿ ಒಳಚರಂಡಿ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
– ಗುರುರಾಜ್‌ ಮರಲಿಹಳ್ಳಿ,
ಪಾಲಿಕೆ ಕಾರ್ಯಪಾಲಕ ಅಭಿಯಂತರ

Advertisement

Udayavani is now on Telegram. Click here to join our channel and stay updated with the latest news.

Next