ಕುಂದಾಪುರ: ಇಲ್ಲಿನ ಹೆದ್ದಾರಿ ಫ್ಲೈಓವರ್ ಬದಿಯ ಸರ್ವೀಸ್ ರಸ್ತೆಯಲ್ಲಿ ಅಲ್ಲಲ್ಲಿ ಚರಂಡಿ ತೆಗೆದು ಮುಚ್ಚದೇ ತಿಂಗಳುಗಟ್ಟಲೆ ಬಾಕಿಯಿಟ್ಟ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಗಿದೆ.
ಸರ್ವೀಸ್ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಎಂದು ಮೀಟರ್‌ಗಟ್ಟಲೆ ಉದ್ದದ ಹೊಂಡ ತೆಗೆದ ಗುತ್ತಿಗೆದಾರ ಸಂಸ್ಥೆ ಅನಂತರ ಅದರ ಕಾಮಗಾರಿ ಮುಂದುವರಿಸದೇ ಬಿಟ್ಟಿತ್ತು.
ತಿಂಗಳುಗಟ್ಟಲೆಯಾದರೂ ಈ ಹೊಂಡಗಳಿಂದ ಸಮಸ್ಯೆ ಹೆಚ್ಚಾಗುತ್ತಲೇ ಇತ್ತು ವಿನಾ ಕೊನೆ ಕಾಣಲಿಲ್ಲ. ಪಕ್ಕದ ಮನೆಗಳಿಗೆ, ಹೊಟೇಲ್, ಅಂಗಡಿಗಳಿಗೆ ಬರುವವರಿಗೆ ತೊಂದರೆ ಆಗುವುದರ ಜತೆ ಹೆದ್ದಾರಿಯೇ ಆಗಿರುವ ಸರ್ವೀಸ್ ರಸ್ತೆಯಲ್ಲಿ ಚಲಿಸುವ ವಾಹನಗಳಿಗೂ ತೊಂದರೆಯಾಗುತ್ತಿತ್ತು.
ಈ ಕುರಿತು “ಉದಯವಾಣಿ’ “ಸುದಿನ’ ಎ.13ರಂದು “ಮತ್ತೆ ಕುಂಟುತ್ತಾ ಸಾಗಿದೆ ಫ್ಲೈಓವರ್ ಕಾಮಗಾರಿ’ ಎಂದು ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಸಹಾಯಕ ಕಮಿಷನರ್ ಕೆ. ರಾಜು ಅವರು ಕಾಮಗಾರಿ ಬೇಗ ಮುಗಿಸುವಂತೆ ಗುತ್ತಿಗೆದಾರ ಸಂಸ್ಥೆಯವರಿಗೆ ಸೂಚಿಸಿದ್ದರು. ಅದರಂತೆ ಈಗ ಫ್ಲೈಓವರ್ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು ಸರ್ವೀಸ್ ರಸ್ತೆ ಕಾಮಗಾರಿಗೂ ಮುನ್ನ ಬಾಕಿ ಉಳಿಸಿಟ್ಟ ಚರಂಡಿ ಕಾಮಗಾರಿ ಆರಂಭಿಸಲಾಗಿದೆ.