Advertisement

ಚರಂಡಿ ಕಾಮಗಾರಿ ಮಣ್ಣು ರಸ್ತೆಗೆ; ಸಂಚಾರ ಸಮಸ್ಯೆ

07:56 PM Oct 13, 2021 | Team Udayavani |

ಕೈಕಂಬ: ಬಜಪೆ- ಗುರುಪುರ ಕೈಕಂಬ ರಾಜ್ಯ ಹೆದ್ದಾರಿ 101ರಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನ ಮಂದಿರದ ಎದುರಿನಿಂದ ಕಿನ್ನಿಕಂಬಳದ ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ವರೆಗೆ ಚರಂಡಿ ಕಾಂಕ್ರೀಟ್‌ ಕಾಮಗಾರಿಗಾಗಿ ಅಗೆದ ಮಣ್ಣನ್ನು ರಸ್ತೆಗೆ ಹಾಕಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಬದಿಯಲ್ಲಿ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಲು ಕಷ್ಟವಾಗಿದ್ದು, ಅಪಾಯ ಸ್ಥಿತಿಯನ್ನು ಎದುರಿಸುವಂತಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯು ತುರ್ತಾಗಿ ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

3 ತಿಂಗಳ ಹಿಂದೆ ಚರಂಡಿ ಕಾಮಗಾರಿಗಾಗಿ ಅಗೆದ ಮಣ್ಣು ಮತ್ತು ಹೂಳನ್ನು ರಸ್ತೆ ಬದಿಯಲ್ಲೇ ಹಾಕಲಾಗಿತ್ತು. ಅನಂತರ ಈ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ರಸ್ತೆ ಬದಿಯಲ್ಲಿ ಹೂಳು, ಮಣ್ಣು ಹಾಕಿದ್ದರಿಂದ ಈಗ ಅಲ್ಲಿ ಹುಲ್ಲು ಬೆಳೆಯಲಾರಂಭಿಸಿದೆ.

ಶಾಲಾ ಮಕ್ಕಳಿಗೆ ಅಪಾಯ
ಶಾಲಾ ವಠಾರದಲ್ಲಿ ರಸ್ತೆಯ ಅಗಲ ಕಿರಿದಾಗಿದೆ. ಇನ್ನು ರಸ್ತೆಯ ಬದಿಯಲ್ಲಿ ಚರಂಡಿಯ ಹೂಳು ಹಾಕಿದ್ದರಿಂದ ಸಂಚರಿಸಲು ಇನ್ನೂ ಕಿರಿದಾದಂತಾಗಿದೆ. ಶಾಲಾ ಮಕ್ಕಳು ಅನ್ಯಮಾರ್ಗ ಇಲ್ಲದ ಕಾರಣ ರಸ್ತೆ ಮಧ್ಯೆದಲ್ಲಿಯೇ ಸಂಚರಿಸಬೇಕಿದೆ. ಇದರಿಂದ ಅವರಿಗೆ ಕಷ್ಟ ಮತ್ತು ಅಪಾಯ ಎದುರಾಗಿದೆ.

6ರಿಂದ 10ನೇ ತರಗತಿಗಳು ಈಗಾ ಗಲೇ ಆರಂಭವಾಗಿವೆ. ಬೆಳಗ್ಗೆ ಹಾಗೂ ಸಂಜೆ ಶಾಲಾ ಮಕ್ಕಳಿಗೆ ಇದು ಭಾರೀ ತೊಂದರೆ ಹಾಗೂ ಸಮಸ್ಯೆಯಾಗಿ ಪರಿಣಮಿಸಿದೆ. ಈಗಾಗಲೇ ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು,ಶಾಲಾ ಮಕ್ಕಳ ಪೋಷಕರ ಅಳಲು. ಅರ್ಧದಲ್ಲಿಯೇ ಬಿಟ್ಟ ಕಾಮಗಾರಿ ಯಲ್ಲಿಯೇ ರಸ್ತೆಯ ತಿರುವು ಇದ್ದು, ಅಪಘಾತಕ್ಕೂ ಕಾರಣವಾಗುತ್ತಿದೆ. ಇತ್ತೀಚೆಗೆ ಒಂದು ಅಪಘಾತ ಇಲ್ಲಿ ಸಂಭವಿಸಿದೆ. ಶಾಲೆ ಮಕ್ಕಳ ಸಂಚಾರಕ್ಕೆ ತೊಂದರೆಯಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಲೋಕೋಪಯೋಗಿ ಇಲಾಖೆ ಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕಿದೆ.

ಇದನ್ನೂ ಓದಿ:ಸ್ವಚ್ಚ ಭಾರತ ಅಭಿಯಾನ ಬೃಹತ್ ಸಮೂಹ ಚಳುವಳಿಯಾಗಿದೆ-ಆರ್.ಎಸ್.ಪವಾರ್

Advertisement

ಶೀಘ್ರ ಮಣ್ಣು ತೆರವು
ಈ ರಸ್ತೆಗೆ 2015ರಲ್ಲಿ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಯೋಜನೆಯಲ್ಲಿ ಟೆಂಡರ್‌ ಆಗಿದೆ. ಕಳೆದ ಐದಾರು ವರ್ಷಗಳಿಂದ ಆ ರಸ್ತೆಯಲ್ಲಿ ನಮ್ಮ ಇಲಾಖೆಯಿಂದ ಯಾವುದೇ ಕಾಮಗಾರಿಯನ್ನು ಮಾಡಿಲ್ಲ. ಈ ಮಧ್ಯೆ ರಸ್ತೆ ನಿರ್ವಹಣೆಗಾಗಿ ಸರಕಾರಕ್ಕೆ ಮನವಿ ಮಾಡಿದೆ. ಗುತ್ತಿಗೆದಾರರ ಟೆಂಡರ್‌ ರದ್ದಾಗದೇ ಇರುವುದರಿಂದ ಇದು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಮಳೆ ನೀರಿಗೆ ಕೆಲವೆಡೆ ಚರಂಡಿಯನ್ನು ಬಿಡಿಸಿಕೊಡಲಾಗಿದೆ. ಕಿನ್ನಿಕಂಬಳ ಶಾಲಾ ಬಳಿ ಚರಂಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಅನುಮೋದನೆಗೊಂಡಿಲ್ಲ. ನಿರ್ವಹಣೆಗೆ ಅನುದಾನ ನೀಡಲು ಪ್ರಸ್ತಾವ ಮಾಡಲಾಗಿದೆ. ಅದೂ ಬರಲಿಲ್ಲ. ರಸ್ತೆ ನಮ್ಮ ಇಲಾಖೆಯಾದ ಕಾರಣ ಜನರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಶೀಘ್ರ ಮಣ್ಣನ್ನು ತೆರವುಗೊಳಿಸಲಾಗುವುದು.
-ರತ್ನಾಕರ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next