ದೇವನಹಳ್ಳಿ: ಸರ್ಕಾರ ಪಟ್ಟಣದ ಮೂಲ ಸೌಕರ್ಯಕ್ಕೆ ಹಾಗೂ ಸ್ವತ್ಛತೆಗೆ ಹೆಚ್ಚಿನ ಅನುದಾನವನ್ನು ಖರ್ಚು ಮಾಡುತ್ತಿದ್ದರೂ, ಪಟ್ಟಣದ 20ನೇ ವಾರ್ಡಿನ ಶಾಂತಿನಗರದ ಡಿಆರ್‌ಎನ್ ಬಡಾವಣೆಯಿಂದ ಸರಿಯಾದ ರೀತಿ ಚರಂಡಿ ಇಲ್ಲದೆ ಮನೆಗಳ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಬಡಾವಣೆಯ ತ್ಯಾಜ್ಯ ನೀರು ರಸ್ತೆಗೆ ಹರಿದು ಬಿಟ್ಟಿದ್ದಾರೆ. ರಸ್ತೆಯಲ್ಲಿ ಹರಿದಿರುವ ಚರಂಡಿ ನೀರಿನಲ್ಲೇ ವಾಹನ ಸವಾರರು ಸಂಚಾರ ಮಾಡುವ ಪರಿಸ್ಥಿತಿ ಬಂದೊದಗಿದೆ. ತ್ಯಾಜ್ಯ ನೀರು ಪಕ್ಕದಲ್ಲೇ ಇರುವ ಬಿಎಂಟಿಸಿ ಬಸ್ ಡಿಪೋ ಪ್ರವೇಶ ದ್ವಾರದವರೆಗೂ ಹರಿಯುತ್ತಿದ್ದು, ಬಸ್ ಸಂಚಾರಕ್ಕೂ ಅನನುಕೂಲವಾಗುತ್ತಿದೆ.
ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ: ಬಡಾವಣೆಗಳು ನಿರ್ಮಾಣ ಮಾಡಬೇಕಾದರೆ ಎಲ್ಲಾ ಮೂಲ ಸೌಕರ್ಯ ಕಲ್ಪಿಸಿ ಕೊಡಬೇಕು. ಬಡಾವಣೆಯಲ್ಲಿ ಮೂಲಭೂತ ಸೌಕರ್ಯದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಮನೆಗಳು ನಿರ್ಮಾಣವಾಗುತ್ತಿದ್ದು, ಮನೆಗಳಿಂದ ಪ್ರತಿನಿತ್ಯ ಹೊರಬರುವ ತ್ಯಾಜ್ಯ ನೀರು ಸಹ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಜೆ ವೇಳೆಯಂತೂ ಸೊಳ್ಳೆಗಳ ಆರ್ಭಟ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಬರುವು ಸಾಧ್ಯತೆಯೂ ಇದೆ. ವಿಪರೀತ ಗಿಡಗಂಟಿಗಳೂ ಹೆಚ್ಚು ಬೆಳೆದಿರುವುದರಿಂದ ಸಾರ್ವಜನಿಕರು ಓಡಾಡಲು ಆಗುತ್ತಿಲ್ಲ. ಗಿಡಗಂಟೆಗಳು ಹೆಚ್ಚು ಇರುವುದರಿಂದ ಹಾವುಗಳು ಓಡಾಡುತ್ತವೆ. ಮಳೆ ಬಂತೆಂದರೆ ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುವಂತಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳು ಹೆಚ್ಚಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ದೂರುತ್ತಾರೆ.
ಮನವಿ ಮಾಡಿದರೂ ಪ್ರಯೋಜನವಿಲ್ಲ: ಬಸ್ ಡಿಪೋ ಅಧಿಕಾರಿಗಳು ಚರಂಡಿ ನೀರು ಹರಿಯುತ್ತಿರುವುದರ ಬಗ್ಗೆ ಪುರಸಭೆಗೆ ಪತ್ರದ ಮೂಲಕ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗಿಡಗಂಟೆಗಳನ್ನು ಸ್ವತ್ಛಗೊಳಿಸಿ ಹಾಗೂ ರಸ್ತೆಗೆ ಬರುತ್ತಿರುವ ಚರಂಡಿ ನೀರು ಬರದಂತೆ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಮನೆಗಳ ತ್ಯಾಜ್ಯ ನೀರು ಪ್ರತಿನಿತ್ಯ ರಸ್ತೆಗೆ ಹರಿದು ಬರುತ್ತಿದೆ. ಮುಂದಿನ ಬಡಾವಣೆ ಹಾಗೂ ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ವಾಹನ ಸಂಚಾರ ಮಾಡುವವರು ಕೊಚ್ಚೆ ನೀರಿನಲ್ಲಿಯೇ ಸಂಚರಿಸಬೇಕಾಗಿದೆ. ಪುರಸಭಾ ಅಧಿಕಾರಿಗಳು ಚರಂಡಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.
– ಹೇಮಂತ್ ಕುಮಾರ್, ನಾಗರಿಕ
15ನೇ ಹಣಕಾಸು ಯೋಜನೆಯಡಿ ಚರಂಡಿ ನಿರ್ಮಾಣ ಮಾಡಲು ಕಾಮಗಾರಿ ಪಟ್ಟಿಗೆ ಸೇರಿಸಲಾಗಿದೆ. ನಗರೋತ್ತಾನ ಇತರೆ ಅನುದಾನಗಳು ಬರುತ್ತಿದೆ. ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿರುವುದರ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ನಮ್ಮ ಗಮನಕ್ಕೆ ನೀಡಿದ್ದಾರೆ. ಚರಂಡಿ ನಿರ್ಮಾಣ ಮಾಡಲು ಪುರಸಭಾ ಅಧಿಕಾರಿಗಳು ಹಾಗೂ ಪುರಸಭಾ ಅಧ್ಯಕ್ಷರ ಗಮನಕ್ಕೆ ತರಲಾಗಿದೆ.
– ಮುನಿಕೃಷ್ಣ, ಪುರಸಭಾ ಸದಸ್ಯ
ಚರಂಡಿ ನಿರ್ಮಾಣ ಮಾಡದ ಕಾರಣ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದೆ. ಸಂಬಂಧಪಟ್ಟ ಬಡಾವಣೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ತಕ್ಷಣ ಚರಂಡಿ ನಿರ್ಮಾಣ ಮಾಡಿಸಲಾಗುವುದು. ಬಡಾ ವಣೆಗೆ ಬೇಕಾದ ಮೂಲ ಸೌಕರ್ಯಬಡಾವಣೆ ಮಾಲೀಕರೆ ಒದಗಿಸಿಕೊಡಬೇಕು.
– ಎ.ಎಚ್. ನಾಗರಾಜ್,ಪುರಸಭಾ ಮುಖ್ಯಾಧಿಕಾರಿ