Advertisement

ಹನ್ನೊಂದು ಸ್ಥಾನಕ್ಕೆ ತೀವ್ರ ಹಣಾಹಣಿ 

06:00 AM May 23, 2018 | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಬೆನ್ನಲ್ಲೇ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್‌. ವೀರಯ್ಯ, ಸೋಮಣ್ಣ ಬೇವಿನಮರದ, ರಘುನಾಥ್‌ರಾವ್‌ ಮಲ್ಕಾಪುರೆ, ಭಾನುಪ್ರಕಾಶ್‌ ಹಾಗೂ ಕಾಂಗ್ರೆಸ್‌ನ ಎಂ.ಆರ್‌.ಸೀತಾರಾಂ, ಮೋಟಮ್ಮ, ಸಿ.ಎಂ. ಇಬ್ರಾಹಿಂ. ಕೆ.ಗೋವಿಂದರಾಜು, ಬೈರತಿ ಸುರೇಶ್‌, ಮದೀರ್‌ ಆಗಾ ಅವರ ಅವಧಿ ಜೂ.17ಕ್ಕೆ
ಮುಕ್ತಾಯಗೊಳ್ಳಲಿದ್ದು, ಆ ಸ್ಥಾನಗಳಿಗೆ ಜೂ.11ಕ್ಕೆ ಮತದಾನ ನಡೆಯಲಿದೆ.

Advertisement

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸೋಮಣ್ಣ ಬೇವಿನಮರದ ಹಾಗೂ ಬೈರತಿ ಸುರೇಶ್‌ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ತೆರವಾಗುವ 11 ಸ್ಥಾನಗಳ ಪೈಕಿ ಈಗಿನ ಸಂಖ್ಯಾಬಲದ ಪ್ರಕಾರ ಜೆಡಿಎಸ್‌ಗೆ 2, ಬಿಜೆಪಿಗೆ 5 ಹಾಗೂ ಕಾಂಗ್ರೆಸ್‌ ಗೆ ನಾಲ್ಕು ಸ್ಥಾನಗಳು  ಲಭ್ಯವಾಗಲಿವೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಿಗೆ ಮೂರೂ ಪಕ್ಷಗಳು ವಿಧಾನಪರಿಷತ್‌ ಸದಸ್ಯತ್ವ ನೀಡುವುದಾಗಿ ಹೇಳಿ ಸಮಾಧಾನಪಡಿಸಿದ್ದು, ಇದೀಗ ಆ ಸ್ಥಾನಗಳಿಗೆ ಲಾಬಿ ಪ್ರಾರಂಭವಾಗಲಿದೆ. ಬಿಜೆಪಿ ಯಲ್ಲಿ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್‌.ವೀರಯ್ಯ, ರಘು ನಾಥ್‌ರಾವ್‌ ಮಲ್ಕಾಪುರೆ ಮತ್ತೂಂದು ಅವಕಾಶಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕಾಂಗ್ರೆಸ್‌ನಲ್ಲಿ ಎಂ.ಆರ್‌.ಸೀತಾರಾಂ, ಸಿ.ಎಂ. ಇಬ್ರಾಹಿಂ, ಗೋವಿಂದರಾಜು ಮತ್ತೂಂದು ಅವಧಿಗೆ ಮುಂದುವರಿಯಲು ಒಲವು ಹೊಂದಿದ್ದಾರೆ. ಜತೆಗೆ, ಮಾಜಿ ಮೇಯರ್‌ ರಾಮಚಂದ್ರಪ್ಪ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಸೇರಿ 1 ಡಜನ್‌ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್‌ನಲ್ಲಿ ಬಿ.ಎಂ.ಫ‌ರೂಕ್‌ ಅವರನ್ನು ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ಪ್ರಸ್ತಾಪ ಇರುವುದರಿಂದ ಅವರ ಹಾದಿ ಸುಗಮವಾಗಬಹುದು. ಮತ್ತೂಂದು ಸ್ಥಾನ ಉಳಿಯಲಿದೆ.

ಪದವೀಧರ, ಶಿಕ್ಷಕರ ಕ್ಷೇತ್ರಗಳಿಂದ ಜೂ.8ಕ್ಕೆ ಚುನಾವಣೆ: ಈ ಮಧ್ಯೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ ಆರು ಮಂದಿಯ ಅವಧಿ ಕೂಡ ಜೂ.21ಕ್ಕೆ ಮುಗಿಯಲಿದ್ದು, ಈಗಾಗಲೇ ಜೂ.8ಕ್ಕೆಚುನಾವಣೆ ನಿಗದಿಯಾಗಿದೆ. ಜೆಡಿಎಸ್‌ನ ರಮೇಶ್‌ ಬಾಬು, ಮರಿತಿಬ್ಬೇಗೌಡ, ಬಿಜೆಪಿಯ ಗಣೇಶ್‌ ಕಾರ್ಣಿಕ್‌, ಶಂಕರಮೂರ್ತಿ, ರಾಮಚಂದ್ರಗೌಡ, ಅಮರನಾಥ ಪಾಟೀಲ್‌ ಅವರು ನಿವೃತ್ತಿಯಾಗಲಿದ್ದಾರೆ. ಆ ಪೈಕಿ ರಮೇಶ್‌ಬಾಬು, ಮರಿತಿಬ್ಬೇಗೌಡ, ಗಣೇಶ್‌ ಕಾರ್ಣಿಕ್‌ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಇದಾದ ನಂತರ, ರಾಜ್ಯ ವಿಧಾನಸಭೆಯಿಂದ ನಾಮಕರಣಗೊಂಡಿರುವಎಂ.ಡಿ.ಲಕ್ಷ್ಮಿನಾರಾಯಣ, ತಾರಾ ಹಾಗೂ ಕೆ.ಬಿ.ಶಾಣಪ್ಪ ಅವರು ಆಗಸ್ಟ್‌ನಲ್ಲಿ
ನಿವೃತ್ತಿಯಾಗಲಿದ್ದಾರೆ. ಆ ಪೈಕಿ, ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎಂ.ಡಿ.ಲಕ್ಷ್ಮಿ ನಾರಾಯಣ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ಪರಿಷತ್‌ ಚುನಾವಣೆಗೆ ನಾಳೆ ಅಧಿಸೂಚನೆ ಪ್ರಕಟ 
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ದ್ವೆ„ವಾರ್ಷಿಕ ಚುನಾವಣೆಗೆ ಮೇ 24 ರಂದು
ಅಧಿಸೂಚನೆ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಮೇ 31 ಕೊನೇ ದಿನಾಂಕವಾಗಿದ್ದು, ಜೂ.1ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಜೂ. 4 ಕೊನೇ ದಿನ. ಜೂ.11ಕ್ಕೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಪರಿಷತ್‌ನಲ್ಲಿ ಸಂಖ್ಯಾ ಬಲ ಏರು-ಪೇರು
ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ವಿ.ಸೋಮಣ್ಣ, ಕೆ.ಎಸ್‌. ಈಶ್ವರಪ್ಪ, ಡಾ.ಜಿ. ಪರಮೇಶ್ವರ್‌ ಶಾಸಕರಾಗಿ ಆಯ್ಕೆಯಾಗಿರು ವುದರಿಂದ ಆ ನಾಲ್ಕು ಸ್ಥಾನಗಳು ತೆರವಾಗಲಿವೆ. ಅದಕ್ಕೂ ಚುನಾವಣೆ ನಡೆಯಬೇಕಿದೆ. ಬಸನಗೌಡ ಪಾಟೀಲ್‌ ಅವರು ಸ್ಥಳೀಯ ಸಂಸ್ಥೆಗಳಿಂದ ಹಾಗೂ ಉಳಿದ ಮೂವರು ವಿಧಾನಸಭೆಯಿಂದ ನೇಮಕಗೊಂಡವರಾಗಿದ್ದಾರೆ. ಒಟ್ಟಾರೆ 75 ಸಂಖ್ಯಾಬಲದ
ವಿಧಾನಪರಿಷತ್‌ನಲ್ಲಿ 23 ಸ್ಥಾನಗಳು ಖಾಲಿಯಾಗಿ, ಭರ್ತಿಯಾಗಲಿವೆ. ಇದರಿಂದಾಗಿ ಮೂರೂ ಪಕ್ಷಗಳ ಬಲಾಬಲದಲ್ಲೂ ಏರು-ಪೇರಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next