ಸಿಡ್ನಿ: ಮುಂದಿನ ವರ್ಷದ ಐಪಿಎಲ್ ಭಾರತದಲ್ಲಿ ನಡೆಯುತ್ತದೆಯೋ, ಇಲ್ಲವೋ ಅನ್ನುವ ಗೊಂದಲವೇ ಇನ್ನೂ ಬಗೆಹರಿದಿಲ್ಲ. ಅಷ್ಟರಲ್ಲಿ ಐಪಿಎಲ್‌ಗೆ ಇನ್ನೊಂದು ಸಣ್ಣ ಆಘಾತ ಎದುರಾಗಿದೆ.
ಈ ಬಾರಿ ಆಸ್ಟ್ರೇಲಿಯದ ಕೆಲವು ಮುಖ್ಯ ಆಟಗಾರರು ಪೂರ್ಣ ಪ್ರಮಾಣದಲ್ಲಿ ಐಪಿಎಲ್‌ಗೆ ಲಭ್ಯರಾಗುವುದಿಲ್ಲ. ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇದು ಖಚಿತವಾಗಿದೆ.
ಮಾ. 29ರಿಂದ ಮೇ 19ರ ವರೆಗೆ 2019ರ ಐಪಿಎಲ್ ನಡೆಯಲಿದೆ. ಮೇ 30ರಿಂದ ಏಕದಿನ ವಿಶ್ವಕಪ್ ಶುರುವಾಗಲಿದೆ. ಆದ್ದರಿಂದ ಐಪಿಎಲ್ ಮುಖ್ಯಹಂತದಲ್ಲಿರುವ ಮೇ ತಿಂಗಳಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ತರಬೇತಿ ಶಿಬಿರಗಳನ್ನು ನಡೆಸಲಿದೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ 15 ಆಸೀಸ್ ಆಟಗಾರರು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳ್ಳಲೇಬೇಕು. ಅದಲ್ಲದೇ ಆಸ್ಟ್ರೇಲಿಯದ ದೇಶಿ ಕ್ರಿಕೆಟ್ ಕೂಟ ಶೆಫೀಲ್ಡ್‌ಶೀಲ್ಡ್ ಫೈನಲ್ ಎ. ಒಂದಕ್ಕೆ ಮುಗಿಯಲಿದೆ. ಫೈನಲ್‌ನಲ್ಲಿ ಭಾಗವಹಿಸುವ ಆಟಗಾರರು ಐಪಿಎಲ್‌ನಲ್ಲೂ ಸ್ಥಾನ ಪಡೆದಿದ್ದರೆ ಅದನ್ನು ಮುಗಿಸಿಕೊಂಡೇ ಐಪಿಎಲ್‌ಗೆ ತೆರಳಬೇಕು ಎನ್ನುವುದು ಕ್ರಿಕೆಟ್ ಆಸ್ಟ್ರೇಲಿಯ ಷರತ್ತು.
ಈ ಎಲ್ಲ ನಿಯಮಗಳನ್ನು ಪಾಲಿಸಿದರೆ ಬಹುತೇಕ ಆಸ್ಟ್ರೇಲಿಯದ ತಾರಾ ಆಟಗಾರರ ಗೈರಿನಲ್ಲೇ ಐಪಿಎಲ್ ನಡೆಯಬೇಕಾಗುತ್ತದೆ. ಸಮಾಧಾನದ ಸಂಗತಿಯೆಂದರೆ ನ್ಯೂಜಿಲೆಂಡ್‌ನ ಅಷ್ಟೂ ಆಟಗಾರರು ಪೂರ್ಣ ಐಪಿಎಲ್‌ಗೆ ಲಭ್ಯರಿರುತ್ತಾರೆ ಎನ್ನುವುದು ಈಗಾಗಲೇ ಖಚಿತವಾಗಿದೆ.