Advertisement

ಪೊಲೀಸ್‌ ಮಾಹಿತಿದಾರನ ಕೊಲೆಗೈದ ಏಳು ಮಂದಿಯ ಬಂಧನ

11:59 AM Oct 03, 2017 | |

ಬೆಂಗಳೂರು: ಸಿಗರೇಟ್‌ ಸೇದಬೇಡಿ ಎಂದು ಹೇಳಿದ್ದಕ್ಕೆ ಹರೀಶ್‌ ಎಂಬ ಪೊಲೀಸ್‌ ಮಾಹಿತಿದಾರನನ್ನು ಕೊಂದ ಇಬ್ಬರು ವಿದ್ಯಾರ್ಥಿಗಳು ಸೇರಿ ಏಳು ಆರೋಪಿಗಳನ್ನು ಅಶೋಕ್‌ ನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ಇಂದಿರಾನಗರದ ಅಂಬೇಡ್ಕರ್‌ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ವೆಂಕಟೇಶ್‌ (21), ಪಿಯುಸಿಯಲ್ಲಿ ಫೇಲಾಗಿರುವ ಜೆರಾಲ್ಡ್‌ ಆರೋಗ್ಯ ರಾಜ್‌ (19), ಖಾಸಗಿ ಕಂಪನಿ ನೌಕರರಾದ ಕಿರಣ್‌ (23), ವಿಕ್ರಮ್‌ (20), ಕರಿ ವಿಜಯ್‌ (24), ಕೋಟಾಂಗುಚ್ಚಿ ವಿಜಯ್‌ (23) ಮತ್ತು ಜೇಮ್ಸ್‌ ಕುಮಾರ್‌ (26) ಬಂಧಿತರು.

ಆರೋಪಿಗಳು ಸೆ.30ರಂದು ರಾತ್ರಿ ಶಾಂತಿನಗರದ ಫ‌ುಡ್‌ ಗೋಡೌನ್‌ ಬಳಿಯ ನಿವಾಸಿ ಹರೀಶ್‌ ಎಂಬುವವರನ್ನು, ಅವರ ಮನೆ ಎದುರೇ ಮಾರಕಾಸ್ತ್ರಗಳಿಂದ ಇರಿದು, ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದರು. ಈ ಪೈಕಿ ಜೆರಾಲ್ಡ್‌ ಮತ್ತು ಜೇಮ್ಸ್‌ ಕುಮಾರ್‌ ಪ್ರಮುಖ ಆರೋಪಿಗಳಾಗಿದ್ದು, ಇತರರು ಇವರ ಸೂಚನೆ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಅಂಬೇಡ್ಕರ್‌ ಮತ್ತು ಎಲ್‌.ಆರ್‌.ನಗರದ ನಿವಾಸಿಗಳಾಗಿದ್ದು, ಸೆ.30ರಂದು ವಿಜಯದಶಮಿ ಹಬ್ಬದ ಪ್ರಯುಕ್ತ ಶಾಂತಿನಗರದ ಸಂಬಂಧಿಕರ ಮನೆಗೆ ಬಂದಿದ್ದರು. ಇದೇ ವೇಳೆ ಇಲ್ಲಿನ ಹರೀಶ್‌ ಮನೆ ಪಕ್ಕದ ಫ‌ುಡ್‌ಗೊಡೌನ್‌ ಬಳಿ ಜೇಮ್ಸ್‌ ಮತ್ತು ಜೆರಾಲ್ಡ್‌ ಸಿಗರೇಟ್‌ ಸೇದುತ್ತಿದ್ದರು. ಇದನ್ನು ಪ್ರಶ್ನಿಸಿದ ಹರೀಶ್‌, “ಇಲ್ಲಿ ಸಿಗರೇಟ್‌ ಸೇದಬೇಡಿ’ ಎಂದು ಸೂಚಿಸಿದ್ದರು.

ಇರಿಂದ ಆಕ್ರೋಶಗೊಂಡ ಆರೋಪಿಗಳು ಹರೀಶ್‌ ಮ¤ತು ಸ್ನೇಹಿತರ ಜತೆ ಜಗಳವಾಡಿದ್ದರು. ಈ ವೇಳೆ ಜೆರಾಲ್ಡ್‌ ಮೇಲೆ ಹರೀಶ್‌ ಸ್ನೇಹಿತರು ಹಲ್ಲೆ ನಡೆಸಿದ್ದರು. ಬಳಿಕ ಸ್ಥಳದಿಂದ ಹೊರಟು ಹೋಗಿದ್ದ ಆರೋಪಿಗಳು, ಕೆಲ ಹೊತ್ತಿನ ಬಳಿಕ 20ಕ್ಕೂ ಹೆಚ್ಚು ಸಹಚರರನ್ನು ಕರೆತಂದು ಹರೀಶ್‌ ಮನೆಯೆದುರು ಸೇರಿದ್ದಾರೆ.

Advertisement

ಈ ವೇಳೆ ಪಕ್ಕದ ರಸ್ತೆಯಲ್ಲಿ ವಿಜಯದಶಮಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹರೀಶ್‌ ಕಡೆ ಕೈ ತೋರಿಸಿದ ಜೆರಾಲ್ಡ್‌ ಮತ್ತು ಜೇಮ್ಸ್‌, ಆತನ ಮೇಲೆ ಹಲ್ಲೆ ನಡೆಸುವಂತೆ ಸಹಚರರಿಗೆ ಸೂಚಿಸಿದ್ದಾರೆ. ಈ ವೇಳೆ ಹರೀಶ್‌ ಸ್ನೇಹಿತರ ಬಳಿಯೇ ಹೋದ ಆರೋಪಿಗಳು, “ಹರೀಶ್‌ ಅಂದ್ರೆ ಯಾರು? ಆತ ಎಲ್ಲಿದ್ದಾನೆ?’ ಎಂದು ವಿಚಾರಿಸಿದ್ದಾರೆ. ಇದರಿಂದ ಅನುಮಾನಗೊಂಡ ಹರೀಶ್‌ರ ಸ್ನೇಹಿತರು ಎಲ್ಲರನ್ನು ಹಿಡಿದು ವಿಚಾರಿಸಿ, ಥಳಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡಿದ್ದ ಆರೋಪಿಗಳು, ಸ್ಥಳದಲ್ಲಿ ಬಿಟ್ಟು ಹೋಗಿದ್ದ ಬೈಕ್‌ಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಮಧ್ಯರಾತ್ರಿ ಹೊತ್ತಲ್ಲಿ ವಾಪಸ್‌ ಬಂದು, ಸೋದರ ಸಂಬಂಧಿಗಳ ಜತೆ ಕುಳಿತಿದ್ದ ಹರೀಶ್‌ ಜತೆ ಜಗಳ ತೆಗೆದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಚಾಕು, ಇತರ ಮಾರಕಾಸ್ತ್ರ ತಂದು ಹರೀಶ್‌ ಹಾಗೂ ಆತನ ಜತೆಗಿದ್ದ ಸೋದರ ಸಂಬಂಧಿ ಜಗ್ಗಿ ಮೇಲೆ ಮುಗಿಬಿದ್ದಿದ್ದಾರೆ.

ಜಗ್ಗಿ ಸಣ್ಣ ಪುಟ್ಟ ಗಾಯಗೊಳೊಂದಿಗೆ ತಪ್ಪಿಸಿಕೊಂಡಿದ್ದು, ಹರೀಶ್‌ರನ್ನು ಸುತ್ತುವರಿದ ದುಷ್ಕರ್ಮಿಗಳು ಮನಬಂದ್ದಂತೆ ಹೊಟ್ಟೆ, ಎದೆಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದಿದ್ದ ಹರೀಶ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದರು. ಪೊಲೀಸ್‌ ಮಾಹಿತಿದಾರರಾಗಿದ್ದ ಹರೀಶ್‌, ಬಡಾವಣೆಯಲ್ಲಿ ನಡೆಯುತ್ತಿದ್ದ ಗಲಾಟೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೇವಲ ಒಂದು ಗಂಟೆಯಲ್ಲಿ ಕೃತ್ಯ!: ಕೇವಲ ಒಂದು ಗಂಟೆಯಲ್ಲಿ ಇಡೀ ಘಟನೆ ನಡೆದಿದೆ. 20, 25 ನಿಮಿಷಗಳ ಅಂತರದಲ್ಲಿ ಮಾತಿನ ಚಕಮಕಿ, ಹಲ್ಲೆ ಹಾಗೂ ಕೊಲೆ ನಡೆದಿದೆ. ಅಲ್ಲದೇ.ಬಂಧಿತ ಆರೋಪಿಗಳು ಕೃತ್ಯಕ್ಕೂ ಮೊದಲು ಬಾರ್‌ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದರು. ಬಳಿಕ ಹರೀಶ್‌ ಮನೆ ಬಳಿ ಸಿಗರೇಟ್‌ ಸೇದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next