Advertisement

ಏಳು ಮಂದಿ ಆಟ: ಹತ್ತು ಜನರಿಗೆ ಸಂಕಟ!

11:29 PM May 07, 2019 | Team Udayavani |

ಸುಳ್ಯ: ಡಿಸಿಸಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವ ಪಕ್ಷದ ಅಭ್ಯರ್ಥಿ ವಿರುದ್ಧ ಅಡ್ಡ ಮತದಾನ ಮಾಡಿದ ಸಹಕಾರ ಭಾರತಿ ಬೆಂಬಲಿತ ಏಳು ಮಂದಿ ತಪ್ಪು ಒಪ್ಪಿಕೊಳ್ಳಲು ಮುಂದಾಗದ ಕಾರಣ ಉಳಿದ 10 ಮಂದಿಗೂ ಸಂಕಟ ಎದುರಾಗಿದೆ.

Advertisement

ಚುನಾವಣೆಯಲ್ಲಿ ಮತದಾನಕ್ಕೆ ಅರ್ಹತೆ ಪಡೆದ ಎಲ್ಲ 17 ಮಂದಿ ತಾವು ಪ್ರತಿನಿಧಿಸುತ್ತಿರುವ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ, ನಿರ್ದೇಶಕ ಈ ಎರಡೂ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುವಂತೆ ಬಿಜೆಪಿ ಮಂಡಲ ಸಮಿತಿ ಖಡಕ್‌ ಸೂಚನೆ ನೀಡಿದೆ. ಪಕ್ಷಕ್ಕೆ ಉಂಟಾಗಿರುವ ಮುಜುಗರ ತಪ್ಪಿಸಿಕೊಳ್ಳಲು ಕಠಿನ ಕ್ರಮ ಕೈಗೊಂಡಿದೆ.

ರಾಜೀನಾಮೆ ಸಲ್ಲಿಸಲು 17 ಮಂದಿಗೂ ಪತ್ರ
ಆಣೆ-ಪ್ರಮಾಣದಲ್ಲಿಯೂ ಸತ್ಯ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಪಕ್ಷ ಈ ತೀರ್ಮಾನಕ್ಕೆ ಬಂದಿದೆ. ಏಳು ಮಂದಿ ಅಡ್ಡ ಮತದಾರರನ್ನು ಪಕ್ಷ ಗುಪ್ತ ಸರ್ವೆ ಮೂಲಕ ಗುರುತಿಸಿದ್ದರೂ ಅವರ ಪೈಕಿ ಐದು ಮಂದಿ ಕಾರಣಿಕ ಸ್ಥಳದಲ್ಲಿ ತಪ್ಪೇ ಮಾಡಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಇಬ್ಬರು ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಉಳಿದ ಐದು ಮಂದಿ ವಿರುದ್ಧ ಯಾವ ಆಧಾರದಲ್ಲಿ ಕ್ರಮ ಕೈಗೊಳ್ಳುವುದು ಎಂಬ ಬಗ್ಗೆ ಜಿಜ್ಞಾಸೆ ಉಂಟಾಗಿತ್ತು. ಹೀಗಾಗಿ ಡಿಸಿಸಿ ಬ್ಯಾಂಕ್‌ ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಅರ್ಹತೆ ಪಡೆದ 17 ಮಂದಿಯೂ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಪಕ್ಷ ನೋಟಿಸ್‌ ಕಳುಹಿಸಿದೆ. ಕೆಲವರಿಗೆ ಈ ನೋಟಿಸ್‌ ಸಿಕ್ಕಿದೆ ಎಂದು ಮುಖಂಡರು ಮಾಹಿತಿ ನೀಡಿದ್ದಾರೆ.

ಆಣೆ ಪ್ರಮಾಣದ ಉದ್ದೇಶ ಇರಲಿಲ್ಲ
ಅಡ್ಡ ಮತದಾರರನ್ನು ಒಪ್ಪಿಸುವ ಸಲುವಾಗಿ ಕೇರಳದ ಪ್ರಸಿದ್ಧ ಕಾರಣಿಕ ಸ್ಥಳದಲ್ಲಿ ಪ್ರಮಾಣ ಬರಬೇಕು ಎಂದು ಎಲ್ಲ ಸದಸ್ಯರಿಗೂ ಪಕ್ಷ ಸೂಚನೆ ನೀಡಿತ್ತು. ಆಣೆಗೆ ಭಯಪಟ್ಟು ಅಡ್ಡ ಮತದಾರರು ಸ್ವಯಂಪ್ರೇರಿತರಾಗಿ ತಪ್ಪು ಒಪ್ಪಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಈ ತಂತ್ರಗಾರಿಕೆ ಹೆಣೆಯಲಾಗಿತ್ತು. ಆದರೆ, ಯಾವುದೇ ಸದಸ್ಯರನ್ನು ಆಣೆ ಪ್ರಮಾಣ ಮಾಡಿಸುವ ಉದ್ದೇಶ ಪಕ್ಷಕ್ಕೆ ಇರಲಿಲ್ಲ. ಆದರೆ ಸಭೆಯಲ್ಲಿ 17 ಮಂದಿ ಪೈಕಿ 15 ಮಂದಿ ತಾವು ಆಣೆ ಪ್ರಮಾಣಕ್ಕೆ ಸೈ ಎಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಆಣೆ ಪ್ರಮಾಣ ಅನಿವಾರ್ಯವೆನಿಸಿತ್ತು. ಪ್ರಮಾಣಕ್ಕೆ ಹೊರಡುವ ಮೊದಲು ಆಣೆ-ಪ್ರಮಾಣದಿಂದ ಆಗಬಹುದಾದ ಅನಾಹುತಗಳ ಬಗ್ಗೆಯೂ ಎಲ್ಲ ಸದಸ್ಯರಿಗೆ ಮನವರಿಕೆ ಮಾಡಲಾಗಿತ್ತು. ಆದರೆ ಇದಕ್ಕೆ ಯಾರೂ ಜಗ್ಗಲಿಲ್ಲ. ಕೊನೆಗೆ 15 ಸದಸ್ಯರು ಆಣೆ ಮಾಡಿ, “ತಪ್ಪೇ ಮಾಡಿಲ್ಲ’ ಎಂದು ಪ್ರಮಾಣ ಮಾಡಿದರು ಎಂದು ಪಕ್ಷದ ಪ್ರಮುಖ ಮುಖಂಡರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ನೋಟಿಸ್‌ಗೆ ಅಸಮಾಧಾನ
ಏಳು ಮಂದಿ ತಪ್ಪು ಮಾಡಿ 17 ಮಂದಿಯು ರಾಜೀನಾಮೆ ನೀಡಬೇಕೆಂಬ ಪಕ್ಷದ ಸೂಚನೆಗೆ ಕೆಲವೆಡೆ ಅಸಮಾಧಾನ ವ್ಯಕ್ತವಾಗಿರುವ ಮಾಹಿತಿ ಇದೆ. ಈ ನಿರ್ಧಾರದಿಂದ ಯಾರು ತಪ್ಪು ಮಾಡಿದ್ದಾರೆ ಎಂದು ಗೊತ್ತಾಗುವುದಿಲ್ಲ. ಅಡ್ಡ ಮತದಾರರು ಯಾರೆಂದು ಬಹಿರಂಗವಾಗುವುದಿಲ್ಲ. ಬೇರೆಯವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಇದರ ಬದಲು ಸರ್ವೆ ನಡೆಸಿ ಗುರುತಿಸಲಾದ ಐದು ಮಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂಬ ಅಭಿಪ್ರಾಯ ಕೆಲ ಕಾರ್ಯಕರ್ತರಿಂದ ಕೇಳಿ ಬಂದಿದೆ.

Advertisement

ಏನಿದು ಅಡ್ಡ ಮತದಾನ?
ತಾಲೂಕಿನ 23 ಸಹಕಾರ ಸಂಘಗಳ ಪೈಕಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 17 ಹಾಗೂ ಕಾಂಗ್ರೆಸ್‌ ಬೆಂಬಲಿತ 6 ಮಂದಿ ಮತದಾರರಿದ್ದರು. ಇದರಿಂದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ವೆಂಕಟ್‌ ದಂಬೆಕೋಡಿ ಅವರ ಗೆಲುವು ನಿಶ್ಚಿತ ಎಂದು ಭಾವಿಸಲಾಗಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಬಳಗದ ಬೆಂಬಲಿತ ಅಭ್ಯರ್ಥಿ, ಕಾಂಗ್ರೆಸ್‌ ಮುಖಂಡ ದೇವರಾಜ್‌ ಕೆ.ಎಸ್‌. 13 ಮತ ಪಡೆದು ಗೆಲುವು ಸಾಧಿಸಿದ್ದರು. ವೆಂಕಟ್‌ 10 ಮತಗಳನ್ನಷ್ಟೇ ಗಳಿಸಿದ್ದರು. ಇದರಿಂದ ಸಹಕಾರ ಭಾರತಿಯ 7 ಮಂದಿ ಅಡ್ಡ ಮತದಾನ ಮಾಡಿರುವುದು ಸ್ಪಷ್ಟವಾಗಿತ್ತು.

ವೆಂಕಟ ದಂಬೆಕೋಡಿ ರಾಜೀನಾಮೆ!
ಡಿಸಿಸಿ ಬ್ಯಾಂಕ್‌ ಆಡಳಿತ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಡ್ಡ ಮತದಾನದ ಕಾರಣದಿಂದ ಪರಾಜಿತಗೊಂಡಿದ್ದ ವೆಂಕಟ್‌ ದಂಬೆಕೋಡಿ ಅವರು ಗುತ್ತಿಗಾರು ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಕಳೆದ ಕೂಡಲೇ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸ್ವ ಪಕ್ಷದ 17 ಮತ ಇದ್ದರೂ ಅಡ್ಡ ಮತದಾನದಿಂದ ನನಗೆ ಸೋಲಾಗಿದೆ. ನಾವು ನಮ್ಮ ಪಕ್ಷವನ್ನು ದೇವರಂತೆ ಕಾಣುತ್ತೇವೆ. ನಮ್ಮ ಹಿರಿಯರು ನಮಗೆ ಇದನ್ನೇ ಹೇಳಿಕೊಟ್ಟಿದ್ದಾರೆ. ಹೀಗಾಗಿ ನಾನು ಅಧ್ಯಕ್ಷರಿಗೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next