ಹೈದರಾಬಾದ್: ತೆಲಂಗಾಣ ಪೊಲೀಸರ ಎನ್ *ಕೌಂಟರ್ ನಲ್ಲಿ ಏಳು ಮಂದಿ ನಕ್ಸಲೀಯರು ಹತರಾಗಿರುವ ಘಟನೆ ಮುಲುಗು ಜಿಲ್ಲೆಯಲ್ಲಿ ಭಾನುವಾರ (ಡಿ.01) ಬೆಳಗ್ಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಕಳೆದ ವಾರ ಮಾವೋವಾದಿಗಳು ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಿ ಇಬ್ಬರು ಬುಡಕಟ್ಟು ವ್ಯಕ್ತಿಗಳನ್ನು ಕೊಂ*ದಿದ್ದರು. ಈ ಘಟನೆ ನಂತರ ಚಾಲ್ಪಕ್ ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿತ್ತು.
ಎನ್ ಕೌಂಟರ್ ನಲ್ಲಿ ಮಾವೋವಾದಿ ಸಂಘಟನೆಯ ಯೆಲ್ಲಾಂಡು ನರಸಂಪೇಟೆ ಪ್ರದೇಶ ಸಮಿತಿಯ ಕಮಾಂಡರ್ ಭದ್ರು(35ವರ್ಷ) ಸೇರಿದಂತೆ ಏಳು ನಕ್ಸಲೀಯರು ಕೊನೆಯುಸಿರೆಳೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ಪೊಲೀಸರ ಗುಂಡಿನ ದಾಳಿಯಲ್ಲಿಇಗೊಲಾಪು ಮಲ್ಲಯ್ಯ(43ವರ್ಷ), ಮುಸ್ಸಾಕಿ ದೇವಲ್ (22ವರ್ಷ), ಮುಸ್ಸಾಕಿ ಜಮುನಾ (23ವರ್ಷ), ಜೈಸಿಂಗ್ (25ವರ್ಷ), ಕಿಶೋರ್ (22ವರ್ಷ0 ಹಾಗೂ ಕಾಮೇಶ್ (23ವರ್ಷ) ಮೃತಪಟ್ಟ ನಕ್ಸಲೀಯರಾಗಿದ್ದಾರೆ.
ನಕ್ಸಲೀಯರ ಬಳಿ ಎಕೆ 47, G3 ಮತ್ತು ಐಎನ್ ಎಸ್ ಎಎಸ್ ರೈಫಲ್ಸ್ ಇದ್ದಿರುವುದಾಗಿ ಪೊಲೀಸರು ತಿಳಿಸಿದ್ದು, ಅವುಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಕೂಂಬಿಂಗ್ ಕಾರ್ಯಾಚರಣೆ ವೇಳೆ ನಕ್ಸಲೀಯರು ಮುಖಾಮುಖಿಯಾಗಿದ್ದು, ಗುಂಡಿನ ದಾಳಿ ನಡೆಸಿದ್ದರು.
ಈ ಸಂದರ್ಭದಲ್ಲಿ ಶರಣಾಗುವಂತೆ ಸೂಚಿಸಿದಾಗ, ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ಎನ್ ಕೌಂಟರ್ ನಲ್ಲಿ ಏಳು ಮಂದಿ ನಕ್ಸಲೀಯರು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ನವೆಂಬರ್ 21ರಂದು ಪೆರೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಉಯಿಕಾ ಅರ್ಜುನ್ ರಮೇಶ್ ಮತ್ತು ಉಯಿಕಾ ರಮೇಶ್ ಎಂಬವರನ್ನು ಪೊಲೀಸ್ ಮಾಹಿತಿದಾರರೆಂದು ಆರೋಪಿಸಿ ನಕ್ಸಲೀಯರು ಹ*ತ್ಯೆಗೈದಿದ್ದರು.