Advertisement

ಏಳು ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ; ಸಚಿವ ಮುರುಗೇಶ್‌ ನಿರಾಣಿ ವಿಶ್ವಾಸ

12:10 AM Nov 01, 2022 | Team Udayavani |

ಬೆಂಗಳೂರು: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆಯುತ್ತಿದ್ದು, ಏಳು ಲಕ್ಷ ಕೋಟಿ ರೂ.ವರೆಗೂ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನ.2ರಿಂದ 4ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ “ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ಹಾವಳಿ ನಂತರ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮೊದಲ ಹೂಡಿಕೆದಾರರ ಸಮಾವೇಶ ಇದಾಗಿದೆ.

ಹಾಗಾಗಿ, ಆರಂಭದಲ್ಲಿ “ನಿರೀಕ್ಷಿತ ಸ್ಪಂದನೆ ಸಿಗುತ್ತದೆಯೇ’ ಎಂಬ ಅಳುಕು ಇತ್ತು. ಆದರೆ, ದಾವೋಸ್‌ವೊಂದರಲ್ಲೇ ನಮಗೆ 58 ಸಾವಿರ ಕೋಟಿ ಹೂಡಿಕೆಯ ಭರವಸೆ ಸಿಕ್ಕಿತು. ಅದಲ್ಲದೆ, ದುಬೈ ಎಕ್ಸ್‌ಪೋ, ಅಮೆರಿಕ, ಯುರೋಪ್‌, ಜರ್ಮನಿ, ದೆಹಲಿ, ಮುಂಬೈ, ಹೈದರಾಬಾದ್‌ ಭೇಟಿ ಸಂದರ್ಭದಲ್ಲಿ ಕಂಡುಬಂದ ಉತ್ಸಾಹ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿತು. ಹಾಗಾಗಿ, ಹೂಡಿಕೆ ಗುರಿ ಐದು ಲಕ್ಷ ಕೋಟಿ ಅನಾಯಾಸವಾಗಿ ಮೀರಲಿದೆ ಎಂದು ಹೇಳಿದರು.

ಇನ್ನು, ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ, ಬಿರ್ಲಾ, ಅನಿಲ್‌ ಅಗರ್‌ವಾಲ್‌, ಹಿಂದುಜಾ ಸೇರಿದಂತೆ ದಿಗ್ಗಜರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಅವರ್ಯಾರೂ ಇನ್ನೂ ತಮ್ಮ ಹೂಡಿಕೆ ಬಗ್ಗೆ ಬಹಿರಂಗಪಡಿಸಿಲ್ಲ. ಸ್ವತಃ ಆ ಉದ್ಯಮಿಗಳು ವೇದಿಕೆಯಲ್ಲಿ ಘೋಷಣೆ ಮಾಡಲಿದ್ದಾರೆ. ಹೀಗಾಗಿ, ಹೂಡಿಕೆಯು ನಿರೀಕ್ಷೆ ಮೀರಲಿದೆ. ಅಷ್ಟೇ ಅಲ್ಲ, ಈ ಒಡಂಬಡಿಕೆಗಳ ಅನುಷ್ಠಾನ ಪ್ರಮಾಣ ಕೂಡ ಹಿಂದೆಂದಿಗಿಂತ ಹೆಚ್ಚು ಅಂದರೆ ಶೇ.70-75ರಷ್ಟು ಇರಲಿದೆ ಎಂದೂ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಆಚೆ ಹೆಚ್ಚು ಹೂಡಿಕೆ ನಿರೀಕ್ಷೆ
ಸಮಾವೇಶದಲ್ಲಿ ಒಟ್ಟಾರೆ 5 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ಶೇ. 90ರಷ್ಟು ಬೆಂಗಳೂರು ಆಚೆಗೆ (ಬಿಯಾಂಡ್‌ ಬೆಂಗಳೂರು) ಹೂಡಿಕೆಯಾಗಲಿದೆ. ಇದರಿಂದ ರಾಜ್ಯದ ಇತರೆ ನಗರಗಳಲ್ಲಿರುವ ಜನರಿಗೆ ಉದ್ಯೋಗ ದೊರೆಯಲಿದೆ. 5 ಲಕ್ಷ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದೆ. ನ.4ರಂದು ನಡೆಯಲಿರುವ ಸಮಾರೋಪದಲ್ಲಿ ಹೂಡಿಕೆ ಮತ್ತು ಒಡಂಬಡಿಕೆಗಳ ಪೂರ್ಣ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

Advertisement

ಸಮಾವೇಶಕ್ಕೆ ಕಳೆದ ಮೂರು ತಿಂಗಳಿನಿಂದ ಸಿದ್ಧತೆ ನಡೆಸಿದ್ದು, ಸ್ವಿಜರ್ಲೆಂಡ್‌ನ‌ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ಸಮಾವೇಶ ಫ್ರಾನ್ಸ್‌, ನೆದರ್ಲೆಂಡ್‌, ಜಪಾನ್‌, ಜರ್ಮನಿ, ದಕ್ಷಿಣ ಕೊರಿಯಾ ಸೇರಿ ಹಲವು ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದ್ದು, ಹೂಡಿಕೆ ಮಾಡಲಿವೆ ಎಂದ ಅವರು, ಸಮಾವೇಶಕ್ಕಾಗಿ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತ 20 ಸಾವಿರ ಮತ್ತು ಇತರೆ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಪ್ರದೇಶ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಸಿರು ಇಂಧನಕ್ಕೇ 2 ಲಕ್ಷ ಕೋಟಿ ಹೂಡಿಕೆ
ಸಮಾವೇಶದಲ್ಲಿ ಸೋಲಾರ್‌, ಗ್ರೀನ್‌ ಹೈಡ್ರೋಜನ್‌ ಸೇರಿ “ಗ್ರೀನ್‌ ಎನರ್ಜಿ’ಗೆ (ಹಸಿರು ಇಂಧನ) ಸುಮಾರು 2 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ರಾಜ್ಯದ ಜಿಂದಾಲ್‌ ಸಂಸ್ಥೆಯು 40 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ ಎಂದೂ ಸಚಿವ ನಿರಾಣಿ ತಿಳಿಸಿದರು.

ನಾಳೆ ಸಮಾವೇಶಕ್ಕೆ ಮೋದಿ ಚಾಲನೆ
ನ.2ರಂದು ಬೆಳಗ್ಗೆ 10 ಗಂಟೆಗೆ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ದೊರೆಯಲಿದೆ. 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ವರ್ಚುವಲ್‌ ವೇದಿಕೆಯಲ್ಲಿ ಮಾತನಾಡಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ರಾಜೀವ್‌ ಚಂದ್ರಶೇಖರ್‌, ಪ್ರಹ್ಲಾದ ಜೋಷಿ ಸೇರಿದಂತೆ ಸಚಿವರು, ಉದ್ದಿಮೆದಾರರು ಪಾಲ್ಗೊಳ್ಳಲಿದ್ದಾರೆ.

“ಬಿಲ್ಡ್‌ ಫಾರ್‌ ದಿ ವರ್ಲ್ಡ್’ ಪರಿಕಲ್ಪನೆಯೊಂದಿಗೆ ಮೂರು ದಿನಗಳ ಸಮಾವೇಶ ನಡೆಸಲಾಗುತ್ತಿದೆ. ನ.4ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ ಎಂದೂ ಸಚಿವ ನಿರಾಣಿ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next