Advertisement

ಆಸ್ತಿ ಗುರುತಿಗೆ ಏಳೇ ಅಂಕಿ!

04:13 PM Jan 04, 2020 | |

ಬೆಂಗಳೂರು: ಇನ್ಮುಂದೆ “ಇಂಥ ಬಡಾವಣೆ, ಇಷ್ಟನೇ ಅಡ್ಡರಸ್ತೆ, ಈ ಮುಖ್ಯರಸ್ತೆ’ ಎಂದು ಮನೆ ವಿಳಾಸ ಬರೆಯುವುದ ಮರೆತುಬಿಡಿ. ಬಿಬಿಎಂಪಿ ನೀಡುವ ಏಳಂಕಿಯ “ಡಿಜಿ7′ ಸಂಖ್ಯೆ ನೆನಪಿಟ್ಟುಕೊಳ್ಳಿ. ಹಾಗೇ ಡಿಜಿ7 ಆ್ಯಪ್‌ನಲ್ಲಿ ಈ ಸಂಖ್ಯೆ ಎಂಟರ್‌ ಮಾಡಿದರೆ ನಿಮ್ಮ ಸ್ನೇಹಿತರು ನಿರಾಯಾಸವಾಗಿ ನಿಮ್ಮ ಮನೆ ತಲುಪಬಲ್ಲರು!

Advertisement

ನಗರದಲ್ಲಿ ವಿಳಾಸ ಹುಡುಕುವ ಜಂಜಾಟ ತಪ್ಪಿಸುವ ಹಾಗೂ ಪ್ರತಿ ಆಸ್ತಿಗೂ ತನ್ನದೇ ಆದ ಶಾಶ್ವತ ಗುರುತಿನ ಸಂಖ್ಯೆ ನೀಡುವ ಉದ್ದೇಶದಿಂದ ಪಾಲಿಕೆಯ “ಡಿಜಿ7′ ಆ್ಯಪ್‌ಗೆ ಗುರುವಾರ ಸಚಿವ ಕೆ.ಜೆ.ಜಾರ್ಜ್‌ ಚಾಲನೆ ನೀಡಿದರು. ಪಾಲಿಕೆ ವ್ಯಾಪ್ತಿಯ 19 ಲಕ್ಷ ಆಸ್ತಿಗಳನ್ನು ಜಿಐಎಸ್‌ ಮ್ಯಾಪಿಂಗ್‌ ವ್ಯವಸ್ಥೆಗೆ ಅಳವಡಿಸುವ ಮೂಲಕ ಆಸ್ತಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿರುವ ಪಾಲಿಕೆ, ಇದೀಗ ಆ ಆಸ್ತಿಗಳಿಗೆ ಅಕ್ಷರ ಮತ್ತು ಅಂಕಿಗಳನ್ನು ಒಳಗೊಂಡ ಡಿಜಿಟಲ್‌ ಸಂಖ್ಯೆ ನೀಡುವ ಮೂಲಕ ಆಸ್ತಿಗಳ ಸುಲಭ ಪತ್ತೆಗೆ ಕ್ರಮಕೈಗೊಂಡಿದೆ. ಕಾರ್ಯಕ್ರಮದಲ್ಲಿ ಮೇಯರ್‌ ಆರ್‌.ಸಂಪತ್‌ರಾಜ್‌, ಮಹೇಂದ್ರ ಜೈನ್‌, ಮನೋಜ್‌ ರಾಜನ್‌, ಶೇಷಾದ್ರಿ ಇದ್ದರು.

ಪಾಲಿಕೆಯಿಂದಲೇ ನಂಬರ್‌ ಪ್ಲೇಟ್‌: ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿಯೊಂದು ಆಸ್ತಿಗೂ ಪಾಲಿಕೆಯಿಂದಲೇ ಡಿಜಿಟಲ್‌ ಸಂಖ್ಯೆ ಫ‌ಲಕ ಅಳವಡಿಸಲು ಯೋಜನೆ ರೂಪಿಸಲಾಗಿದೆ. ನಗರದಾದ್ಯಂತ ಒಂದೇ ರೀತಿ ಫ‌ಲಕಗಳನ್ನು ಅಳವಡಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದು, ಪ್ರತಿ ಫ‌ಲಕ ಅಳವಡಿಕೆಗೆ 30ರಿಂದ 40 ರೂ. ವೆಚ್ಚವಾಗಲಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಟೆಂಡರ್‌ ಕರೆಯಲಾಗುತ್ತಿದೆ.

ಬಿಡಿಎ ಆಸ್ತಿಗಳೂ ಡಿಜಿಟಲ್‌: ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಡಿಜಿಟಲ್‌ ಡೋರ್‌ ಸಂಖ್ಯೆ ತಂತ್ರಾಂಶ ಹಾಗೂ “ಡಿಜಿ 7 ಮೊಬೈಲ್‌ ಅಪ್ಲಿಕೇಷನ್‌’ ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ 83 ಸಾವಿರ ರೂ. ವೆಚ್ಚವಾಗಿದೆ. ಡಿಜಿಟಲ್‌ ಸಂಖ್ಯೆಯ ಮೂಲಕ ವಿಳಾಸ ಪತ್ತೆಯೊಂದಿಗೆ, ಆಸ್ತಿ ತೆರಿಗೆ ಪಾವತಿಸಿದವರ ಮಾಹಿತಿ ಕಲೆ ಹಾಕಲು ಅನುಕೂಲವಾಗಲಿದೆ. ಮೊದಲ ಹಂತವಾಗಿ ಪಾಲಿಕೆಯ ಆಸ್ತಿಗಳಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಬಿಡಿಎ ಆಸ್ತಿಗಳಿಗೂ ಡಿಜಿಟಲ್‌ ಸಂಖ್ಯೆ ನೀಡಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.

ಡಿಜಿಟಲ್‌ ಸಂಖ್ಯೆ ಪಡೆಯುವ ವಿಧಾನ 
-ಡಿಜಿ 7 ಆ್ಯಪ್‌ನ್ನು ಮೊದಲಿಗೆ ಪ್ಲೇ ಸ್ಟೋರ್‌ ಅಥವಾ ಆಪ್‌ಸೊràರ್‌ನಿಂದ ಡೌನ್‌ಲೋಡ್‌ ಮಾಡಬೇಕು.
-ಆ್ಯಪ್‌ನಲ್ಲಿ ಮೊಬೈಲ್‌ ಸಂಖ್ಯೆ ಮೂಲಕ ನೋಂದಾಣಿ ಮಾಡಿಕೊಳ್ಳಬೇಕು.
-ಎಸ್‌ಎಎಸ್‌ ಫಾರಂ ಸಂಖ್ಯೆ ಅಥವಾ ಹೊಸ ಪಿಐಡಿ ಸಂಖ್ಯೆ ನಮೂದಿಸಿ ಡಿಜಿಟಲ್‌ ಸಂಖ್ಯೆ ಪಡೆಯಬಹುದು.
-ನಾಗರಿಕರು ಪಾಲಿಕೆಯ ಕಾಲ್‌ ಸೆಂಟರ್‌ 080 22660000 ಸಂಪರ್ಕಿಸಿ ಸಹ ಸಂಖ್ಯೆ ಪಡೆಯಬಹುದು.

Advertisement

ಎಸ್‌ಎಂಎಸ್‌ ಮೂಲಕವೂ ಪಡೆಯಿರಿ:  [ BBMP PID ] ಎಂದು ನಮೂದಿಸಿ ಅಥವಾ [ BBMP SAS ] ಎಂದು ಟೈಪ್‌ ಮಾಡಿ 161ಗೆ ಕಳುಹಿಸಿದರೂ ಸಂದೇಶದ ಮೂಲಕ ಡಿಜಿಟಲ್‌ ಸಂಖ್ಯೆ ಪಡೆಯಬಹುದಾಗಿದೆ.

ಡಿಜಿ7 ಆ್ಯಪ್‌ ಅನುಕೂಲವೇನು?
-ವಿಳಾಸ ಹುಡುಕಲು ಸುಲಭ ಹಾಗೂ ಪರಿಣಾಮಕಾರಿ ವಿಧಾನ.
-ಆಸ್ತಿ ಮಾಲೀಕರು ವಿಳಾಸವಾಗಿ ಡಿಜಿ 7 ಸಂಖ್ಯೆ ಬಳಸಬಹುದು.
-ಪಾಲಿಕೆಗೆ ದೂರು ಅಥವಾ ಸಲಹೆ ನೀಡಿದಾಗ ಡಿಜಿ7 ನೀಡಿದರೆ ಕ್ಷಿಪ್ರ ಸೇವೆಗಳನ್ನು ಪಡೆಯಬಹುದು.
-ಡಿಜಿ 7 ಸಂಖ್ಯೆಯ ಬಳಸಿ ನ್ಯಾವಿಗೇಟ್‌ ಸಹಾಯದಿಂದ ಶೀಘ್ರ ಬೇಕಾದ ಸ್ಥಳಕ್ಕೆ ತಲುಪಬಹುದು.
-ಆಸ್ತಿಯ ಶಾಶ್ವತ ಗುರುತಿನ ಸಂಖ್ಯೆಯಾಗಿರಲಿದ್ದು, ಪಾಲಿಕೆಯ ಹಲವು ಸೇವೆಗಳಿಗೆ ಬಳಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next