ಶಹಾಬಾದ: ಜಗತ್ತಿನ ಅನೇಕ ದೇಶಗಳಲ್ಲಿ ಸಂತ ಸೇವಾಲಾಲ್‌ರ ಅನುವಾಯಿಗಳಿದ್ದು, ಅಮೆರಿಕ ಕ್ಯಾಲಿಫೂರ್ನಿಯಾದಲ್ಲಿ ಎರಡು ಎಕರೆ ಜಮೀನು ಖರೀದಿಸಿದ್ದು, ಶೀಘ್ರದಲ್ಲಿಯೇ 51 ಅಡಿ ಎತ್ತರದ ಸಂತ ಸೇವಾಲಾಲ್‌ರ ಮೂರ್ತಿ ಸ್ಥಾಪನೆಯಾಗಲಿದೆ ಎಂದು ನಾಂದೇಡ್‌ನ ಗೋರಸಿಕವಾಡಿಯ ಅರುಣಕುಮಾರ ಚವ್ಹಾಣ ಹೇಳಿದರು.
ಮಂಗಳವಾರ ನಗರದ ಬಂಜಾರ ಸೇವಾ ಸಂಘ, ಬಂಜಾರ ಯುವ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸಂತ ಸೇವಾಲಾಲರ 278ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು. ದೇಶದಲ್ಲಿ ಶೇ.9 ರಷ್ಟು ಜನಸಂಖ್ಯೆಹೊಂದಿದ ಬಂಜಾರಾ ಸಮಾಜದ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು.
ಬಂಜಾರ ಸಮಾಜದವರು ಐಎಎಸ್, ಐಪಿಎಸ್ ದಂತ ಉನ್ನತ ಹುದ್ದೆ ಪಡೆಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು. ಎಐಬಿಎಸ್‌ಎಸ್ ರಾಜ್ಯಾಧ್ಯಕ್ಷ ಸುಭಾಷ ರಾಠೊಡ ಮಾತನಾಡಿ, ಜಗತ್ತಿನ ಏಕೈಕ ಜಾತ್ಯತೀತ ಸಮಾಜ ಬಂಜಾರ ಸಮಾಜವಾಗಿದ್ದು, ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ| ಉಮೇಶ ಜಾಧವ ಮಾತನಾಡಿ, ಕಲಬುರಗಿಯಲ್ಲಿ ಸಂತ ಸೇವಾಲಾಲ್ ಅಧ್ಯಯನ ಪೀಠ ಮಂಜೂರಾಗಲು ನಗರದ ಯುವಕರೇ ಕಾರಣ. ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟಕ್ಕಿಂತ ಮುಂಚೆ ಶಹಾಬಾದ ಯುವಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರಿಂದ ಅಧ್ಯಯನ ಪೀಠ ಮಂಜೂರಾಯಿತು ಎಂದು ಹೇಳಿದರು.
ಪತ್ರಕರ್ತ ರವಿ ರಾಠೊಡ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ ಮಾತನಾಡಿದರು. ಮುಗುಳನಾಗಾವ್ ನ ಜೇಮಸಿಂಗ್ ಮಹಾರಾಜ, ಗೊಬ್ಬರವಾಡಿಯ ಬಳಿರಾಮ ಮಹಾರಾಜ, ಬೇಡಸೂರನ ಪರಶುರಾಮ ಮಹಾರಾಜ, ವಜ್ಜಲನ ವಿಠಲ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಜಿ.ರಾಮಕೃಷ್ಣ, ಶಂಕರ ಚವ್ಹಾಣ, ತಾಪಂ ಸದಸ್ಯರಾದ ನಾಮದೇವ ರಾಠೊಡ, ವಿಜಯಲಕ್ಷಿ ಚವ್ಹಾಣ, ನಗರಸಭೆ ಅಧ್ಯಕ್ಷ ಗೀತಾ ಬೊಗುಂಡಿ, ಬಿಸಿಸಿಅಧ್ಯಕ್ಷ ಡಾ| ಎಂ.ಎ. ರಶೀದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಶಮ್‌ಖಾನ್, ಗಿರೀಶ ಕಂಬಾನೂರ, ರವಿ ಚವ್ಹಾಣ, ರಮೇಶ ಕಾರಬಾರಿ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ ರಾಜಾ, ವಿಠಲ ಜಾಧವ್, ವಾಲ್ಮೀಕಿ ನಾಯಕ ಹಾಜರಿದ್ದರು. ಚಂದು ಜಾಧವ ನಿರೂಪಿಸಿದರು, ಕುಮಾರ ಚವ್ಹಾಣ ಸ್ವಾಗತಿಸಿದರು.