Advertisement
ಅಲೆವೂರು ಗ್ರಾಮ ಪಂಚಾಯತ್ ಹಾಗೂ ಸಾೖಬ್ರಕಟ್ಟೆ ಮುಖ್ಯಪೇಟೆಯಲ್ಲಿರುವ ಯಡ್ತಾಡಿ ಗ್ರಾ.ಪಂ. ಕಚೇರಿ ಪಕ್ಕದಲ್ಲಿ ಎಸ್‌ಎಲ್ಆರ್‌ಎಂ ಘಟಕ ಸ್ಥಾಪಿಸುವ ಕುರಿತು ಸ್ಥಳೀಯಾಡಳಿತ ತಯಾರಿ ನಡೆಸಿದ್ದರೂ ಸ್ಥಳೀಯರು ಇದನ್ನು ವಿರೋಧಿಸುತ್ತಿದ್ದಾರೆ.
ಈ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಸಾವಿರಾರು ಜನ ವಾಸಿಸುವ ಪ್ರದೇಶದಲ್ಲಿ ತೊಂದರೆ ಉಂಟಾಗಬಹುದು ಎಂಬುದು ಜನರ ವಿರೋಧಕ್ಕೆ ಕಾರಣವಾಗಿದೆ. ಆದರೆ ಅನುಷ್ಠಾನಗೊಂಡ ಎಲ್ಲ ಕಡೆಯೂ ಈ ಘಟಕದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಅಲ್ಲದೆ ಇದರಿಂದ ಉತ್ತಮ ರೀತಿಯಲ್ಲಿ ತ್ಯಾಜ್ಯಗಳ ವಿಲೇವಾರಿ ನಡೆಯುತ್ತಿದೆ.
Related Articles
ಎಸ್ಎಲ್ಆರ್ಎಂ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಒಂದು ಯೋಜನೆ. ಈ ಯೋಜನೆಯಡಿ ತರಬೇತಿ ಪಡೆದ ನುರಿತ ಕಾರ್ಯಕರ್ತರು ಪರಿಸರ ಸ್ನೇಹಿ ವಿಧಾನಗಳ ಮೂಲಕ ಕಸವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಆದಾಯದ ಮೂಲವನ್ನಾಗಿ ಪರಿವರ್ತನೆ ಮಾಡುತ್ತಾರೆ. ಈ ವಿಧಾನದಲ್ಲಿ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಿರ್ವಹಣೆ ಮಾಡಲಾಗುತ್ತದೆ.
Advertisement
ಎಸ್‌ಎಲ್ಆರ್‌ಎಂನಲ್ಲಿ ಏನು ಮಾಡ್ತಾರೆ?ಪ್ರತ್ಯೇಕ ಪ್ರತ್ಯೇಕವಾಗಿ ಸಂಗ್ರಹಿಸಿದ ತ್ಯಾಜ್ಯವನ್ನು ಎಸ್‌ಎಲ್ಆರ್‌ಎಂ ಘಟಕಕ್ಕೆ ತರಲಾಗುತ್ತದೆ. ಅಲ್ಲಿಂದ ಹಸಿ ತ್ಯಾಜ್ಯವನ್ನು ವಿಂಗಡಿಸಿ ಗೋವುಗಳಿಗೆ ಆಹಾರವಾಗಿ ನೀಡಿ, ಉಳಿದ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡಲಾಗುತ್ತದೆ. ಒಣ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ವಸ್ತುಗಳು, ಪೇಪರ್, ರಟ್ಟು, ಲೆದರ್, ಮೆಟಲ್, ಗಾಜು, ಬಟ್ಟೆ, ಇಲೆಕ್ಟ್ರಾನಿಕ್ ವಸ್ತುಗಳು, ಥರ್ಮಕೋಲ್ ಇತ್ಯಾದಿ ಸುಮಾರು 18ರಿಂದ 20 ವಿಧವಾಗಿ ವಿಂಗಡಿಸಿ ಸ್ವಚ್ಛಗೊಳಿಸಿ, ತೂಕ ಮಾಡಿ ದಾಸ್ತಾನು ಕೊಠಡಿಯಲ್ಲಿ ಶೇಖರಿಸಲಾಗುತ್ತದೆ. ಅನಂತರದಲ್ಲಿ ವಿವಿಧ ರಿಸೈಕ್ಲಿಂಗ್ ಲಿಂಗ್ ಕಂಪೆನಿಗಳಿಗೆ ಮಾರಾಟ ಮಾಡಿ, ಬರುವ ಆದಾಯವನ್ನು ಎಸ್‌ಎಲ್ಆರ್‌ಎಂ ಘಟಕಗಳ ನಿರ್ವಹಣೆಗೆ ಬಳಸಲಾಗುತ್ತದೆ. ಈ ಮಹತ್ತರವಾದ ಕಾರ್ಯದಲ್ಲಿ ವೃತ್ತಿಪರ ತರಬೇತಿ ಪಡೆದ ಎಸ್‌ಎಲ್ಆರ್‌ಎಂ ಕಾರ್ಯಕರ್ತರ ಘನ ಮತ್ತು ದ್ರವ ನಿರ್ವಹಣಾ ಸಂಘಗಳು ಕರ್ತವ್ಯ ನಿರ್ವಹಿಸುತ್ತಿವೆ. ಸ್ವಚ್ಛ ಪರಿಸರಕ್ಕೂ ಸಹಕಾರಿ
ಈ ರೀತಿಯಾಗಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರಿಂದ ಪರಿಸರ ಹಾಗೂ ಜೀವ ವೈವಿಧ್ಯದ ಸಂರಕ್ಷಣೆ ಮಾಡುವುದರ ಜತೆಗೆ ಸುಂದರ ಸ್ವಚ್ಛ ಪರಸರ ನಿರ್ಮಾಣ ಸಾಧ್ಯವಿದೆ. ಹಸಿರು ಬಕೆಟ್
ಸಾರ್ವಜನಿಕರು ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ, ಹೂವು, ಮೊಟ್ಟೆ ಚಿಪ್ಪು, ಉಳಿಕೆಯಾದ ಆಹಾರ ಪದಾರ್ಥ ಮುಂತಾದ ಹಸಿ ತ್ಯಾಜ್ಯವನ್ನು ಹಸಿರು ಬಣ್ಣದ ಬಕೆಟ್’ನಲ್ಲಿ ಶೇಖರಿಸಿಟ್ಟು, ಪ್ರತಿನಿತ್ಯ ನೀಡಬೇಕಾಗುತ್ತದೆ. ಅಥವಾ ಪೈಪ್ ಕಾಂಪೋಸ್ಟ್ ವಿಧಾನಗಳ ಮೂಲಕ ಮನೆಯ ಹಂತದಲ್ಲಿಯೇ ಸಾವಯವ ಗೊಬ್ಬರವನ್ನಾಗಿ ಮಾಡಿಕೊಳ್ಳಬಹುದು. ಕೆಂಪು ಬಕೆಟ್
ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲ್, ಪೇಪರ್, ರಟ್ಟು, ಬಾಟಲಿ, ಗಾಜು, ಬಟ್ಟೆ, ರಬ್ಬರ್, ಲೋಹ ಮುಂತಾದ ಒಣ ತ್ಯಾಜ್ಯಗಳನ್ನು (ಕೊಳೆಯದ ತ್ಯಾಜ್ಯ) ಕೆಂಪು ಬಣ್ಣದ ಬಕೆಟ್‌ನಲ್ಲಿ ಹಾಕಿ ನೀಡಬೇಕು. ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದಲ್ಲಿ ತಮಗೆ ನೀಡಿರುವ ಬ್ಯಾಗ್ ನಲ್ಲಿ ಒಣ ತ್ಯಾಜ್ಯವನ್ನು ಸಂಗ್ರಹಿಸಿಟ್ಟು, ವಾಹನಕ್ಕೆ ನೀಡಬೇಕು. ಸಹಕಾರ ಅಗತ್ಯ
ಈ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ. ಸಾರ್ವ ಜನಿಕರು ತಾವು ಉತ್ಪಾದಿಸುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಹಾಗೂ ಒಣ ಎಂಬುದಾಗಿ ವಿಂಗಡಿಸಿ ಎಸ್‌ಎಲ್‌ಆರ್‌ಎಂ ವಾಹನಕ್ಕೆ ನೀಡಬೇಕು. ಜಿಲ್ಲೆಯಲ್ಲಿ ಯಶಸ್ವಿ ಅನುಷ್ಠಾನ
ಎಸ್‌ಎಲ್‌ಆರ್‌ಎಂ ಯೋಜನೆ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಪ್ರತೀ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಪರಿಸರಸ್ನೇಹಿ ಯೋಜನೆಯಾಗಿದ್ದು, ಈ ವರ್ಷ 40 ಪಂಚಾಯತ್‌ಗಳಲ್ಲಿ ಘಟಕ ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆ ಆರಂಭವಾಗಿ ಒಂದೂವರೆ ವರ್ಷ ಆಗುತ್ತಿದ್ದು, 35ರಿಂದ 40 ಲ.ರೂ.ಆದಾಯ ಬಂದಿದೆ. ಎಸ್‌ಎಲ್‌ಆರ್‌ಎಂ ಘಟಕದ ನಿರ್ವಹಣೆ, ಸಿಬಂದಿ ವೇತನಕ್ಕೆ ಇದನ್ನು ಬಳಸಿಕೊಳ್ಳಲಾಗುತ್ತಿದೆ.
-ಶ್ರೀನಿವಾಸ ರಾವ್, ಮುಖ್ಯ ಯೋಜನಾಧಿಕಾರಿ, ಉಡುಪಿ ಜಿ.ಪಂ. -ಪುನೀತ್ ಸಾಲ್ಯಾನ್