Advertisement

ಕೊರೊನಾ: ನಮ್ಮ ಮೆಟ್ರೋಗೆ ಹಿನ್ನಡೆ, ಕಾಮಗಾರಿಗೆ ಬೇಕು ಚೀನದ 4 ಟಿಬಿಎಂ

10:21 AM Mar 02, 2020 | sudhir |

ಬೆಂಗಳೂರು: ಚೀನದ ಕೊರೊನಾ ವೈರಸ್‌ ಕಾಟ “ನಮ್ಮ ಮೆಟ್ರೋ’ಗೂ ತಟ್ಟುತ್ತಿದೆ. ಎರಡನೇ ಹಂತದ ಸುರಂಗ ನಿರ್ಮಾಣಕ್ಕೆ ಬೇಕಾಗಿರುವ 4 ಟಿಬಿಎಂ (ಟನಲ್‌ ಬೋರಿಂಗ್‌ ಮೆಷಿನ್‌) ಗಳ ಆಮದು ವಿಚಾರ ಕಗ್ಗಂಟಾಗಿ ಪರಿಣಮಿಸಿದೆ.

Advertisement

ಸುರಂಗ ಕೊರೆಯಲು ನಿಯೋಜಿಸಿರುವ ಒಂಬತ್ತು ಟನಲ್‌ ಬೋರಿಂಗ್‌ ಮೆಷಿನ್‌ಗಳ ಪೈಕಿ ಇನ್ನೂ 4 ಯಂತ್ರ ಗಳಿಗಾಗಿ ಯೋಜನೆ ಗುತ್ತಿಗೆ ಪಡೆದ ಕಂಪೆನಿಗಳು ಚೀನದತ್ತ ಮುಖಮಾಡುತ್ತಿವೆ. ಆದರೆ ಅಲ್ಲಿ ಕೊರೊನಾ ವೈರಸ್‌ ಭೀತಿ ಗುತ್ತಿಗೆದಾರರ ನಿದ್ದೆಗೆಡಿಸಿದೆ. ಇದು ಪರೋಕ್ಷವಾಗಿ ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದಲ್ಲಿ ಟಿಬಿಎಂ ತಯಾರು ಮಾಡುವ ಕಂಪೆನಿಗಳು ಇರುವುದೇ ಮೂರು. ಅದರಲ್ಲೊಂದು ಚೀನದಲ್ಲಿದೆ. ಇನ್ನು ಜಪಾನ್‌ನಲ್ಲೇ ಯಂತ್ರ ತಯಾರಾದರೂ ಅದರ ಜೋಡಣೆಗೆ ಮತ್ತೆ ಚೀನಕ್ಕೆ ಹೋಗಬೇಕು. ಯೂರೋಪ್‌ನಿಂದ ತರಿಸಿಕೊಳ್ಳಬಹುದು. ಆದರೆ ಸಾಗಣೆ ವೆಚ್ಚದಲ್ಲಿ ಶೇ. 20ರಷ್ಟು ಹೆಚ್ಚಳ ಆಗುವುದರ ಜತೆಗೆ ಅಧಿಕ ಸಮಯ ಕೂಡ ಹಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ಯಾವುದು ಸೂಕ್ತ ಎಂಬ ತೀರ್ಮಾನಕ್ಕೆ ಇದುವರೆಗೂ ಬರಲು ಸಾಧ್ಯವಾಗಿಲ್ಲ.

ಎರಡು ಯಂತ್ರ; ಇಬ್ಬರು ತಜ್ಞರು
ಈಗಾಗಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವ ನಾಲ್ಕು ಟಿಬಿಎಂಗಳಿಗೆ ಕೊರೊನಾ ವೈರಸ್‌ ಭೀತಿ ಎದುರಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆ ವೇಳೆಗೆ ಚೀನದಿಂದ ಯಂತ್ರಗಳು ಹೊರಟಾಗಿತ್ತು.

ಪ್ರಸ್ತುತ ಅವನಿ ಮತ್ತು ಊರ್ಜಾ ಎಂಬ ಎರಡು ಟಿಬಿಎಂಗಳು ಬೆಂಗಳೂರು ತಲುಪಿವೆ. ಅವುಗಳೊಂದಿಗೆ ಇಬ್ಬರು ಚೀನದ ತಜ್ಞರು ಕೂಡ ಆಗಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಜೋಡಣೆ ಕಾರ್ಯ ನಡೆಯಲಿದೆ. ವಿಂಧ್ಯಾ ಮತ್ತು ಲವಿಗೂ ಕೊರೊನಾ ವೈರಸ್‌ ಬಿಸಿ ತಟ್ಟಿತ್ತು. ಈಚೆಗಷ್ಟೇ ಚೀನದಿಂದ ಹೊರಟಿವೆ. ಮುಂದಿನ 8-10 ದಿನಗಳಲ್ಲಿ ಚೆನ್ನೈಗೆ ಬಂದಿಳಿಯಲಿವೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಸದ್ಯಕ್ಕೆ ಸುರಂಗ ಕೊರೆಯುವ ಕೆಲಸಕ್ಕೆ ಯಾವುದೇ ಅಡ್ಡಿ ಆಗದು. ಆದರೆ ಕಾಮಗಾರಿ ಟೆಂಡರ್‌ ಪಡೆದ ಗುತ್ತಿಗೆದಾರರಿಗೆ ಒಂದೊಂದು ದಿನ ವಿಳಂಬವಾದರೂ ಲಕ್ಷಾಂತರ ರೂ. ನಷ್ಟ ಆಗುತ್ತದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಎಂಜಿನಿಯರೊಬ್ಬರು ತಿಳಿಸಿದ್ದಾರೆ.

Advertisement

ಶಾಲೆಗಳಿಗೆ ಎಚ್ಚರಿಕೆ
ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿ, ಶಿಕ್ಷಕ ಅಥವಾ ಸಿಬಂದಿ ಶೀತ, ಜ್ವರ ಅಥವಾ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರೆ ಅಂಥವರಿಗೆ ಕಡ್ಡಾಯ ರಜೆ ನೀಡುವಂತೆ ಶಾಲಾಡಳಿತ ಮಂಡಳಿಗೆ ನಿರ್ದೇಶಿಸಲಾಗಿದೆ. ಕೊರೊನಾ ವೈರಸ್‌ ಜಗತ್ತಿನಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಮುನ್ನೆಚ್ಚ ರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಈ ಬಗ್ಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ವೈದ್ಯರಿಂದ ಕಾಯಿಲೆ ಗುಣಮುಖ ಖಚಿತಪಡಿಸಿಕೊಂಡ ಅನಂತರವೇ ಶಾಲೆಗೆ ಬರಲು ತಿಳಿಸಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗೆ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಮನೆಗೆ ಕಳುಹಿಸಬೇಕು. ವಿದ್ಯಾರ್ಥಿ ನಿಲಯದಲ್ಲಿ ರೋಗ ಲಕ್ಷಣ ಕಾಣಿಸಿದ‌ಲ್ಲಿ, ವಿದ್ಯಾರ್ಥಿ ನಿಲಯದಲ್ಲಿ ಪ್ರತ್ಯೇಕವಾಗಿರಿಸಬೇಕು ಎಂದು ತಿಳಿಸಿದೆ. ಚೀನದ ವುಹಾನ್‌ನಿಂದ ಬಂದವರು ಇದ್ದರೆ ಇವರ ಮೇಲೆ ನಿಗಾ ಇಡಬೇಕು ಎಂದೂ ಸೂಚಿಸಲಾಗಿದೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next