Advertisement

ಗೂಗಲ್ ಪಿಕ್ಸೆಲ್ಸ್ ಇಯರ್ ಬಡ್ಸ್ – ರಿಯಲ್ ಟೈಮ್ ಟ್ರಾನ್‌ ಸ್ಲೇಶನ್

09:32 PM Jun 18, 2021 | Team Udayavani |

ಇಂಟರ್ನೆಟ್ ಯುಗದಲ್ಲಿ ವಿಶಾಲ ಜಗತ್ತನ್ನು ಗ್ಲೋಬಲ್ ವಿಲೇಜ್ ಎಂದು ಕರೆಯಲಾಗುತ್ತದೆ. ಈಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ಕುಳಿತುಕೊಂಡು ದೂರದ ಆಫ್ರಿಕಾದಲ್ಲಿರುವವರ ಜೊತೆ ಸುಲಭವಾಗಿ ಸಂಪರ್ಕವನ್ನು ಸಾಧಿಸಬಹುದು. ಎಲ್ಲಿ ಹೋದರೂ ಜೀವಿಸಬಹುದು. ಇದೆಲ್ಲವುದರ ಕೊಂಡಿಯಾಗಿ ಎಲ್ಲರ ಮನೆ ಮನಗಳಲ್ಲಿ ಇಂಗ್ಲಿಷ್ ಭಾಷೆ ಬೆಸೆದುಕೊಂಡಿದೆ. ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಹೇಗೆ ಹರಡಿಕೊಂಡಿದೆ ಎಂದರೆ, ಒಂದು ವೇಳೆ ಇಂಗ್ಲಿಷ್ ಭಾಷೆ ನಿಮಗೆ ಬರದಿದ್ದರೆ, ಹೊರ ಜಗತ್ತಿನೊಂದಿಗೆ ಸಂವಹನ ನಡೆಸುವುದು ಕಷ್ಟವೇ ಸರಿ. ಆದರೆ, ಇದೆಲ್ಲದಕ್ಕೂ ಪೂರ್ಣವಿರಾಮ ಎಂಬಂತೆ, ಹೊಸ ತಂತ್ರಜ್ಞಾನವೊಂದು ನಮ್ಮ ಮುಂದೆ ಬಂದಿದೆ.

Advertisement

ವೆಬ್ ದೈತ್ಯ ಗೂಗಲ್ ಸಂಸ್ಥೆಯು ಈಗ ಹೊಸತೊಂದು ತಂತ್ರಜ್ಞಾನವನ್ನು ನಮ್ಮ ಮುಂದೆ ಇಟ್ಟಿದೆ. ಅದುವೇ ಗೂಗಲ್ ಪಿಕ್ಸೆಲ್ ಬಡ್ಸ್ – ಟ್ರಾನ್ಸ್ಲೇಟ್. ಇದೊಂದು ಸ್ಮಾರ್ಟ್ ಗೆಜೆಟ್ ಆಗಿದ್ದು, ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್ ಬಳಸಿ, ಇತರ ಭಾಷೆಗಳನ್ನು ಸ್ವಯಂ ಆಗಿ ಅನುವಾದಿಸಬಲ್ಲ ವೈಯರ್‌ಲೆಸ್ ಇಯರ್‌ಬಡ್ ಆಗಿದೆ. ಪ್ರಸ್ತುತ ಇದಕ್ಕೆ 40 ವಿವಿಧ ಭಾಷೆಗಳನ್ನು ಭಾಷಾಂತರಿಸುವ ಸಾಮರ್ಥ್ಯ ಇದೆ.

ಅದು ಹೇಗೆ ಕೆಲಸ ಮಾಡುತ್ತದೆ?

ಯಾರದೇ ಸಂಭಾಷಣೆ-ಭಾಷಣವನ್ನು ರಿಯಲ್ ಟೈಮ್‌ ನಲ್ಲಿ ಅನುವಾದ ಮಾಡುವ ಇಯರ್‌ಬಡ್ ಇದಾಗಿದ್ದು, ಬೇರೆ ಬೇರೆ ತಂತ್ರಜ್ಞಾನ ಸರಪಳಿಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಹಲವು ಸುಧಾರಣೆಗಳನ್ನು ಕಾಣುತ್ತಿರುವ ಪಿಕ್ಸೆಲ್ ಬಡ್ಸ್, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಸೇರಿಸಿ, ನಿಖರವಾಗಿ ಅನುವಾದಿಸುವ ವಿಶ್ವಾಸವನ್ನು ಗೂಗಲ್ ಸಂಸ್ಥೆ ವ್ಯಕ್ತಪಡಿಸುತ್ತದೆ. ಇನ್‌ ಪುಟ್ ನಿಂದ ಔಟ್‌ ಪುಟ್‌ವರೆಗೆ ವಿವಿಧ ಹಂತಗಳನ್ನು ದಾಟಿ ಭಾಷಾನುವಾದ ಆಗುತ್ತದೆ.

ಮೊದಲಿಗೆ ‘ಇನ್‌ ಪುಟ್ ಕಂಡೀಷನಿಂಗ್’ ಮೂಲಕ ಹಿನ್ನೆಲೆ ಧ್ವನಿಗಳನ್ನು ತೆಗೆದು, ಸ್ಪೀಚ್ ರೆಕಗ್ನೈಜ್ ಮಾಡುತ್ತದೆ. ಓಕೆ ಗೂಗಲ್ ಮೂಲಕ ಸ್ವಯಂ ಆಗಿ ನಾವೂ ಚಾಲನೆ ನೀಡಬಹುದು ಅಥವಾ, ಅದು ತನ್ನಿಂತಾನೆ ಆಡಿಯೋ ಆ್ಯಕ್ಟಿವಿಟಿ ಡಿಟೆಕ್ಟರ್‌ ನಲ್ಲಿ ಡಿನಾಯ್ಸಿಂಗ್ ಮೂಲಕ ಹಿನ್ನೆಲೆ, ಅನಗತ್ಯ ಸದ್ದುಗಳನ್ನು ತೆಗೆದು ಹಾಕುತ್ತದೆ. ಬಳಿಕ, ಎಲ್‌ ಐ ಡಿ ಸಿಸ್ಟಮ್ ಮೂಲಕ ಒಂದೆರಡು ಸೆಕೆಂಡುಗಳಲ್ಲಿ ಭಾಷೆಯನ್ನು ಗುರುತಿಸುತ್ತದೆ. ಇದು ಬಹಳ ಮುಖ್ಯ ಹೆಜ್ಜೆ. ಏಕೆಂದರೆ, ಕೇವಲ ಫೊನೆಟಿಕ್‌ಗಳನ್ನು ಅರ್ಥೈಸಿದರೆ ಭಾಷೆ ಗೊತ್ತಾಗುವುದಿಲ್ಲ (ಉಕ್ರೇನಿಯನ್ ಹಾಗೂ ರಷ್ಯನ್, ಉರ್ದು ಹಾಗೂ ಹಿಂದಿ ಭಾಷೆಗಳಲ್ಲಿ ಬಹಳಷ್ಟು ಸಾಮ್ಯತೆ ಇದೆ).

Advertisement

ಭಾಷೆಯನ್ನು ಡಿಟೆಕ್ಟ್ ಮಾಡಿದ ಬಳಿಕ, ಮುಖ್ಯ ಭಾಷಣವನ್ನು ಗುರುತಿಸುತ್ತದೆ. ಸ್ವಯಂಚಾಲಿತವಾಗಿ, ಎಎಸ್‌ಆರ್ ತಂತ್ರಜ್ಞಾನದ ಮೂಲಕ, ಮಾತನಾಡುವ ವ್ಯಾಕರಣ, ಸಂದರ್ಭ ಹಾಗೂ ಉಚ್ಚಾರಣಾ ನಿಘಂಟನ್ನು ಬಳಸಿ, ಇನ್ನೊಂದು ಭಾಷೆಗೆ ಭಾಷಾಂತರಿಸುತ್ತದೆ.

ಎನ್‌ ಎಲ್‌ ಪಿ ತಂತ್ರಜ್ಞಾನವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಯಂತ್ರಾನುವಾದವನ್ನು ಮಾಡುತ್ತದೆ. ಇನ್ಪುಟ್ ಭಾಷಣದ ಅರ್ಥವನ್ನು ಡಿಕೋಡಿಂಗ್ ಮಾಡಿ, ತದನಂತರ ಆ ಅರ್ಥವನ್ನು ಬೇರೆ ಭಾಷೆಯಲ್ಲಿ ಔಟ್‌ ಪುಟ್ ಭಾಷಣವಾಗಿ ಮರು-ಎನ್ಕೋಡಿಂಗ್ ಮಾಡುತ್ತದೆ.

ಹೀಗೆ ಎಲ್ಲವೂ ಒಟ್ಟಿಗೆ ಆಗುತ್ತದೆ. ಈ ಪ್ರಕ್ರಿಯೆಯನ್ನು ಫೈವ್ ಬ್ಲಾಕ್ ಟೆಕ್ನಾಲಜಿ ಎಂದು ಕರೆಯಲಾಗುತ್ತದೆ. ಗೂಗಲ್ ಸರ್ವರ್‌ಗಳು ಕ್ಲೌಡ್ ರೂಪದಲ್ಲಿ ಕಾರ್ಯನಿರ್ವಹಿಸಲಿದ್ದು, ಧ್ವನಿಯನ್ನು ಸ್ವೀಕರಿಸಿ, ಅದರ ಗಾತ್ರವನ್ನೂ ಕುಗ್ಗಿಸಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಕಾರದಿಂದ ಭಾಷಾಂತರಿಸುತ್ತದೆ.

ಒಟ್ಟು ಪ್ರಕ್ರಿಯೆಯು ವಿವಿಧ ಹಂತಗಳು ಇರುವಂತೆ ಕಂಡರೂ, ಕೆಲವೇ ಸೆಕೆಂಡುಗಳಲ್ಲಿ ಎಲ್ಲಾ ಹಂತಗಳನ್ನು ಪೂರೈಸಿ ಅನುವಾದವನ್ನು ಮಾಡುತ್ತದೆ. ಒಂದು ಸಾಮಾನ್ಯ ಇಯರ್‌ಬಡ್‌ಗಳಲ್ಲಿರುವ ಪ್ರೊಸೆಸರ್ ಸ್ವಯಂ ಅನುವಾದವನ್ನು ಮಾಡುವಷ್ಟು ಶಕ್ತಿಯುತವಾಗಿ ಇರದಿರುವುದರಿಂದ, ಪಿಕ್ಸೆಲ್ ಬಡ್ಸ್ ಒಳಗೆ ಈ ಎಲ್ಲಾ ತಂತ್ರಗಳೂ ಅವಶ್ಯಕವಾಗಿದೆ. ಅದಲ್ಲದೆ, ಭಾಷೆ ಮತ್ತು ಅಕೌಸ್ಟಿಕ್ಸ್ ಮದರಿಗಳನ್ನು ಸಂಗ್ರಹಿಸಿ ಇಡುವಷ್ಟು ಸ್ಟೋರೇಜ್ ಅದರೊಳಗೆ ಇಲ್ಲ. ಸಾಕಷ್ಟು ಮೆಮೊರಿ ಇರುವ ಪ್ರೊಸೆಸರ್ ಅಳವಡಿಸಿದರೆ, ಇಯರ್‌ ಬಡ್ ಬ್ಯಾಟರಿ ಒಂದೆರಡು ಸೆಕೆಂಡುಗಳಲ್ಲಿ ಡ್ರೈನ್ ಆಗುವುದರಲ್ಲಿ ಸಂಶಯವಿಲ್ಲ.

ಗೂಗಲ್ ಹೊರತುಪಡಿಸಿದರೆ, ಐಫ್ಲೈಟೆಕ್ ಮತ್ತು ಐಬಿಎಂ ಸಂಸ್ಥೆಯು ಅನುವಾದ ಮಾಡಬಲ್ಲ ಇಯರ್ ಬಡ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನಷ್ಟು ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತದೆ. ತಮ್ಮದೆ ಕ್ಲೌಡ್‌ನಲ್ಲಿರುವಾಗ ಹೊಸದಾಗಿ ನವೀಕರಿಸುವುದು ಸುಲಭ. ಆದರೆ, ಅದನ್ನು ಇಯರ್‌ಬಡ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಸಿದ ಬಳಿಕ ಅಪ್ಡೇಟ್ ಮಾಡುವುದು ಕಷ್ಟ.

ಮೂರು ಭಾರತೀಯ ಭಾಷೆಗಳು ಲಭ್ಯ

ಪಿಕ್ಸೆಲ್ ಬಡ್ಸ್ನಲ್ಲಿ 40 ಭಾಷೆಗಳನ್ನು ಅನುವಾದಿಸುವ ಸಾಮರ್ಥ್ಯ ಇದೆ. ಅದರಲ್ಲಿ ಹಿಂದಿ, ಬಂಗಾಳಿ ಹಾಗೂ ತಮಿಳು ಭಾಷೆಗಳು ಸೇರಿರುವುದು ವಿಶೇಷ.

ಪಿಕ್ಸೆಲ್ ಬಡ್ಸ್ ಮೂಲಕ ಅನುವಾದಿಸಲು ಏನೆಲ್ಲಾ ಬೇಕು?

  1. ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್
  2. ಗೂಗಲ್ ಆ್ಯಪ್
  3. ಗೂಗಲ್ ಟ್ರಾನ್ಸ್ಲೇಟರ್ – ಅಪ್ಡೇಟೆಡ್ ಅಪ್ಲಿಕೇಶನ್
  4. ಇಂಟರ್ನೆಟ್ ಸೇವೆ

ಏನೆಲ್ಲಾ ಕ್ರಿಯೆ ಒಳಗೊಂಡಿದೆ?

  1. ಭಾಷೆಯನ್ನು ಆಯ್ಕೆ ಮಾಡುವುದು: ಗೂಗಲ್ ಅಸಿಸ್ಟೆಂಟ್ ಬಳಸಿ ಹೆಲ್ಪ್ ಮಿ ಸ್ಪೀಕ್ …. ಎಂದು ನಿಮ್ಮ ಸಂಭಾಷಣೆಯ ಎರಡು ಭಾಷೆಯನ್ನು ಆಯ್ಕೆ ಮಾಡಬಹುದು ಅಥವಾ ಗೂಗಲ್ ಟ್ರಾನ್ಸ್ಲೇಟರ್ ಆ್ಯಪ್ ಬಳಸಿ ನೀವು ಮಾತನಾಡುವ ಭಾಷೆ ಹಾಗೂ ಇನ್ನೊಬ್ಬರು ಮಾತನಾಡುವ ಭಾಷೆ ಆಯ್ಕೆ ಮಾಡಬಹುದು.
  2. ಮಾತನಾಡಲು ಪ್ರಾರಂಭಿಸುವುದು: ನಿಮ್ಮ ಇಯರ್‌ಬಡ್‌ಗಳನ್ನು ಬೆರಳಿನಲ್ಲಿ ಒತ್ತಿಟ್ಟು ನಿಮ್ಮ ಭಾಷೆಯಲ್ಲಿ ಮಾತನಾಡಿ. ಮಾತು ಅಂತ್ಯವಾದ ಬಳಿಕ ಇಯರ್‌ಬಡ್‌ನಿಂದ ಬೆರಳನ್ನು ಬಿಡುವುದು. ಆಗ ನೀವು ಮಾತನಾಡಿರುವುದನ್ನು ನೀವು ಮೊದಲೇ ಆಯ್ಕೆ ಮಾಡಿದ ಮತ್ತೊಂದು ಭಾಷೆಗೆ ಅದು ಅನುವಾದವಾಗುತ್ತದೆ.
  3. ಅದು ಅನುವಾದ ಆದ ಬಳಿಕ, ನಿಮಗೆ ಪ್ರತ್ಯುತ್ತರ ಲಭಿಸುತ್ತದೆ. ಇದಕ್ಕಾಗಿ, ಗೂಗಲ್ ಟ್ರಾನ್ಸ್ಲೇಟರ್‌ನ ಬಲಗಡೆ ಇರುವ ಮೈಕ್ರೋಫೋನ್‌ಅನ್ನು ಆಯ್ಕೆ ಮಾಡುವುದು. ಆಗ, ನಿಮ್ಮ ಮಾತಿಗೆ ಪ್ರತ್ಯುತ್ತರ ಸಿಗುತ್ತದೆ. ಅವರು ಮಾತು ನಿಲ್ಲಿಸಿದಾಗ, ಅವರು ಮಾತನಾಡಿರುವುದು ನಿಮ್ಮ ಭಾಷೆಗೆ ಅನುವಾದಗೊಳ್ಳುತ್ತದೆ.
  4. ಇಂಗ್ಲಿಷ್ ಭಾಷೆಯಿಂದ ಫ್ರೆಂಚ್, ಇಟಾಲಿಕ, ಜರ್ಮನ್ ಅಥವಾ ಸ್ಪಾನಿಷ್ ಭಾಷೆಗೆ ಟ್ರಾನ್ಸ್‌ಕ್ರೈಬ್ ಮಾಡಬಹುದು. ಇದರರ್ಥ, ನೀವು ಇಂಗ್ಲೀಷಿನಲ್ಲಿ ಹೇಳುತ್ತಾ ಹೋದರೆ, ರಿಯಲ್ ಟೈಮ್‌ನಲ್ಲಿ ಅದು ಅನುವಾದಗೊಳ್ಳುತ್ತಾ ಹೋಗುತ್ತದೆ. ಗೂಗಲ್ ಪಿಕ್ಸೆಲ್ ಇಯರ್‌ಬಡ್ ಕನೆಕ್ಟ್ ಆಗಿದ್ದರೆ ಅನುವಾದಿತ ಪಠ್ಯವು ನಿಮ್ಮ ಕಿವಿಗೆ ಕೇಳಿಸುತ್ತದೆ.

ಈ ತಂತ್ರಜ್ಞಾನ ಯುಗದಲ್ಲಿ ಏನೂ ಆಗಲ್ಲ ಎಂಬುವುದಿಲ್ಲ. ಪ್ರಸ್ತುತ ಗೂಗಲ್ ಪಿಕ್ಸೆಲ್ಸ್ ಇಯರ್ ಬಡ್ಸ್ ಕೆಲವೇ ಭಾಷೆಗಳಿಗೆ ಸಪೋರ್ಟ್ ನೀಡುತ್ತದಾದರೂ, ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಇನ್ನಷ್ಟು ಭಾಷೆಗಳನ್ನು ರಿಯಲ್ ಟೈಮ್ ಟ್ರಾನ್ಸ್ಲೇಟ್ ಮಾಡುವ ಫೀಚರ್‌ಗಳನ್ನು ಪರಿಚಯಿಸಿ, ನಮಗೆ ಇತರ ಭಾಷೆಗಳನ್ನು ಕಲಿಯಲು ಸಹಕಾರಿಯಾಗಲಿ ಎಂಬುವುದೊಂದೇ ನಮ್ಮ ಆಶಯ.

ಇಂದುಧರ ಹಳೆಯಂಗಡಿ

ಇದನ್ನೂ ಓದಿ : UP ವಿಧಾನಸಭಾ ಚುನಾವಣೆ 2022: ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳು, ಸಂಭಾವ್ಯ ಮೈತ್ರಿಗಳು.!?

Advertisement

Udayavani is now on Telegram. Click here to join our channel and stay updated with the latest news.

Next