Advertisement

ಹಲ್ಲೆ ಪ್ರಕರಣ: ನಲಪಾಡ್‌ಗೆ ಇನ್ನೂ ಜೈಲೇ ಗತಿ

06:15 AM May 31, 2018 | Team Udayavani |

ಬೆಂಗಳೂರು: ಫ‌ರ್ಜಿ ಕೆಫೆಯಲ್ಲಿ ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್‌ ನಲಪಾಡ್‌ಗೆ ಇನ್ನೂ ಬಿಡುಗಡೆ ಭಾಗ್ಯ ಇಲ್ಲ. ಜಾಮೀನು ಕೋರಿ ನಲಪಾಡ್‌ಎರಡನೇ ಬಾರಿ ಸಲ್ಲಿಸಿದ್ದ ಅರ್ಜಿಯನ್ನು  63ನೇ ಸೆಷನ್ಸ್‌ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

Advertisement

ನಲಪಾಡ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ್ದ 63ನೇ ಸೆಷನ್ಸ್‌
ನ್ಯಾಯಾಲಯದ ನ್ಯಾ.ಪರಮೇಶ್ವರ ಪ್ರಸನ್ನ ಅವರು, ಬುಧವಾರ ತೀರ್ಪು ಪ್ರಕಟಿಸಿದರು.

ಪ್ರಕರಣದಲ್ಲಿ ಸಹ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂದ ಮಾತ್ರಕ್ಕೆ ಪ್ರಮುಖ ಆರೋಪಿಗೆ ಜಾಮೀನು ನೀಡಬೇಕೆಂದಿಲ್ಲ. ಆರೋಪಿ ನಲಪಾಡ್‌ ಪ್ರಭಾವಿ ವ್ಯಕ್ತಿಯಾಗಿದ್ದಾನೆ. ಜಾಮೀನು ನೀಡಿದರೆ ಸಾಕ್ಷ್ಯಾಧಾರ ನಾಶಪಡಿಸಬಹುದು.ಸಮರ್ಪಕ ಸಾಕ್ಷ್ಯಗಳ ವಿಚಾರಣೆಗೆ ಅಡ್ಡಿಪಡಿಸಬಹುದು.ಆರೋಪಿ ಮೇಲೆ ಕೊಲೆ ಯತ್ನದಂತ ಗಂಭೀರ ಆರೋಪವಿದೆ. ಅಲ್ಲದೆ, ಈ ಪ್ರಕರಣ ನಗರದ ಮಟ್ಟಿಗೆ ಭಯ ಹುಟ್ಟಿಸುವಂತಹದ್ದಾಗಿದೆ. ಜೀವಾವಧಿ ಶಿಕ್ಷೆಯಾಗಬಹುದಾದ ಆರೋಪ ಆರೋಪಿಯ ಮೇಲಿದೆ. ಒಂದು ವೇಳೆ ಜಾಮೀನು ನೀಡಿದರೆ ಇದೇ ರೀತಿಯ ಕೃತ್ಯವೆಸಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತು.

ಪ್ರಕರಣ ಸಂಬಂಧ ಯುಬಿ ಸಿಟಿಯ ಫ‌ರ್ಜಿ ಕೆಫೆಯಲ್ಲಿ ನಡೆದ ಹಲ್ಲೆ ಸಂಬಂಧ 15 ಮಂದಿ ಹಾಗೂ ಮಲ್ಯ ಆಸ್ಪತ್ರೆಯಲ್ಲಿ
ನಡೆದ ಹಲ್ಲೆ ಸಂಬಂಧ 12 ಮಂದಿಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ನಲಪಾಡ್‌ ವಿರುದ್ಧ ಈ ಸಾಕ್ಷಿಗಳು ಗಂಭೀರ ಆರೋಪ ಮಾಡಿರುವುದನ್ನು ದೋಷಾರೋಪ ಪಟ್ಟಿಯಲ್ಲಿ
ಉಲ್ಲೇಖೀಸಲಾಗಿತ್ತು. ಇದು ಕೂಡ ಜಾಮೀನು ತಿರಸ್ಕರಿಸಲು ಪ್ರಮುಖ ಕಾರಣ ಎನ್ನಲಾಗಿದೆ.

Advertisement

ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ 
ಸೆಷನ್ಸ್‌ ಕೋರ್ಟ್‌ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಆರೋಪಿ ಪರ ವಕೀಲರು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. 

ಈ ಹಿಂದೆ ಹೈಕೋರ್ಟ್‌, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಘಟನೆಯ ಕ್ರೌರ್ಯ ಗಮನಿಸಿ ಜಾಮೀನು ನಿರಾಕರಿಸಿತ್ತು. ಫೆ.17ರಂದು ಯುಬಿ ಸಿಟಿಯ ಫ‌ರ್ಜಿ ಕೆಫೆಯಲ್ಲಿ ವಿದ್ವತ್‌ ಮೇಲೆ ಮೊಹಮ್ಮದ್‌ ನಲಪಾಡ್‌ ಮತ್ತಿತರರು ಹಲ್ಲೆ ನಡೆಸಿದ್ದರು.

ಅಲ್ಲದೆ, ಮಲ್ಯ ಆಸ್ಪತ್ರೆಯಲ್ಲಿಯೂ ತನ್ನ ಸಹಚರರನ್ನು ಕರೆದೊಯ್ದು ವಿದ್ವತ್‌, ಈತನ ಸಹೋದರ, ಸ್ನೇಹಿತರ
ಮೇಲೂ ನಲಪಾಡ್‌ ದೌರ್ಜನ್ಯವೆಸಗಿದ್ದ. ಈ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next