Advertisement

ಜನಪರ ಚರ್ಚೆಗಳಿಂದ ಕಲಾಪ ದೂರ

12:14 PM May 16, 2022 | Team Udayavani |

ಧಾರವಾಡ: ಸಿರಿವಂತಿಕೆಯೊಂದೇ ಇದ್ದರೆ ಸಾಲದು ನೈತಿಕತೆಯೂ ಬೇಕು. ಬಸವಾದಿ ಶರಣರ ವಚನಗಳಲ್ಲಿ ನೈತಿಕತೆಯ ಭಂಡಾರವಿದ್ದು, ವಚನ ಸಾಹಿತ್ಯ ಓದಿ ಅನುಷ್ಠಾನಗೊಳಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ ಹೇಳಿದರು.

Advertisement

ಕವಿಸಂನಲ್ಲಿ ಮಾವನ ಬಂಧುತ್ವ ವೇದಿಕೆಯಿಂದ ಬಸವೇಶ್ವರರ 889ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ “ಬಸವಾದಿ ಶರಣರಲ್ಲಿ ಮಾನವ ಹಕ್ಕುಗಳು ಮತ್ತು ವರ್ತಮಾನ’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ವಚನಗಳಲ್ಲಿ ಮಾನವ ಹಕ್ಕುಗಳಿವೆ ಎಂಬುದನ್ನು ಜನರಿಗೆ ತಿಳಿಸಬೇಕು. ಅವರು ತಮ್ಮ ದೈನಂದಿನ ಜೀವನದಲ್ಲಿ ವಚನಗಳಲ್ಲಿರುವ ತತ್ವಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು. ನಾವು ಮಾನವ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರÂ ದಮನಿಸಲಾಗುತ್ತಿದೆ. ಸರಕಾರವನ್ನು ಪ್ರಶ್ನಿಸುವಂತಿಲ್ಲ, ಟೀಕಿಸುವಂತಿಲ್ಲ, ವಿಮರ್ಷಿಸುವಂತಿಲ್ಲ. ಪ್ರಶ್ನಿಸಿದವರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದರು.

ಧರ್ಮ ಹಾಗೂ ರಾಜಕೀಯಗಳ ಮಿಶ್ರಣ ಜೋರಾಗಿದ್ದು, ಧಾರ್ಮಿಕ ಮುಖಂಡರು ಚುನಾವಣೆಗೆ ನಿಂತು ಆಯ್ಕೆಗೊಂಡು ಸಿಎಂ, ಸಚಿವರು, ಸಂಸದರಾಗುತ್ತಿದ್ದಾರೆ. ಇದು ದೇಶಕ್ಕೆ ಒಳಿತಲ್ಲ. ನಮ್ಮ ಸಂಸತ್ತಿನಲ್ಲಿ ಶೇ.82 ಸಂಸದರು ಕೋಟ್ಯಾಧೀಶರಾಗಿದ್ದಾರೆ, ಶೇ.43 ಸಂಸದರು ಅಪರಾಧ ಆರೋಪ ಹೊಂದಿದ್ದಾರೆ. ಶೇ.54 ರಿಯಲ್‌ ಎಸ್ಟೇಟ್‌ ಸೇರಿದಂತೆ ಉದ್ಯಮಿಗಳಾಗಿದ್ದಾರೆ. ಇದರಿಂದಾಗಿಯೇ ಸಂಸತ್ತಿನ ಕಲಾಪದಲ್ಲಿ ಜನಪರ ಚರ್ಚೆಗಳು ಆಗುತ್ತಿಲ್ಲ. ಭಾವನಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅನಗತ್ಯವಾಗಿ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂದು ಹೇಳಿದರು.

ವಿದೇಶಗಳಿಗೆ ಹೋಗಿ ರಾಜ್ಯದ ವಿಶೇಷತೆ ತಿಳಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಉದ್ಯಮಿಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಿಸಲು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕೋಮುಗಳ ಮಧ್ಯೆ ಕಂದಕ ಹೆಚ್ಚಾಗುತ್ತಿದ್ದು, ಕೋಮು ಸಂಘರ್ಷ ಸೃಷ್ಟಿಸಲಾಗುತ್ತಿದೆ. ಇಂತಹ ವಾತಾವರಣದಲ್ಲಿ ಯಾವ ಉದ್ಯಮಿಗಳೂ ಹೂಡಿಕೆ ಮಾಡಲು ಮುಂದೆ ಬರುವುದಿಲ್ಲ ಎಂಬುದನ್ನು ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

ಹಿರಿಯ ಸಾಹಿತಿ ರಂಜಾನ್‌ ದರ್ಗಾ ಮಾತನಾಡಿ, ಮನುವಾದಿಗಳು 12ನೇ ಶತಮಾನದಲ್ಲಿ ಶರಣರ ಮಾರಣಹೋಮ ನಡೆಸಿ ಅವರ ಸಾಹಿತ್ಯವನ್ನು ನಾಶ ಮಾಡಿದರು. ನಮಗೆ ಶರಣರ ಶೇ.10 ಸಾಹಿತ್ಯ ಮಾತ್ರ ದೊರೆತಿದೆ. ಶರಣರ ವಚನಗಳು ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತವಾಗಿವೆ ಎಂದರು. ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ವಿ.ಡಿ. ಕಾಮರಡ್ಡಿ, ಎಸ್‌.ಎಸ್‌. ಯಡ್ರಾಮಿ, ಅನಂತ ನಾಯ್ಕ, ತೋಳಿ ಭರಮಣ್ಣ ಇನ್ನಿತರರಿದ್ದರು.

ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಅರ್ಥ ಮಾಡಿಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ದ ವಾತಾವರಣ ಸೃಷ್ಟಿಸಲು ಆದ್ಯತೆ ನೀಡಬೇಕು. ಎಲ್ಲ ಕೋಮಿನ ಜನರು ಶಾಂತ ರೀತಿಯಲ್ಲಿ ಬಾಳುವಂತಹ ಸ್ಥಿತಿ ನಿರ್ಮಾಣಗೊಳ್ಳಬೇಕು. ಆಗ ಮಾತ್ರ ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆ ಮಾಡಲು ಸಾಧ್ಯ. –ಎಚ್‌.ಎನ್‌. ನಾಗಮೋಹನದಾಸ, ನಿವೃತ್ತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next