Advertisement

ಇಂದು ಬೆಳಗ್ಗೆ 11ಕ್ಕೆ ಅಧಿವೇಶನ ಆರಂಭ

06:25 AM May 19, 2018 | |

ಬೆಂಗಳೂರು: ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಹಾಗೂ ಸರ್ಕಾರದ ವಿಶ್ವಾಸಮತ ಯಾಚನೆಗೆ ಮೇ 19ರ ಬೆಳಿಗ್ಗೆ 11 ಗಂಟೆಗೆ ಕರೆಯಲಾದ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವಂತೆ ಶಾಸಕರಿಗೆ ಮೊಬೈಲ್‌ ಫೋನ್‌, ಎಸ್ಸೆಮ್ಮೆಸ್‌, ವಾಟ್ಸ್‌ಆಪ್‌ ಮೂಲಕ ಸಮನ್ಸ್‌ ಕಳಿಸಲಾಗುವುದು ಎಂದು ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ ತಿಳಿಸಿದ್ದಾರೆ.

Advertisement

ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಅಧಿವೇಶನಕ್ಕೆ ಬರುವಾಗ ತಮ್ಮ ಯಾವುದಾದರೂ ಅಧಿಕೃತ ಗುರುತಿನ ಚೀಟಿ (ಐಡಿ ಕಾರ್ಡ್‌) ಹಾಗೂ ಚುನಾವಣಾ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರುವಂತೆ ಸೂಚನೆ ನೀಡಲಾಗಿದೆ ಎಂದರು.

ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಅಧಿವೇಶನ ಕರೆಯುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಅದರಂತೆ, ಶನಿವಾರ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದೆ. ಸುಪ್ರೀಂಕೋರ್ಟ್‌ ನಿರ್ದೇಶನದ ಪ್ರಕಾರ ಹಂಗಾಮಿ ಸ್ಪೀಕರ್‌ ಕಲಾಪ ನಡೆಸಲಿದ್ದಾರೆ. ಸಂಜೆ 4ಗಂಟೆಯೊಳಗೆ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳಿಸಿ, ಬಳಿಕ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಈ ಅಧಿವೇಶನ ಪ್ರಮಾಣ ವಚನ ಸ್ವೀಕಾರ ಮತ್ತು ವಿಶ್ವಾಸಮತ ಯಾಚನೆಗೆ ಮಾತ್ರ ಸೀಮಿತವಾಗಿರಲಿದೆ ಎಂದರು.

ಪ್ರಮಾಣ ವಚನ ಸ್ವೀಕಾರಕ್ಕೆ ಬನ್ನಿ ಅಂತ ವಿಧಾನಸಭೆ ಸಚಿವಾಲಯ ಹೊಸದಾಗಿ ಚುನಾಯಿತರಾದ ಜನಪ್ರತಿನಿಧಿಗಳನ್ನು ಆಹ್ವಾನಿಸಬಹುದು. ಕಡ್ಡಾಯವಾಗಿ ಬರಲೇಬೇಕು ಎಂದು ಹೇಳುವಂತಿಲ್ಲ. ಚುನಾಯಿತ
ಜನಪ್ರತಿನಿಧಿಯೊಬ್ಬರು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವಷ್ಟೇ ಅವರು ಶಾಸಕರೆಂದು
ಪರಿಗಣಿಸಲ್ಪಡುತ್ತಾರೆ ಹಾಗೂ ಅವರಿಗೆ ವಿಶ್ವಾಸಮತಯಾಚನೆಯಲ್ಲಿ ಮತದಾನದ ಹಕ್ಕು ಸಿಗುತ್ತದೆ.

ಪ್ರಮಾಣ ವಚನ ಸ್ವೀಕರಿಸದಿದ್ದರೆ, ಅವರನ್ನು ಶಾಸಕರೆಂದು ಪರಿಗಣಿಸಲು ಆಗುವುದಿಲ್ಲ. ಅಂತವರು ನಮ್ಮ ವ್ಯಾಪ್ತಿಗೆ ಬರುವುದೂ ಇಲ್ಲ. ಇಂತಿಷ್ಟೇ ಅವಧಿಯಲ್ಲಿ, ದಿನಗಳಲ್ಲಿ, ತಿಂಗಳಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸಂವಿಧಾನದಲ್ಲಾಗಲಿ ಅಥವಾ ವಿಧಾನಸಭೆಯ ನಿಯಮಾವಳಿಗಳಲ್ಲಿ ಎಲ್ಲೂ ಹೇಳಿಲ್ಲ ಎಂದು ಮೂರ್ತಿ ವಿವರಿಸಿದರು.

Advertisement

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗಿರುತ್ತದೆ?
ಮೇ 19ರ ನಾಲ್ಕು ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಿ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ, ಹೀಗೆಯೇ ನಡೆಸಿ ಎಂದು ಹೇಳಿಲ್ಲ. ಹಂಗಾಮಿ ಸ್ಪೀಕರ್‌ ನಡೆಸಬೇಕು ಎಂದು ಕೋರ್ಟ್‌ ಹೇಳಿದೆ. ಸಾಮಾನ್ಯವಾಗಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮೊದಲು ಮುಖ್ಯಮಂತ್ರಿಯಾದವರು ಸದನದಲ್ಲಿ ಪ್ರಸ್ತಾವನೆ ಮಂಡಿಸುತ್ತಾರೆ. ಅದನ್ನು ಮತಕ್ಕೆ ಹಾಕುವಂತೆ ಸಭೆಯ ಯಾವುದೇ ಸದಸ್ಯರೊಬ್ಬರು ಅಥವಾ ಪಕ್ಷ ಕೋರುತ್ತದೆ. ಆಗ 2-3 ನಿಮಿಷಗಳ ಕಾಲ ಸದನದಲ್ಲಿ ಬೆಲ್‌ ಮಾಡಲಾಗುತ್ತದೆ. ಬಳಿಕ, ಬೆಲ್‌ ಆಫ್ ಮಾಡಿ, ಸದನದ ಬಾಗಿಲು ಬಂದ್‌ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರುವ ಸದಸ್ಯರನ್ನು ಮಾತ್ರ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಮೊದಲು ವಿಶ್ವಾಸ ಮತದ ಪರವಾಗಿ ಇರುವ ಸದಸ್ಯರನ್ನು ಎದ್ದು ನಿಲ್ಲಿಸಿ, ತಲೆ ಎಣಿಕೆ ಮಾಡಲಾಗುತ್ತದೆ. ಬಳಿಕ ವಿಶ್ವಾಸಮತ ಯಾಚನೆಗೆ ವಿರುದ್ಧವಾಗಿರುವವರ ತಲೆ ಎಣಿಸಲಾಗುತ್ತದೆ. ಪರ ಎಷ್ಟು, ವಿರೋಧ ಎಷ್ಟು ಅನ್ನುವುದನ್ನು ಸ್ಪೀಕರ್‌ ಘೋಷಿಸುತ್ತಾರೆ. ಇದು ಸಾಮಾನ್ಯವಾಗಿ ನಡೆಯುವ ಪದಟಛಿತಿ. ಆದರೆ, ವಿಶ್ವಾಸ ಮತಯಾಚನೆ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ಅಂತಿಮವಾಗಿ ಸ್ಪೀಕರ್‌ ನಿರ್ಧರಿಸುತ್ತಾರೆ ಎಂದು ಮೂರ್ತಿ ಹೇಳಿದರು.

ಸಾರ್ವಜನಿಕರ ಪ್ರವೇಶ ನಿಷೇಧ
ಭದ್ರತಾ ವ್ಯವಸ್ಥೆಯ ನಿರ್ವಹಣೆಯ ದೃಷ್ಟಿಯಿಂದ ವಿಧಾನಸೌಧ, ವಿಕಾಸಸೌಧ,ಶಾಸಕರ ಭವನದ ಎಲ್ಲ ಸಿಬ್ಬಂದಿ ಪ್ರವೇಶದ್ವಾರದಲ್ಲಿ ಕಡ್ಡಾಯವಾಗಿ ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ
ವಿಧಾನಸೌಧದ ಪಶ್ಚಿಮದ್ವಾರ (ಕೆಂಗಲ್‌ ಹನುಮಂತಯ್ಯ ಪ್ರತಿಮೆ) ಮತ್ತು ವಿಕಾಸಸೌಧದ ಪೂರ್ವದ್ವಾರ
(ಗೋಪಾಲಗೌಡ ವೃತ್ತ) ಮೂಲಕ ಪ್ರವೇಶಿಸಬೇಕು. ಸಿಬ್ಬಂದಿ ವರ್ಗ ಕಾರಿಡಾರ್‌ನಲ್ಲಿ ಅನಾವಶ್ಯಕವಾಗಿ ಗುಂಪು
ಸೇರುವಂತಿಲ್ಲ. ಮೇ 19ರಂದು ವಿಧಾನಸೌಧ, ವಿಕಾಸಸೌಧ ಮತ್ತು ಶಾಸಕರ ಭವನಕ್ಕೆ ಸಾರ್ವಜನಿಕರ
ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next