Advertisement
ಪ್ರಶ್ನೋತ್ತರ ಕಲಾಪದಲ್ಲಿ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕ ಪೂಂಜಾ ಬೆಳ್ತಂಗಡಿ ತಾಲೂಕಿನಲ್ಲಿ ಆನೆಗಳ ಹಾವಳಿ ವಿಪರೀತವಾಗಿ ರೈತರು ಬೆಳೆಗಳ ಹಾನಿಗೆ ತತ್ತರಿಸಿದ್ದಾರೆ. ಅರಣ್ಯ ಇಲಾಖೆಗೆ ರಕ್ಷಣೆಗಾಗಿ ಕೋರಿದರೆ ಡಿಎಫ್‌ಒ ಸೇರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರಕಾರದ ವರದಿ ಪ್ರಕಾರ ಇಲಾಖೆಯ ವಿದ್ಯುದಾಘಾತಕ್ಕೆ ಸಿಲುಕಿ 2024ರಲ್ಲಿ 26 ಆನೆಗಳು ಮೃತಪಟ್ಟಿವೆ. ಹಾಗಿದ್ದ ಮೇಲೆ ರೈತರ ಕೋವಿಗೂ ಅನುಮತಿ ನೀಡಿ, ಆನೆ ಕೊಲ್ಲಲು ರೈತರಿಗೂ ಅವಕಾಶ ಕೊಡಿ. ಇನ್ನು ಆನೆ ಹಾವಳಿ ತಡೆಯುವ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಪೂಂಜಾ ಸರ್ಕಾರದ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಈ ಹೇಳಿಕೆ ದುರದೃಷ್ಟಕರ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಆನೆಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್, ತಂತಿಬೇಲಿ, ಆನೆಗಳ ಕಂದಕ ನಿರ್ಮಾಣದಂತಹ ಕಾಮಗಾರಿಗಳಲ್ಲಿ ಅಕ್ರಮ, ಅವ್ಯವಹಾರ ಆಗಿದೆ ಎಂದು ದೂರು ಬಂದಿಲ್ಲ, ಈಗಲೂ ದೂರು ಕೊಟ್ಟರೆ ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಆನೆಗಳ ಕಾರ್ಯಪಡೆ ರಚನೆ:
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ, ಕಾರ್ಯಾಚರಣೆಗೆ ತಂಡ ರಚಿಸಲಾಗಿದ್ದು, ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ಬೇರೆ ಕಡೆಗಳಿಗೆ ಹೋಲಿಸಿದರೆ ಬೆಳ್ತಂಗಡಿಯಲ್ಲಿ ಆನೆಯ ಹಾವಳಿ ಕಡಿಮೆಯಿದೆ. ಆನೆಗಳನ್ನು ನಿಯಮನುಸಾರ ಹಿಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ. ಅರಣ್ಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದರೆ ನಮಗೆ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಖಂಡ್ರೆ ಭರವಸೆ ನೀಡಿದರು. ರೈತರ ಕೈಗೆ ಬರುವಾಗ ಬೆಳೆ ನಾಶ:
ಆನೆಗಳ ಕೊಲ್ಲಲು ರೈತರಿಗೂ ಅವಕಾಶ ಕೊಡಿ ಎಂಬ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಸ್ಪಷ್ಟನೆ ನೀಡಿದ ಶಾಸಕ ಆರಗ ಜ್ಞಾನೇಂದ್ರ ʼನಾವು ಯಾರೂ ಪ್ರಾಣಿಗಳ ಕೊಲೆ ಮಾಡಬೇಕು ಅಂತ ಹೇಳಲ್ಲ. ಬೆಳೆ ಕೈಗೆ ಬರುವ ಹೊತ್ತಿಗೆ ಪ್ರಾಣಿಗಳಿಂದ ನಾಶವಾಗುತ್ತವೆ. ಸರಕಾರ ಪರಿಹಾರ ಕೊಡುವುದು ಏನಕ್ಕೂ ಸಾಲಲ್ಲ. ಕ್ಷೇತ್ರದ ಉಂಬಳೆಬೈಲು, ಶಿವಮೊಗ್ಗದಲ್ಲೂ ಪ್ರಾಣಿಗಳ ಹಾವಳಿ ಇದೆ. ಅರಣ್ಯ ಇಲಾಖೆ ವೆಚ್ಚ ಮಾಡುವುದು ಏನೂ ಅಲ್ಲ. ಕಾಡು ಮನುಷ್ಯರಿಗೂ ಬೇಕು, ಪ್ರಾಣಿಗಳಿಗೂ ಬೇಕು, ಪ್ರಾಣಿಗಳಿಗೆ ಮಾತ್ರ ಇರಲಿ ಎಂದರೆ ಆಗುವಂತದ್ದಲ್ಲ ಎಂದು ಹೇಳಿದರು.