ಬೆಳಗಾವಿ: ದಿನದ 24 ಗಂಟೆಗಳ ಕಾಲ ರೋಗಿಯೊಂದಿಗೆ ಇದ್ದು, ಅವರನ್ನು ಗುಣಪಡಿಸುವಲ್ಲಿ ನಿರಂತರ ಶ್ರಮಿಸುವ ಶುಶ್ರೂಷಕಿಯರ ಸೇವೆ ಶ್ಲಾಘನೀಯ ಎಂದು ಕೆ.ಎಲ್ಇ ನರ್ಸಿಂಗ್ ಕಾಲೇಜಿನ ಉಪಪ್ರಾಂಶುಪಾಲ ಸುಮಿತ್ರಾ ಎಲ್.ಎ. ಹೇಳಿದರು.
ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿ ಮಾಡಿ ಸಂತಸಕರ ಜೀವನ ನಡೆಸುವಂತೆ ಮಾಡುವಲ್ಲಿ ದಾದಿಯ ಪಾತ್ರ ಮುಖ್ಯವಾದುದು. ಈ ಸೇವೆಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ವೃತ್ತಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಎಂದರು.
ಆಸ್ಪತ್ರೆಯ ವೈದ್ಯಕೀಯ ಸೇವೆಗೆ ನಿರ್ದೇಶಕ ಡಾ| ಎಸ್.ಸಿ. ಧಾರವಾಡ ಮಾತನಾಡಿ,ರೋಗಿಗಳ ಜೊತೆಗೆ ಅತಿಯಾದ ಒಡನಾಟದಲ್ಲಿದ್ದು, ವೈಯಕ್ತಿಕ ಸುಖ ಸಂತೋಷ ಕಡೆಗಣಿಸಿ ಹಗಲಿರುಳೆನ್ನದೇ ಸದಾ ನಗು ಮೊಗದಿಂದ ಸೇವೆ ಮಾಡುವ ದಾದಿಯರ ಕಾರ್ಯ ಬಹಳ ಶ್ಲಾಘನೀಯ. ರೋಗಿಗಳು ಬೇಗ ಗುಣಮುಖರಾಗುವಲ್ಲಿ ನಿಮ್ಮ ಪಾತ್ರ ಮಹತ್ವವಾದುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಯು.ಎಸ್.ಎಂ ಕೆಎಲ್ಇ ನಿರ್ದೇಶಕ ಡಾ| ಎಚ್.ಬಿ ರಾಜಶೇಖರ, ರೋಗಿಗಳು ಗುಣಮುಖರಾಗುವಲ್ಲಿ ದಾದಿಯರ ಸೇವೆಯು ಅಪ್ರತಿಮ, ನಿಮ್ಮ ಈ ನಿಸ್ವಾರ್ಥ ಸೇವೆಯಿಂದ ಆಸ್ಪತ್ರೆಗೂ ಒಳ್ಳೆಯ ಹೆಸರು ಹಾಗೂ ವೈದ್ಯಕೀಯ ರಂಗದಲ್ಲಿ ನಿಮಗೆ ಸಿಗುವ ಮನ್ನಣೆ ಶ್ರೇಷ್ಠವಾದುದು ಎಂದು ಹೇಳಿದರು.
ವೈದ್ಯಕೀಯ ನೆರವು ಕೇವಲ ಸೇವೆಗಷ್ಟೇ ಸೀಮಿತವಾಗದೇ ರೋಗಿಗಳಿಗೆ ಸಾಂತ್ವನ ಹೇಳುವದು, ಸಾಮೂಹಿಕ ಕಾರ್ಯನಿರ್ವಹಣೆ ಹಾಗೂ ಮೃದುಭಾಷೆ ಬಳಕೆಯಿಂದ ರೋಗಿಗಳು ಬೇಗ ಗುಣಮುಖರಾಗುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಲ್ಇ ಹೊಮಿಯೊಪಥಿ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಎ. ಉಡಚಣಕರ, ಹಿರಿಯ ವೈದ್ಯ ಡಾ| ಬಿ.ಎಸ್.ವåಹಾಂತಶೆಟ್ಟಿ ಉಪಸ್ಥಿತರಿದ್ದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ವಿಕ್ರಾಂತ ನೇಸರಿ ಸ್ವಾಗತಿಸಿದರು, ಇಂದುಮತಿ ವಾಘಮಾರೆ ವಂದಿಸಿದರು.