Advertisement

ಯೋಧರ ಮತದಾನಕ್ಕಿದೆ ಸರ್ವಿಸ್‌ ಓಟರ್ ಸೌಲಭ್ಯ

06:55 AM Apr 13, 2018 | Team Udayavani |

ಬೆಂಗಳೂರು: ಗಡಿಯಲ್ಲಿದ್ದು ದೇಶ ಕಾಯುವ ಮತ್ತು ಗಡಿಯಾಚೆ ದೇಶ ಸೇವೆ ಮಾಡುವವರು ತಾವು ಇರುವ ಕಡೆಗಳಿಂದಲೇ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಬಹುದಾಗಿದೆ. ಇದಕ್ಕೆ ಚುನಾವಣಾ ಆಯೋಗ “ಸರ್ವಿಸ್‌ ಓಟರ್’ ಎಂಬ ಹೆಸರು ಕೊಟ್ಟಿದೆ.

Advertisement

ಕೇಂದ್ರ ಶಸಸ್ತ್ರ ಮೀಸಲು ಪಡೆ, ಸೇನಾ ಕಾಯ್ದೆ 1950ರ ಪ್ರಕಾರ ವಿವಿಧ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಬೇರೆ ರಾಜ್ಯಗಳ ಶಸಸ್ತ್ರ  ಪೊಲೀಸ್‌ ಪಡೆಗಳಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಕೇಂದ್ರ ಸರ್ಕಾರದ ಸೇವೆಯ ಮೇಲೆ ಹೊರದೇಶಗಳಲ್ಲಿ ನಿಯೋಜಿಸಲ್ಪಟ್ಟವರಿಗೆ ಈ “ಸರ್ವಿಸ್‌ ಓಟರ್’ ವ್ಯವಸ್ಥೆ ತರಲಾಗಿದೆ.

ಭಾರತೀಯ ಸೇನೆ,ನೌಕಾ ಸೇನೆ, ವಾಯು ಸೇನೆಯ ಸಿಬ್ಬಂದಿ ಮತ್ತು ಅಧಿಕಾರಿಗಳು. ಜನರಲ್‌ ಇಂಜಿನಿಯರ್‌ ರಿಸರ್ವ್‌
ಫೋರ್ಸ್‌, ಬಿಎಸ್‌ಎಫ್,ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌, ಅಸ್ಸಾಂ ರೈಫ‌ಲ್ಸ್‌, ನ್ಯಾಷನಲ್‌ ಸೆಕ್ಯೂರಿಟಿ ಗಾರ್ಡ್ಸ್, ಸಿಆರ್ ಪಿಎಫ್, ಸಿಐಎಸ್‌ಎಫ್ ಮತ್ತು ಸಶಸ್ತ್ರ ಸೀಮಾ ಬಲದಲ್ಲಿ ಸೇವೆ ಸಲ್ಲಿಸುತ್ತಿರುವವರು ಸರ್ವಿಸ್‌ ಓಟರ್ ಆಗಲು ಅರ್ಹತೆ ಪಡೆದುಕೊಂಡಿರುತ್ತಾರೆ. ಸೇನೆಯಲ್ಲಿ ಸೇವೆ ಸಲ್ಲಿಸುವವರು ಅರ್ಜಿ ನಮೂನೆ 2 ಮತ್ತು 2ಎ ಭರ್ತಿ ಮಾಡಬೇಕು ಹಾಗೂ ಬೇರೆ ದೇಶಗಳಲ್ಲಿ ಸೇವೆ ಸಲ್ಲಿಸುವವರು ಅರ್ಜಿ ನಮೂನೆ 3ರ ಭರ್ತಿ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಸಿಕೊಂಡಿರುತ್ತಾರೆ.

ನಾಮಪತ್ರ ಪರಿಶೀಲನೆ ಮುಗಿದು ಕಣದಲ್ಲಿರುವ ಅಭ್ಯರ್ಥಿಗಳು ಅಂತಿಮಗೊಂಡ ಬಳಿಕ ಆ ಅಭ್ಯರ್ಥಿಗಳ ಹೆಸರು, ಪಕ್ಷ, ಚಿನ್ಹೆ, ಭಾವಚಿತ್ರ ಹೊಂದಿರುವ ವಿಶೇಷ”ಎಲೆಕ್ಟ್ರಾನಿಕ್‌ ಬ್ಯಾಲೆಟ್‌’ಗಳನ್ನು ಆನ್‌ಲೈನ್‌ ಮೂಲಕ ಕಳಿಸಲಾಗುತ್ತದೆ. ಈ ಎಲೆಕ್ಟ್ರಾನಿಕ್‌ ಬ್ಯಾಲೆಟ್‌ಗಳು ಸಂಬಂಧಪಟ್ಟ ಸರ್ವಿಸ್‌ ಓಟರ್ ಮಾತ್ರ ಸ್ವೀಕರಿಸುವ, ಅದನ್ನು ಆನ್‌ ಲೈನ್‌ನಲ್ಲಿ ಓಪನ್‌ ಮಾಡುವ ವಿಶೇಷ ಸೆಕ್ಯೂರಿಟಿ ಕೋಡ್‌ಗಳನ್ನು ಹೊಂದಿರುತ್ತದೆ. ಎಲೆಕ್ಟ್ರಾನಿಕ್‌ ಬ್ಯಾಲೆಟ್‌ಗಳಲ್ಲಿ ತಮ್ಮ ಆಯ್ಕೆಗೆ ಗುರುತು ಹಾಕಿ ಅದನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ರೆಜಿಸ್ಟರ್‌ ಪೋಸ್ಟ್‌ ಮೂಲಕ ಕಳಿಸಬಹುದು. ಅಲ್ಲದೇ ತಾನು ಆಯ್ಕೆ ಮಾಡಿದ ಅಥವಾ ನೇಮಿಸಿದ ಪ್ರತಿನಿಧಿಯ (ಪ್ರಾಕ್ಸಿ) ಮೂಲಕವೂ ಮತ ಚಲಾಯಿಸುವ ಅವಕಾಶವೂ ಇರುತ್ತದೆ. 2018ರ ವಿಧಾನಸಭಾ ಚುನಾವಣೆಗೆ ನಮ್ಮ ರಾಜ್ಯದಲ್ಲಿ 27,461 ಪುರುಷರು ಮತ್ತು 447 ಮಹಿಳೆಯರು ಸೇರಿ ಒಟ್ಟು 27,908 ಸರ್ಮಿಸ್‌ ಓಟರ್ ನೋಂದಣಿ ಮಾಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next