Advertisement
ತನ್ನ ಆದಾಯ ಮೂಲಗಳನ್ನು ಬಲಪಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಲು ಯತ್ನಿಸುತ್ತಿರುವ ಬಿಬಿಎಂಪಿ, ನಗರದಲ್ಲಿನ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಈಗಾಗಲೇ ಸೇವಾ ಶುಲ್ಕ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿದೆ. ನೋಟಿಸ್‌ಗೆ ಸ್ಪಂದಿಸಿ ಬಹುತೇಕ ಕಟ್ಟಡಗಳು ಸೇವಾ ಶುಲ್ಕ ಪಾವತಿಗೆ ಮುಂದಾಗಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಕ್ಷಣಾ ಹಾಗೂ ರೈಲ್ವೆ ಇಲಾಖೆಗೆ ಸೇರಿದಂತೆ ಸಾವಿರಾರು ಎಕರೆ ಜಮೀನು ಸೇರಿದಂತೆ ಕೇಂದ್ರ ಭಾಗದಲ್ಲಿ ನಿವೇಶನಗಳಿವೆ. ನಗರಾಭಿವೃದ್ಧಿ ಇಲಾಖೆಯ ಆದೇಶದಲ್ಲಿ ರೈಲ್ವೆ ಇಲಾಖೆಯು ಹಣಕಾಸು ಇಲಾಖೆಯ ನಿಯಮಾವಳಿಗಳನ್ನು ಉಲ್ಲಂ ಸುವಂತಿಲ್ಲ.
Related Articles
Advertisement
ಡಿಮ್ಯಾಂಡ್ ನೋಟಿಸ್ ಜಾರಿ: ಸೇವಾ ಶುಲ್ಕ ಪಾವತಿಸುವಂತೆ ನಗರದಲ್ಲಿನ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳಿಗೆ ಪಾಲಿಕೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದೆ. ಆಸ್ತಿ ತೆರಿಗೆಯಿಂದ ವಿನಾಯ್ತಿ ಪಡೆದಿರುವ ಒಟ್ಟು 867 ಕಟ್ಟಡಗಳಿಗೆ 2017-18ನೇ ಸಾಲಿನ ಸೇವಾ ಶುಲ್ಕ ಪಾವತಿಸುವಂತೆ ನೋಟಿಸ್ ನೀಡಲಾಗಿದ್ದು,
ಅದರಲ್ಲಿ ಕೇಂದ್ರ ಸರ್ಕಾರದ ಎಚ್‌ಎಎಲ್, ರೈಲ್ವೆಗಾಲಿ ಕಾರ್ಖಾನೆ, ಬಿಎಚ್‌ಇಎಲ್ ಸೇರಿ ಇತರೆ ಇಲಾಖೆಗಳ ಕಟ್ಟಡಗಳು ಹಾಗೂ ವಿಧಾನಸೌಧ, ಹೈಕೋರ್ಟ್, ಎಂಎಸ್ ಬಿಲ್ಡಿಂಗ್, ವಿಕಾಸಸೌಧ, ಶಾಸಕರ ಭವನ ಸೇರಿ ಇತರೆ ರಾಜ್ಯ ಸರ್ಕಾರಿ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆಯಿಂದ ಯಾರಿಗೆ ವಿನಾಯ್ತಿ?: ಆಸ್ತಿ ತೆರಿಗೆ ಸಂಗ್ರಹ ಸಂಬಂಧಿಸಿದಂತೆ ಕೆಲವೊಂದು ನಿಯಮಗಳ ಅಡಿಯಲ್ಲಿ ಸರ್ಕಾರಿ ಕಟ್ಟಡಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳು ಒದಗಿಸುವ ಸೇವೆಗಳಿಗೆ ಶೇ.25ರಷ್ಟು ಸೇವಾ ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಈವರೆಗೆ ಶೈಕ್ಷಣಿಕ ಸಂಸ್ಥೆಗಳು ಹೊರುತು ಪಡಿಸಿ ಯಾವುದೇ ಸರ್ಕಾರಿ ಸಂಸ್ಥೆಗಳು ಸೇವಾ ಶುಲ್ಕ ಪಾವತಿಗೆ ಮುಂದಾಗಿಲ್ಲ.
ಶಕ್ತಿ ಕೇಂದ್ರದಿಂದಲೂ ಬಾಕಿ: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಿಂದಲೂ ಪಾಲಿಕೆಗೆ ಈವರೆಗೆ ಸೇವಾ ಶುಲ್ಕ ಸಂಗ್ರಹವಾಗಿಲ್ಲ. ಜತೆಗೆ ಹೈಕೋರ್ಟ್, ಬಹುಮಹಡಿ ಕಟ್ಟಡ, ರಾಜಭವನ, ಡಿಜಿ-ಐಜಿಪಿ ಕಚೇರಿ ಸೇರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಕಟ್ಟಡಗಳಿಂದ ಪಾಲಿಕೆಗೆ ಕೋಟ್ಯಂತರ ರೂ. ಸೇವಾ ಶುಲ್ಕ ಸಂಗ್ರಹವಾಗಬೇಕಿದೆ. ಸುಪ್ರೀಂ ಕೋರ್ಟ್ ಆದೇಶ ಪ್ರತಿ ಲಗತ್ತಿಸಿ ನೋಟಿಸ್ ಜಾರಿ ಮಾಡಿದ ಪರಿಣಾಮ ಕೆಲವರು ಶುಲ್ಕ ಪಾವತಿಗೆ ಮುಂದಾಗುತ್ತಿದ್ದಾರೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
10.73 ಕೋಟಿ ರೂ. ಆದಾಯ ಸಂಗ್ರಹ: ಬಿಬಿಎಂಪಿ ಅಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ ಒಟ್ಟು 867 ಕಟ್ಟಡಗಳಿಗೆ ಒಟ್ಟು 15.11 ಕೋಟಿ ರೂ.ಗಳ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದ್ದಾರೆ. ಆ ಪೈಕಿ 624 ಕಟ್ಟಡಗಳಿಂದ ಒಟ್ಟು 10.73 ಕೋಟಿ ರೂ. ಸೇವಾ ಶುಲ್ಕ ಸಂಗ್ರಹವಾಗಿದ್ದು, ಇನ್ನೂ 4.38 ಕೋಟಿ ರೂ. ಬಾಕಿಯಿದೆ. ಜತೆಗೆ ಮತ್ತಷ್ಟು ಆಸ್ತಿಗಳನ್ನು ಸೇವಾ ಶುಲ್ಕ ವ್ಯಾಪ್ತಿಗೆ ತರಲು ಮುಂದಾಗಿರುವ ಬಿಬಿಎಂಪಿ ಶೀಘ್ರದಲ್ಲಿಯೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ.
ಮಾಹಿತಿ ಸಂಗ್ರಹ ಕಾರ್ಯ ಆರಂಭ: ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಆಸ್ತಿಗಳಿಂದ ಸೇವಾ ಶುಲ್ಕ ಸಂಗ್ರಹಿಸಲು ನಿರ್ಧರಿಸಿರುವ ಬಿಬಿಎಂಪಿ, ನಗರದಲ್ಲಿನ ವಾಯು ಸೇನೆ, ರಕ್ಷಣಾ ಇಲಾಖೆಯ ಇಲಾಖೆಯ ವಿವಿಧ ವಿಭಾಗಗಳು ಹಾಗೂ ರೈಲ್ವೆ ಇಲಾಖೆಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ಸೇವಾ ಶುಲ್ಕ ವ್ಯಾಪ್ತಿಗೆ ತರಲು ಮುಂದಾಗಿದ್ದು, ಆ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದನ್ವಯ ಕೇಂದ್ರ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ರಕ್ಷಣಾ ಹಾಗೂ ರೈಲ್ವೆ ಇಲಾಖೆಗಳ ಆಸ್ತಿಗಳಿಂದಲೂ ಸೇವಾ ಶುಲ್ಕ ಸಂಗ್ರಹಿಸಲು ಅವಕಾಶವಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ಎಷ್ಟು ಆಸ್ತಿಗಳಿವೆ ಎಂಬ ಮಾಹಿತಿ ಕಲೆಹಾಕಿ ನಂತರ ಅವುಗಳನ್ನು ಸೇವಾ ಶುಲ್ಕ ವ್ಯಾಪ್ತಿಗೆ ತರಲು ಅಗತ್ಯ ಕ್ರಮಕೈಗೊಳ್ಳಲಾಗುವುದು.-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ ಸುಪ್ರೀಂ ಕೋರ್ಟ್ ಆದೇಶದನ್ವಯ ಸರ್ಕಾರಿ ಕಟ್ಟಡ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಸೇವಾ ಶುಲ್ಕ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದ್ದು, ಕೆಲವರು ಶುಲ್ಕ ಪಾವತಿಸಲು ಮುಂದಾಗಿದ್ದಾರೆ.
-ಎಂ.ಕೆ.ಗುಣಶೇಖರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ * ವೆಂ.ಸುನೀಲ್‌ಕುಮಾರ್