Advertisement
ಇದರೊಟ್ಟಿಗೆ ವರ್ಷದಿಂದೀಚೆಗೆ 10 ಸಾವಿರದಷ್ಟು ಹೊಸ ಕಾರ್ಡ್ ವಿತರಿಸಲಾಗಿದೆ. ಎಲ್ಲ ನ್ಯಾಯಾಬೆಲೆ ಅಂಗಡಿಗಳ ಮುಂದೆ ದಿನವಿಡೀ ಕೈನಿಂತರೂ ಪಡಿತರ ಪಡೆಯಲಾರದೆ ಹಿಡಿ ಶಾಪಹಾಕಿ ವಾಪಾಸ್ ಮರಳುವಂತಾಗಿದೆ. ತಾಲೂಕಿನ 108 ನ್ಯಾಯಬೆಲೆ ಅಂಗಡಿಗಳಲ್ಲೂ ಇದೇ ಸ್ಥಿತಿ ಎದುರಾಗಿದ್ದು, ಪಡಿತರಕ್ಕಾಗಿಯೇ ದಿನವಿಡೀ ಕಾಯಬೇಕಾದ ಹೀನಾಯ ಸ್ಥಿತಿಗೆ ತಲುಪಿದೆ.
Related Articles
Advertisement
ಹಾಡಿಲಿ ಸರ್ವರ್ ಸಮಸ್ಯೆಯೇ ಇಲ್ಲ?: ಗಿರಿಜನ ಹಾಡಿಗಳಲ್ಲಿ ಸರ್ವರ್ ಸಂಪರ್ಕ ಸಿಗುವುದಿಲ್ಲವೆಂಬ ಮುನ್ಸೂಚನೆಯಿಂದ ತಾಲೂಕಿನ 8 ಹಾಡಿಗಳಲ್ಲಿ ಹಿಂದಿನ ವ್ಯವಸ್ಥೆಯಂತೆ ಸಹಿ ಪಡೆದು ಕಾರ್ಡಿಗೆ ಪಡಿತರ ನೀಡಲಾಗುತ್ತಿದೆ. ಇಲ್ಯಾವ ಸರ್ವರ್ ಸಮಸ್ಯೆ ಕಾಡದಿದ್ದರೂ ನಿಗದಿತ ದಿನಗಳಂದು ಮಾತ್ರ ವಿತರಿಸುತ್ತಿರುವುದರಿಂದ ಕೂಲಿಗೆ ಕೊಡಗು ಮತ್ತಿತರೆಡೆ ತೆರಳುವ ಬಹಳಷ್ಟು ಮಂದಿ ಪಡಿತರದಿಂದ ವಂಚಿತರಾಗುತ್ತಿದ್ದಾರೆ.
ತಾಂತ್ರಿಕತೆ ಅತಂತ್ರ: ಅಕ್ರಮ ತಡೆಗಟ್ಟಲು ತಾಂತ್ರಿಕತೆ ಬಳಸಿರುವ ಸರ್ಕಾರ ಅನಗತ್ಯ ಸರ್ವರ್ ತೊಂದರೆಯನ್ನು ಸರಿಪಡಿಸುವಲ್ಲಿ ವಿಫಲವಾಗಿದೆ. ಇಂಟರ್‌ನೆಟ್‌ನ ಸಾಮರ್ಥ್ಯ ಹೆಚ್ಚಿಸಿ ಸರ್ವರ್ ಎಲ್ಲಕಾಲದಲ್ಲೂ ಸಿಗುವಂತೆ ವ್ಯವಸ್ಥೆ ಕಲ್ಪಿಸುವ ಅತ್ಯಗತ್ಯವಾಗಿದೆಯಾದರೂ ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಚಕಾರವೆತ್ತದಿರುವುದು ಯಾತಕ್ಕೆಂಬುದು ನಿಗೂಢವಾಗಿದೆ.
ಅಕ್ಕಿ ಓಕೆ-ಉಳಿದಕ್ಕೆ ತಡೆಯಾಕೆ: ಹಿಂದಿನಿಂದಲೂ ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರ ಅಕ್ಕಿಯೊಂದಿಗೆ ಸೀಮೆಎಣ್ಣೆ. ಸಕ್ಕರೆ, ಎಣ್ಣೆ, ಉಪ್ಪು ನೀಡುತ್ತಿತ್ತು. ಕಳೆದೆರಡು ವರ್ಷದ ಹಿಂದೆ ಗ್ಯಾಸ್ ಸಂಪರ್ಕ ಕಲ್ಪಿಸಿದಾಗಿನಿಂದ ಗ್ಯಾಸ್ ಇಲ್ಲದವರಿಗೂ ಸೀಮೆ ಎಣ್ಣೆ ಸಿಗದಂತಾಗಿದೆ. ಇನ್ನೂ ಕಳೆದ ಕೆಲ ತಿಂಗಳಿನಿಂದ ಸಕ್ಕರೆ, ಉಪ್ಪು, ಎಣ್ಣೆಗೂ ಸಂಚಕಾರ ಒಡ್ಡಿದ್ದು, ಬಡವರ ಹೊಟ್ಟೆಮೇಲೆ ಹೊಡೆದಂತಾಗಿದೆ. ಈಗ ಕುಟುಂಬದ ಒಬ್ಬ ಸದಸ್ಯನಿಗೆ 7 ಕೆಜಿ ಅಕ್ಕಿ ನೀಡಿದರೆ ಕುಟುಂಬಕ್ಕೆ ಒಂದು ಕೆಜಿ ತೊಗರಿ ಬೇಳೆ ನೀಡುತ್ತಿದ್ದಾರೆ. ಸರ್ವರ್ ಪ್ರಾಬ್ಲಿಮ್ ನಿಂದಾಗಿ ಅದಲ್ಲೂ ಸಂಚಕಾರ ಬಂದೊದಗಿದೆ.
ನಮ್ಮೂರಿನಿಂದ ಪಕ್ಕದ ಮೂರು ಕಿ.ಮೀ ದೂರದ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಪಡೆಯಬೇಕಿದೆ. ತಿಂಗಳಲ್ಲಿ ಕನಿಷ್ಠ ಮೂರುದಿನ ಪಡಿತರಕ್ಕಾಗಿ ಕಾಯಬೇಕು. ಸರ್ಕಾರ ಸರ್ವರ್ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ರೈತರು, ಕೃಷಿ ಕಾರ್ಮಿಕರು ನೆಮ್ಮದಿಯಿಂದ ಪಡಿತರ ಪಡೆದುಕೊಳ್ಳಲು ಕ್ರಮ ವಹಿಸಬೇಕೆಕು.-ದಾಸನಪುರದ ಮಹದೇವಪ್ಪ, ಪಡಿತರ ಫನಾನುಭವಿ ಕಾಂಗ್ರೆಸ್ ಸರ್ಕಾರವೇನೋ ಅತೀ ಕಡಿಮೆ ದರದಲ್ಲಿ ಪಡಿತರ ನೀಡಿ ಬಡವರಿಗೆ ನೆರವಾಗಿದೆ. ಆದರೆ ಇದನ್ನು ಪಡೆಯಲು ದುಸ್ಸಾಹಸ ಪಡಬೇಕಿದೆ. ಮಹಿಳೆಯರು ಊಟ-ತಿಂಡಿ, ಕೂಲಿ ಬಿಟ್ಟು ಪಡಿತರ ತರಲು ಪಕ್ಕದೂರಿಗೆ ತೆರಳಬೇಕಿದೆ. ಆಗುತ್ತಿರುವ ತೊಂದರೆಯನ್ನು ತಪ್ಪಿಸಿ.
-ದೊಡ್ಡಹೆಜೂರು ಸುನಿಲ್, ಪಡಿತರ ಫಲಾನುಭವಿ ಆನ್ ಲೈನ್ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಕೆಲವೊಮ್ಮೆ ಸರ್ವರ್ ಪ್ರಾಬ್ಲಿಮ್ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆದರೆ ಹಳ್ಳಿಗಳಲ್ಲಿ ನೆಟ್ ವರ್ಕ್ ಸಿಗದಿರುವ ಬಗ್ಗೆಯೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಪ್ರಭುಸ್ವಾಮಿ, ಹುಣಸೂರು ಆಹಾರ ಶಿರಸ್ತೆದಾರ್ * ಸಂಪತ್ ಕುಮಾರ್