Advertisement

ಸರ್ವರ್‌ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣು

01:00 AM Mar 10, 2019 | Team Udayavani |

ಕೋಟ: ಅಟಲ್‌ ಜೀ ಜನಸ್ನೇಹಿ ಕೇಂದ್ರದಲ್ಲಿ  ಸುಮಾರು 15ದಿನಗಳಿಂದ  ಆನ್‌ಲೈನ್‌ ಸಮಸ್ಯೆ ಎದು ರಾಗಿದ್ದು ಜಿಲ್ಲೆಯ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಿಗೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಗಮಿಸುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

Advertisement

ನಮೂನೆ 57 ಅರ್ಜಿ ಸಲ್ಲಿಕೆಗೆ ಸಮಸ್ಯೆ 
ಸರಕಾರಿ ಭೂಮಿಯಲ್ಲಿ ಅನ ಧಿಕೃತ ಸಾಗುವಳಿ ಮಾಡಿರುವ ಜಾಗವನ್ನು ಸಕ್ರಮ ಗೊಳಿಸಿಕೊಳ್ಳುವುದಕ್ಕಾಗಿ ನಮೂನೆ 57ರಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು  ನೂರಾರು ಮಂದಿ ಅರ್ಜಿ ಸಲ್ಲಿಕೆಗೆ ಆಗಮಿಸುತ್ತಿದ್ದಾರೆ. ಆದರೆ  ಸರ್ವರ್‌ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ದಿನವಿಡೀ ಕಾಯ ಬೇಕಾಗುತ್ತಿದೆ. 

ಬೆಳಗ್ಗೆ 6 ಗಂಟೆಯಿಂದಲೇ ಜನ  
ಕೋಟದ ಜನಸ್ನೇಹಿ ಕೇಂದ್ರದಲ್ಲಿ  ಪ್ರತಿದಿನ ಬೆಳಗ್ಗೆ 6 ಗಂಟೆಯಿಂದಲೇ ಅರ್ಜಿ ಸಲ್ಲಿಕೆಗಾಗಿ ಸರತಿಯ ಸಾಲು ಆರಂಭವಾಗುತ್ತದೆ, ಕಚೇರಿ ಬಾಗಿಲು ತೆರೆವಾಗ ನೂರಾರು ಮಂದಿ ಸಾಲಿನಲ್ಲಿ ನಿಂತಿರುತ್ತಾರೆ. ಆರಂಭದಲ್ಲಿ ಸುಮಾರು 50 ಅರ್ಜಿ ಹಾಕಲು ಅವಕಾಶವಿತ್ತು. ಆದರೆ ವಾರದಿಂದ ಸಮಸ್ಯೆ ಬಿಗಡಾಯಿಸಿದ್ದು 10-20 ಅರ್ಜಿ ಅಪ್‌ಲೋಡ್‌ ಮಾಡುವುದೂ ಕಷ್ಟವಾಗಿದೆ. ಇದರಿಂದ ಜನ ದಿನವಿಡೀ ಕಾದು ವಾಪಸ್ಸಾಗುತ್ತಿದ್ದಾರೆ. ಜತೆಗೆ ಆಧಾರ್‌, ಆದಾಯ ಪ್ರಮಾಣ ಪತ್ರ ಮುಂತಾದ ಕೆಲಸ-ಕಾರ್ಯಗಳಿಗೂ ಹಿನ್ನಡೆಯಾಗುತ್ತಿದೆ.

ಬೇರೆ ಕೌಂಟರ್‌, ಸಿಬಂದಿ ಅಗತ್ಯ  
ಜನಸ್ನೇಹಿ ಕೇಂದ್ರದ  ಹೆಚ್ಚಿನ ಕಡೆಗಳಲ್ಲಿ  ಒಂದೇ ಕಂಪ್ಯೂಟರ್‌, ಓರ್ವನೇ ಸಿಬಂದಿ ಕಾರ್ಯ ನಿರ್ವಹಿಸುವುದರಿಂದ ಹಿನ್ನಡೆಯಾಗಿದೆ. ಹೀಗಾಗಿ ಹೆಚ್ಚುವರಿ  ಕೌಂಟರ್‌ ಹಾಗೂ ಸಿಬಂದಿ ನೇಮಿಸಬೇಕು ಎನ್ನುವ ಬೇಡಿಕೆ ಇದೆ.

ಕಾಲಾವಕಾಶ ವಿಸ್ತರಿಸಲು ಆಗ್ರಹ  
ನಮೂನೆ 57 ಅರ್ಜಿ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ ನೀಡಲಾಗಿದೆ. ಆದರೆ ಅಷ್ಟರೊಳಗೆ ಚುನಾವಣೆ ಘೋಷಣೆಯಾದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎನ್ನುವ ಆತಂಕದಿಂದ ಜನರು ಮುಗಿಬೀಳುತ್ತಿದ್ದಾರೆ. ಪ್ರಸ್ತುತ ಸಾಕಷ್ಟು ಸಮಸ್ಯೆ ಇರುವುದರಿಂದ  ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕು ಅಥವಾ ತತ್‌ಕ್ಷಣ ಚುನಾವಣೆ ಘೋಷಣೆಯಾದರೆ, ಚುನಾವಣೆಯ ಅನಂತರ ಅರ್ಜಿ ಸ್ವೀಕರಿಸುವ ಭರವಸೆ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

 ಶೀಘ್ರ ಸರ್ವರ್‌ ಸರಿಪಡಿಸಿ 
 ನಾಲ್ಕು ದಿನದಿಂದ ಅರ್ಜಿ ಸಲ್ಲಿಕೆಗೆ ಬರುತ್ತಿದ್ದೇನೆ. ಬೆಳಗ್ಗೆ 6 ಗಂಟೆಗೆ ಬಂದು ನಿಂತಿದ್ದೇನೆ. ನನಗಿಂತ ಮೊದಲು  ಸಾಕಷ್ಟು ಮಂದಿ ಕಾಯುತ್ತಿದ್ದರಿಂದ ಸಂಜೆಯ ತನಕವೂ ಕೆಲಸವಾಗಿಲ್ಲ. ಶೀಘ್ರ ಸರ್ವರ್‌ ಸರಿಪಡಿಸಿ, ಇಲ್ಲವಾದರೆ ಅರ್ಜಿ ಸಲ್ಲಿಕೆಗೆ ಹೆಚ್ಚಿನ ಕಾಲಾವಕಾಶ ನೀಡಿ.
-ಶಂಕರ ಕಾಂಚನ್‌, ಅರ್ಜಿ ಸಲ್ಲಿಸಲು ಬಂದವರು

ಸಮಸ್ಯೆ ಶೀಘ್ರ ಪರಿಹಾರ
ಸರ್ವರ್‌ ಸಮಸ್ಯೆಯಿಂದ ಈ ರೀತಿಯಾಗುತ್ತಿದ್ದು ಕೆ.ಡಿ.ಪಿ. ಸಭೆಯಲ್ಲೂ ಈ ಕುರಿತು ಚರ್ಚೆಯಾಗಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ.  ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಕ್ರಮಕೈಗೊಳ್ಳಲಾಗುತ್ತದೆ.
-ಡಾ| ಎಸ್‌.ಎಸ್‌. ಮಧುಕೇಶ್ವರ್‌,  ಎ.ಸಿ. ಕುಂದಾಪುರ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next