Advertisement

ಸರ್ವರ್‌ ಸಮಸ್ಯೆ: ಸಿಬಂದಿಗೆ ಹೆಚ್ಚಿದ ಕೆಲಸದ ಒತ್ತಡ

11:27 PM Jul 04, 2019 | Sriram |

ಹಳೆಯಂಗಡಿ: ಕೃಷಿಕರಿಗೆ ವಾರ್ಷಿಕ ಆರು ಸಾವಿರ ರೂ. ಅರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದ್ದು, ಸಂಬಂಧಿಸಿದ ಗ್ರಾ. ಪಂ., ರೈತ ಸಂಪರ್ಕ ಕೇಂದ್ರ, ಗ್ರಾಮ ಲೆಕ್ಕಿಗರ ಕೇಂದ್ರ ಸಹಿತ ನಾಡ ಕಚೇರಿಯಲ್ಲಿ ನೋಂದಣಿ ಕಾರ್ಯ ಭರದಿಂದ ಸಾಗುತ್ತಿದೆ.

Advertisement

ಮೂಲ್ಕಿ ಹೋಬಳಿಯ ಮೂಲ್ಕಿ ನಗರ ಪಂಚಾಯತ್‌ ಸಹಿತ ಕಿಲ್ಪಾಡಿ, ಅತಿಕಾರಿಬೆಟ್ಟು, ಬಳ್ಕುಂಜೆ, ಐಕಳ, ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು, ಕೆಮ್ರಾಲ್, ಹಳೆಯಂಗಡಿ, ಪಡುಪಣಂಬೂರು ಗ್ರಾ.ಪಂ. ಸಹಿತ ಗ್ರಾಮ ಕರಣಿಕರ ಕಚೇರಿಯಲ್ಲಿ ಹಾಗೂ ಮೂಲ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ಈ ಅರ್ಜಿಗಳನ್ನು ಪಡೆಯಲಾಗುತ್ತಿದೆ.

ಸಿಬಂದಿಗೆ ಹೆಚ್ಚುವರಿ ಹೊಣೆ
ಕೃಷಿ ಇಲಾಖೆಗೆ ಮಾತ್ರ ಇದ್ದ ಈ ಹೊಣೆಯನ್ನು ಗ್ರಾ.ಪಂ.ಗೆ ವಿಸ್ತರಿಸಿದ್ದರಿಂದ ಪಂಚಾಯತ್‌ ಸಿಬಂದಿ ಹಾಗೂ ಕಂದಾಯ ಇಲಾಖೆಯ ಸಿಬಂದಿ ಹೆಚ್ಚುವರಿಯಾಗಿ ಈ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಕೆಲಸ ನಿರ್ವಹಿಸುತ್ತಿದ್ದು, ಸರ್ವರ್‌ ಸಮಸ್ಯೆಯಿಂದ ಒಂದು ಅರ್ಜಿಯನ್ನು ತಾಸುಗಟ್ಟಲೆ ಕಾದು ಅಪ್‌ಲೋಡ್‌ ಮಾಡಲಾಗುತ್ತಿದೆ. ಈ ನಡುವೆ ಇತರ ಕೆಲಸಗಳು ಸಹ ಬಾಕಿಯಾಗುತ್ತಿವೆ. ಅದಕ್ಕಾಗಿ ಕೆಲವರು ಬೆಳಗ್ಗೆ 7 ಗಂಟೆಗೆ ಮುಂಚಿತವಾಗಿ ಕಚೇರಿಗೆ ಬಂದು ರಾತ್ರಿ 8 ರ ವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಸರ್ವರ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಎಂದು ಸಿಬಂದಿ ದೂರಿಕೊಂಡಿದ್ದಾರೆ. ಕಳೆದ ಜೂ. 30 ರಂದು ಕೊನೆ ದಿನಾಂಕ ಎಂದು ಅಂದು ರವಿವಾರವೂ ಸಹ ಪೂರ್ಣಾವಧಿಯಲ್ಲಿ ಕೆಲಸ ನಿರ್ವಹಿಸಿದ್ದೇವೆ, ಒಂದು ದಿನದಲ್ಲಿ ಒಂದೇ ಅರ್ಜಿ ಅಪ್‌ಲೋಡ್‌ ಆಗಿದ್ದೂ ಸಹ ಇದೆ ಎಂದು ಸಿಬಂದಿಯೊಬ್ಬರು ತಿಳಿಸಿದ್ದಾರೆ.

ಪಿಎಂ ಸಮ್ಮಾನ್‌ಗೆ ಅಪಲೋಡ್‌
ಮೂಲ್ಕಿ ಹೋಬಳಿಯ ಎಲ್ಲ ಕಂದಾಯ ಇಲಾಖೆಯ ಗ್ರಾಮ ಕರಣಿಕ ಕಚೇರಿಯಿಂದ ಒಟ್ಟು 2,700 ಅರ್ಜಿ, ಮೂಲ್ಕಿ ರೈತ ಸಂಪರ್ಕ ಕೇಂದ್ರ-920, ಹೋಬಳಿಯ ಹತ್ತು ಗ್ರಾಮ ಪಂಚಾಯತ್‌ಗಳಿಂದ- 570 ಅರ್ಜಿಗಳು ಫ್ರೂೕಟ್ಸ್‌ ಎಂಬ ವೆಬ್‌ಪೋರ್ಟಲ್ಗೆ ಅಪ್‌ಲೋಡ್‌ ಆಗಿವೆ. ಸರ್ವರ್‌ ಸಮಸ್ಯೆಯಿಂದ ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಅಪ್‌ಲೋಡ್‌ ಆಗದೇ ಉಳಿದಿರುವ ಅರ್ಜಿಗಳ ಸಂಖ್ಯೆ ಸರಾಸರಿ 20ಕ್ಕಿಂತ ಹೆಚ್ಚಿವೆ.

ಸಿಬಂದಿಗೆ ಗೌರವಧನ
ಪಿಎಂ ಸಮ್ಮಾನ್‌ಗೆ ಅಪ್‌ಲೋಡ್‌ ಮಾಡುವ ಸಿಬಂದಿ ಸರಕಾರಿ ನೌಕರರಾದರೇ (ಉದಾಹರಣೆಗೆ ಗ್ರಾಮ ಕರಣಿಕ/ಪಂಚಾಯತ್‌ನ ಖಾಯಂ ಸಿಬಂದಿ) ಅವರಿಗೆ ಒಂದು ಅರ್ಜಿಗೆ 5 ರೂ., ಡಾಟಾ ಎಂಟ್ರಿಯನ್ನು ಮಾಡುವ ಪಂಚಾಯತ್‌ನ ತಾತ್ಕಾಲಿಕ ಸಿಬಂದಿಯಾದಲ್ಲಿ ಅರ್ಜಿಯೊಂದಕ್ಕೆ 10 ರೂ. ಗೌರವ ಧನ ನೀಡುವ ಸುತ್ತೋಲೆ ಇದೆ. ಆದರೆ ದಿನ ಪೂರ್ತಿ ಒಂದೋ ಅಥವಾ ಎರಡೋ ಅರ್ಜಿ ಅಪ್‌ಲೋಡ್‌ ಆದಲ್ಲಿ ಅದು ಎಷ್ಟರ ಮಟ್ಟಿಗೆ ಸಹಾಯವಾಗಬಹುದು. ಒಂದು ಪಂಚಾಯತ್‌ನಲ್ಲಿ 50ಕ್ಕಿಂತ ಹೆಚ್ಚು ಅರ್ಜಿಗಳು ಬಂದಿಲ್ಲ. ಒಂದು ತಿಂಗಳಿನಿಂದ ಇದೇ ಕಾರ್ಯದಲ್ಲಿರುವವರಿಗೆ ಏನು ಲಾಭ ಎಂಬ ಪ್ರಶ್ನೆಯನ್ನು ಸಿಬಂದಿ ವ್ಯಕ್ತಪಡಿಸುತ್ತಾರೆ.

Advertisement

ಸಮಸ್ಯೆ ಸಹಜ
ಬೃಹತ್‌ ಮಟ್ಟದ ಯೋಜನೆಯಾದುದರಿಂದ ಸರ್ವರ್‌ ಸಮಸ್ಯೆ ಕಾಡುವುದು ಸಹಜ. ಆದರೆ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ವಿವಿಧ ರೀತಿಯಲ್ಲಿ ಹಂಚಿಕೆಯಾಗಿರುವುದರಿಂದ ಅವಕಾಶ ಇದೆ. ಪಂಚಾಯತ್‌ನಲ್ಲಿ ಸಾಧ್ಯವಾಗದೇ ಇದ್ದಲ್ಲಿ ಅದನ್ನು ರೈತ ಸಂಪರ್ಕ ಕೇಂದ್ರಕ್ಕೆ ನೀಡಿದಲ್ಲಿ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಮಾಡಲಾಗುವುದು.
– ಅಬ್ದುಲ್ ಬಶೀರ್‌, ಪ್ರಭಾರ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಮೂಲ್ಕಿ

ನಾಡಕಚೇರಿಗೆ ನೀಡಲಿ
ಗ್ರಾಮ ಪಂಚಾಯತ್‌ನಲ್ಲಿ ಅಪ್‌ಲೋಡ್‌ನ‌ ಸಮಸ್ಯೆ ಇದ್ದಲ್ಲಿ ನೇರವಾಗಿ ಮೂಲ್ಕಿಯ ನಾಡ ಕಚೇರಿಗೆ ಅರ್ಜಿಯನ್ನು ತಲುಪಿಸಿದಲ್ಲಿ ನಾವು ಅದನ್ನು ಅಪ್‌ಲೋಡ್‌ ಮಾಡುತ್ತೇವೆ. ಸುತ್ತೋಲೆಯಂತೆ ನಿರ್ದಿಷ್ಟ ಸಮಯದಲ್ಲಿ ಕಾರ್ಯನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ. ಸರ್ವರ್‌ ಸಮಸ್ಯೆಯ ಕಾರಣ ಹೇಳಲು ಸಾಧ್ಯವಿಲ್ಲ.
– ದಿಲೀಪ್‌ ರೋಡ್ಕ‌ರ್‌, ಕಂದಾಯ ನಿರೀಕ್ಷಕರು, ಮೂಲ್ಕಿ ನಾಡಕಚೇರಿ

Advertisement

Udayavani is now on Telegram. Click here to join our channel and stay updated with the latest news.

Next