Advertisement

ಸರ್ವರ್‌ ಸಮಸ್ಯೆ: ಇ-ಕೆವೈಸಿ ಸ್ಥಗಿತ ; ಪಡಿತರ ವಿತರಣೆಗೂ ಸರ್ವರ್‌ ನಿಧಾನಗತಿ!

12:41 AM Jan 20, 2020 | Team Udayavani |

ಬಂಟ್ವಾಳ: ಸರಕಾರವು ಪಡಿತರ ಚೀಟಿ ಹೊಂದಿರುವ ಸದಸ್ಯರ ಇ-ಕೆವೈಸಿ (ಬೆರಳಚ್ಚು) ಸಂಗ್ರಹವನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯ ಗೊಳಿಸಿದ್ದು, ಆದರೆ ಸರ್ವರ್‌ ಸಮಸ್ಯೆ ಯಿಂದ ಅದು ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ಹಿಂದೆ ಜ. 10ರ ಬಳಿಕ ಮತ್ತೆ ಇ- ಕೆವೈಸಿ ಆರಂಭಗೊಳ್ಳಲಿದೆ ಎಂದು ಹೇಳಲಾಗಿ ದ್ದರೂ ಈಗ ಜ. 20ರ ಬಳಿಕ ಎನ್ನಲಾಗುತ್ತಿದೆ. ಈ ಸಮಸ್ಯೆ ಮಧ್ಯೆ ರೇಷನ್‌ ವಿತರಣೆಗೂ ಸರ್ವರ್‌ ಸಮಸ್ಯೆ ಕಾಡುತ್ತಿದೆ.!

Advertisement

ಸರಕಾರವು ಇ-ಕೆವೈಸಿ ಆರಂಭಿಸಿದ ಬಳಿಕ ಬಂಟ್ವಾಳ ತಾ|ನಲ್ಲಿ ಪಡಿತರ ಚೀಟಿ ಹೊಂದಿರುವ ಒಟ್ಟು 3,62,033 ಸದಸ್ಯರ ಪೈಕಿ ಈತನಕ ಒಟ್ಟು 1,28,063 ಸದಸ್ಯರು ಬೆರಳಚ್ಚು ನೀಡಿದ್ದಾರೆ. ಅಂದರೆ ತಾ|ನಲ್ಲಿ ಬೆರಳಚ್ಚು ಸಂಗ್ರಹ ಶೇ. 50ರಷ್ಟೂ ಪ್ರಗತಿ ಕಂಡಿಲ್ಲ. ಅಂದರೆ ಸರ್ವರ್‌ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಪಡಿತರ ವಿತರಣೆಗೂ ಸಮಸ್ಯೆ
ಇ-ಕೆವೈಸಿ ಸರ್ವರ್‌ ಸಮಸ್ಯೆ ಒಂದೆಡೆ ಯಾದರೆ, ಕಳೆದ ಹಲವು ಸಮಯಗಳಿಂದ ಕಾಡುತ್ತಿರುವ ಪಡಿತರ ವಿತರಣೆಯ ಸರ್ವರ್‌ ಸಮಸ್ಯೆಗೆ ಮುಕ್ತಿ ನೀಡಲು ಸರಕಾರದಿಂದ ಇನ್ನೂ ಆಗಿಲ್ಲ. ಬಹುತೇಕ ಕಡೆ ಈ ತಿಂಗಳ ಪಡಿತರ ವಿತರಣೆ ಜ. 16ಕ್ಕೆ ಆರಂಭಗೊಂಡಿದ್ದು, ಆದರೆ ಸರ್ವರ್‌ ನಿಧಾನಗತಿಯಲ್ಲಿರುವ ಕಾರಣ ಜನರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.

ಶನಿವಾರ ಕೆಲವೊಂದೆಡೆ ಒಬ್ಬರ ಪಡಿತರ ವಿತರಣೆಗೆ ಅರ್ಧ ಗಂಟೆಗಿಂತಲೂ ಹೆಚ್ಚಿನ ಸಮಯ ವ್ಯಯಿಸಲಾಗಿದೆ. ಸರ್ವರ್‌ ಸಮಸ್ಯೆ ಇಲ್ಲದೇ ಇದ್ದರೆ ಒಂದು ನಿಮಿಷದಲ್ಲಿ ಒಬ್ಬರ ವಿತರಣೆಯ ಪ್ರಕ್ರಿಯೆ ಮುಗಿಯುತ್ತದೆ. ಆದರೆ ನಿಧಾನಗತಿ ಇದ್ದಾಗ ಜನರನ್ನು ಕಾಯಿಸಬೇಕಿರುವುದು ಅನಿವಾರ್ಯ ಎಂದು ನ್ಯಾಯಬೆಲೆ ಅಂಗಡಿಯವರು ತಿಳಿಸಿದ್ದಾರೆ.

ತಾ|ನ 100 ನ್ಯಾಯಬೆಲೆ ಅಂಗಡಿಗಳ ಪೈಕಿ 90 ಅಂಗಡಿಗಳು ಗ್ರಾಮಾಂತರದಲ್ಲಿದ್ದು, 10 ಅಂಗಡಿಗಳು ನಗರ ಪ್ರದೇಶದಲ್ಲಿವೆ. ಗ್ರಾಮಾಂತರ ಪ್ರದೇಶದಲ್ಲಿ ಸರ್ವರ್‌ ಸಮಸ್ಯೆ ಜತೆಗೆ ನೆಟ್‌ವರ್ಕ್‌ ಸಮಸ್ಯೆಯ ದೂರುಗಳೂ ಇವೆ. ಒಟ್ಟು 67 ನ್ಯಾಯಬೆಲೆ ಅಂಗಡಿಗಳು ಸಹಕಾರ ಸಂಘಗಳ ಮೂಲಕ ನಡೆಯುತ್ತಿದ್ದರೆ, 33 ಅಂಗಡಿಗಳು ಖಾಸಗಿ ಯವರ ಮೂಲಕ ನಡೆಯುತ್ತಿದೆ.

Advertisement

ಸಮಸ್ಯೆಗೆ ಮುಕ್ತಿ ಸಿಗಲಿ
ಇ-ಕೆವೈಸಿ ಪ್ರಕ್ರಿಯೆಗೆ ಸರ್ವರ್‌ ಸಮಸ್ಯೆಯಿಂದಾಗಿ ಸರಕಾರ ಸರ್ವರ್‌ ಬದಲಾವಣೆ ಕುರಿತು ಹೇಳುತ್ತಿದ್ದು, ಇದರ ಜತೆಗೆ ಪಡಿತರ ವಿತರಣೆಯ ಸರ್ವರ್‌ ಸಮಸ್ಯೆಗೂ ಶಾಶ್ವತ ಮುಕ್ತಿ ನೀಡುವತ್ತ ಚಿಂತನೆ ನಡೆಸಬೇಕಿದೆ. ಇಲ್ಲದಿದ್ದರೆ ಜನರು ನಿಮಿಷದ ಕಾರ್ಯಕ್ಕೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಉಚಿತವಾಗಿ ಸಿಗುವ ಅಕ್ಕಿಗೆ ಸಂಬಳ ಕಳೆದುಕೊಂಡು ರಜೆ ಮಾಡಿ ನ್ಯಾಯಬೆಲೆ ಅಂಗಡಿಯ ಮುಂದೆ ಕಾಯಬೇಕಿದೆ.!

 ಜ.20ರ ಬಳಿಕ
ಪಡಿತರ ವಿತರಣೆ ಕಾರ್ಯ ಪ್ರಸ್ತುತ ನಡೆಯುತ್ತಿದ್ದು, ಕೆಲವು ಬಾರಿ ತೊಂದರೆ ಕಂಡುಬರುತ್ತದೆ. ಇ-ಕೆವೈಸಿ ಪ್ರಕ್ರಿಯೆ ಜ. 10ಕ್ಕೆ ಪ್ರಾರಂಭಗೊಳ್ಳುತ್ತದೆ ಎಂದು ಹೇಳಿದ್ದರೂ ಜ. 20ರ ಬಳಿಕ ಸರಿಯಾಗುತ್ತದೆ ಎಂದು ಬೆಂಗಳೂರಿನಿಂದ ಮಾಹಿತಿ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ಇ- ಕೆವೈಸಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
 - ಶ್ರೀನಿವಾಸ್‌
ಆಹಾರ ಶಿರಸ್ತೇದಾರರು,ತಾಲೂಕು ಕಚೇರಿ,ಬಂಟ್ವಾಳ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next