ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಪ್ರವೇಶಕ್ಕೆ ಜೂ. 15 ಕೊನೆಯ ದಿನವಾದರೂ ಸರ್ವರ್ ಸಮಸ್ಯೆಯಿಂದಾಗಿ ಇನ್ನೂವರೆಗೆ ವಿದ್ಯಾರ್ಥಿಗಳು ಅರ್ಜಿ ತುಂಬಲು ಸಾಧ್ಯವಾಗಿಲ್ಲ. ಇದರಿಂದ ರಾಜ್ಯಾದ್ಯಂತ ಆನ್‌ಲೈನ್ ಅರ್ಜಿಗಳೇ ಭರ್ತಿ ಆಗಿಲ್ಲ. ಶಾಲೆ ಸೇರಿ ವಾರಗಳು ಕಳೆದು ವಸತಿ ನಿಲಯಗಳಿಗೆ ಪ್ರವೇಶ ಬಯಸಿದ ವಿದ್ಯಾರ್ಥಿಗಳಲ್ಲಿ ಇದು ಆತಂಕ ಸೃಷ್ಟಿಸಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಕಳೆದ 20 ದಿನಗಳ ಹಿಂದೆಯೇ ವಸತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಜೂ.15 ಕೊನೆಯ ದಿನವಾಗಿದೆ. ಆದರೆ ಇನ್ನೂವರೆಗೆ ರಾಜ್ಯಾದ್ಯಂತ ಅರ್ಜಿಗಳೇ ಭರ್ತಿ ಆಗಿಲ್ಲ. ಹೀಗಾಗಿ ಪಾಲಕರು ಹಾಗೂ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ.
5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಅವಶ್ಯ ಇರುವ ಕಡೆಗೆ ಭರ್ತಿ ಮಾಡಿ ಅರ್ಜಿ ಕಳುಹಿಸಬೇಕಾಗುತ್ತದೆ. ಶಾಲೆಗಳು ಆರಂಭವಾಗಿ 15 ದಿನ ಕಳೆದರೂ ಅರ್ಜಿ ತುಂಬುವ ಪ್ರಕ್ರಿಯೆಯೇ ಆರಂಭವಾಗಿಲ್ಲ.
ಮೊದಲ ಎರಡು ದಿನ ಅರ್ಜಿ ಭರ್ತಿ ಆಗಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಇದು ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಈ ಸಮಸ್ಯೆ ರಾಜ್ಯಾದ್ಯಂತ ಇದ್ದರೂ ಇಲಾಖೆಗೆ ಸಂಬಂಧಿಸಿದವರು ಇದನ್ನು ಇನ್ನೂವರೆಗೆ ಸರಿಪಡಿಸಲು ಮುಂದಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸದಿಂದ ವಂಚಿತರಾಗುವ ಭಯ ಕಾಡುತ್ತಿದೆ. ಕೂಡಲೇ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ www.sw.kar.nic.in ತೆರೆದರೆ ವಿದ್ಯಾರ್ಥಿ ನಿಲಯಗಳ ಪ್ರವೇಶ ಎಂಬ ಐಕಾನ್ ಕ್ಲಿಕ್ ಮಾಡಬೇಕಾಗುತ್ತದೆ. ವಸತಿನಿಲಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಾಗ ಇದೇ ಮೊದಲ ಬಾರಿಗೆ ಎಸ್‌ಟಿಎಸ್(ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ನಂಬರ್ ನಮೂದಿಸಬೇಕಾಗುತ್ತದೆ. ವೆಬ್‌ಸೈಟ್ ಓಪನ್ ಆದ ಬಳಿಕ ರಿಜಿಸ್ಟರ್ ಎಂಬುದನ್ನು ಕ್ಲಿಕ್ ಮಾಡಿ ಪ್ರಿ ಮೆಟ್ರಿಕ್ ಓಪನ್ ಮಾಡಿದರೆ ಮುಂದೆ ವಿದ್ಯಾರ್ಥಿ ತನ್ನ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಎಸ್‌ಟಿಎಸ್ ನಂಬರ್ ನಮೂದಿಸಿ ಮುಂದೆ ಸಾಗಬೇಕಾಗುತ್ತದೆ. ಇಲ್ಲಿಯವರೆಗೆ ಮಾತ್ರ ತೆರೆಯುವ ಈ ಪುಟ ಮುಂದೆ ಎರರ್ ಎಂಬುದಾಗಿ ಬರುತ್ತದೆ. ಎಸ್‌ಟಿಎಸ್ ನಂಬರ್ ಲಿಂಕ್ ಆಗುವುದಿಲ್ಲ. ಜತೆಗೆ ಸರ್ವರ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಈಗಾಗಲೇ ಈ ವಿಷಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಕಾಡುತ್ತಿದೆ. ಬಹುತೇಕ ವಿದ್ಯಾರ್ಥಿಗಳು ಅರ್ಜಿ ತುಂಬುವುದರಿಂದ ವಂಚಿತರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಗೆ ಹೋಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಫೋಟೊ, ಎಸ್‌ಟಿಎಸ್ ನಂಬರ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಚೇರಿಗಳಿಗೆ ಸಲ್ಲಿಸುವ ಕಾರ್ಯ ನಡೆದಿದೆ. ಆದರೆ ಕಡ್ಡಾಯವಾಗಿ ಆನ್‌ಲೈನ್ ಇದ್ದಿದ್ದರಿಂದ ಸಮಸ್ಯೆ ಪರಿಹಾರವಾಗುತ್ತಿಲ್ಲ.
ವೆಬ್‌ಸೈಟ್‌ನಲ್ಲಿ ದಾಖಲಿಸಿರುವ ವಸತಿನಿಲಯ ಪ್ರವೇಶದ ಲಿಂಕ್ ಮುಂದೆ ಓಪನ್ ಆಗುತ್ತಿಲ್ಲ. ಸುಮಾರು 20 ದಿನಗಳಿಂದ ಇದೇ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಹೀಗಾಗಿ ಅಧಿಕಾರಿಗಳು ಇತ್ತ ಗಮನಹರಿಸಿ ಆನ್‌ಲೈನ್ ಸೇವೆ ಸರಿಪಡಿಸಬೇಕು. ಸರ್ವರ್ ಎರರ್ ಬರದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗುವಂಥ ವ್ಯವಸ್ಥೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
•ಭೈರೋಬಾ ಕಾಂಬಳೆ