Advertisement

ಇಡೀ ಜಗದಲ್ಲಿ ಗೋವಿನ ಸೇವೆ ನಡೆಯಲಿ

04:52 PM May 10, 2022 | Team Udayavani |

ಸಿದ್ದಾಪುರ: ಈ ಜಗತ್ತನ್ನು ಉಳಿಸಿರುವ ಸಪ್ತ ತತ್ವಗಳಲ್ಲಿ ಮೊದಲ ಸ್ತಂಭವೇ ಗೋವು. ಇಂತಹ ಗೋವಿನ ಸೇವೆ ಈ ಜಗದಲ್ಲಿ ನಡೆಯಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.

Advertisement

ತಾಲೂಕಿನ ಭಾನ್ಕುಳಿ ಶ್ರೀರಾಮದೇವ ಮಠ-ಗೋಸ್ವರ್ಗದಲ್ಲಿ ಜರುಗಿದ ಶಂಕರಪಂಚಮೀ ಉತ್ಸವದಲ್ಲಿ ಶ್ರೀಮಠದ ಕಾಮದುಘಾ ಟ್ರಸ್ಟ್‌ ಹಾಗೂ ದಿನೇಶ ಶಹ್ರಾ ಫೌಂಡೇಶನ್‌ ಮುಂಬೈ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಗೋವಿನ ಸಂರಕ್ಷಣೆಯಲ್ಲಿ ಹತ್ತಾರು ರೀತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾಡಿನ ವಿವಿಧ ಭಾಗಗಳ ಐವರು ಸಾಧಕರಿಗೆ ಗೋಪಾಲ ಗೌರವ-2022 ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಗೋಪಾಲ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ಗೋಸಂರಕ್ಷಣೆಯಲ್ಲಿ ಉಳಿದವರಿಗೂ ಆಸಕ್ತಿ ಹೆಚ್ಚಲಿ ಎಂಬ ಉದ್ದೇಶವೂ ಅಡಗಿದೆ. ಇಂದು ಇಂಧನದ ಕೊರತೆ ತಲೆದೋರುತ್ತಿದ್ದು 20 ಕಿ.ಮಿ.ವರೆಗಿನ ದೂರ ಕ್ರಮಿಸಲು ಹಿಂದಿನಂತೆ ಎತ್ತಿನ ಗಾಡಿ ಬಳಸುವುದು ಸೂಕ್ತ. ಇದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ ಎಂದರು.

ಗೋಸ್ವರ್ಗ ನಮ್ಮೆಲ್ಲರ ಸಂಪತ್ತು. ದೇಶಕ್ಕೇ ಗೋವುಗಳನ್ನು ಸಾಕಲು ಪ್ರೇರೇಪಣೆ ನೀಡುವ ತಾಣ ಗೋಸ್ವರ್ಗ. ಇಂತಹ ಗೋಸ್ವರ್ಗಗಳು ಜಿಲ್ಲೆ ಜಿಲ್ಲೆಗಳಲ್ಲೂ ತಲೆಯೆತ್ತುವಂತಾಗಲಿ. ಗೋ ಸಂತತಿಯಿಂದ ದೇಶಕ್ಕೆ ಸುಭಿಕ್ಷ ಲಭಿಸಲಿ ಎಂದರು.

ಈ ಸಂದರ್ಭದಲ್ಲಿ ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ತುಮಕೂರು ಜಿಲ್ಲೆ ತಿಪಟೂರಿನ ವಿನಯ ಮಡೆನೂರು, ಗೋ ಆಧಾರಿತ ಕೃಷಿಯಲ್ಲಿ ಸಾಧನೆ ಮಾಡಿರುವ ಮಂಗಳೂರ ಜಿಲ್ಲೆ ಪುತ್ತೂರಿನ ಪ್ರವೀಣ ಸರಳಾಯ, ಪಾರಂಪರಿಕ ಗೋಸಾಕಣೆ ಮಾಡುತ್ತಿರುವ ಚಿತ್ರದುರ್ಗ ಜಿಲ್ಲೆ ಸೂರಮ್ಮನಹಳ್ಳಿಯ ಕಿಲಾರಿ ಎತ್ತಿನ ಸಣ್ಣೊಬಯ್ಯ, ಗೋತಳಿ ಸಂವರ್ಧನೆ ಮಾಡುತ್ತಿರುವ ಮಂಡ್ಯದ ರವಿ ಪಟೇಲ, ಗೋ ಆಧಾರಿತ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವ ಮೈಸೂರ ಕೆ.ಆರ್‌.ನಗರದ ದೇಸಿರಿ ಸಂಸ್ಥೆಗೆ ರಾಘವೇಶ್ವರ ಭಾರತೀ ಶ್ರೀಗಳು ಗೋಪಾಲ ಗೌರವ ಪ್ರಶಸ್ತಿ ಅನುಗ್ರಹಿಸಿದರು.

Advertisement

ಮುಂಬೈನ ದಿನೇಶ ಶಹ್ರಾ ಫೌಂಡೇಶನ್‌ನ ಮುಖ್ಯಸ್ಥ ದಿನೇಶ ಶಹ್ರಾ, ಕಾಮದುಘಾ ಟ್ರಸ್ಟಿನ ಡಾ|ವೈ.ವಿ. ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ ಕುಮಾರ ಕೊಡ್ಗಿ, ಚೆನ್ನೈನ ಎಸ್ಕೈ ಹೋಂ ಕ್ರಾಫ್ಟ್ಸ ಪಾಲುದಾರ ಎಸ್‌.ವಿಜಯರಾಘವನ್‌, ಯುಎಇಯ ಎಕ್ಸಪೋವೈಡ್‌ ಗ್ಲೋಬಲ್‌ ಟ್ರೇಡಿಂಗ್‌ ನಿರ್ದೇಶಕ ಶ್ರೀನಾಥ ವೆಂಕಟರಮಣನ್‌, ಚೆನ್ನೈನ ಎಸ್ಕೈ ಕಾರ್ಟ್ಟೋನ್ಸ ನಿರ್ದೇಶಕ ಎ.ಗಣೇಶನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗೋಪಾಲ ಗೌರವ ಸ್ವೀಕರಿಸಿದ ವಿನಯ ಮಡೆನೂರ ಮಾತನಾಡಿದರು.

ಭಾಗ್ಯಶ್ರೀ ಭಟ್ಟ ಪ್ರಶಸ್ತಿ ಪತ್ರ ವಾಚಿಸಿದರು. ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಇತರರು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next