ಹುಣಸೂರು: ಎರಡು ಕಾರು ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು. ಎರಡೂ ಕಾರುಗಳು ಜಖಂಗೊಂಡಿದ್ದರೂ ಕಾರಿನಲ್ಲಿದ್ದವರು ಆಶ್ಚರ್ಯಕರರೀತಿಯಲ್ಲಿ ಪಾರಾಗಿದ್ದಾರೆ. ತಾಲೂಕಿನ ಕೊತ್ತೇಗಾಲ ನಿವಾಸಿ ಸ್ವಾಮಿಗೌಡರ ಪುತ್ರ, ಹಿರಿಕ್ಯಾತನಹಳ್ಳಿಯ ವೇಣುಗೋಪಾಲ ವಿದ್ಯಾಸಂಸ್ಥೆಯ ಸಹಶಿಕ್ಷಕ ಎಸ್.ಮಹೇಶ್(38) ಮೃತ ವ್ಯಕ್ತಿ.
ಕಾರಿನಲ್ಲಿದ್ದ ಚಿಕ್ಕಮಗಳೂರಿನ ದೀಮಂತ್ ಎಂಬುವವರಿಗೆ ಸಣ್ಣಪುಟ್ಟಗಾಯವಾಗಿದೆ. ಶಿಕ್ಷಕ ಮಹೇಶ್ ತಮ್ಮ ಪತ್ನಿಯ ತವರು ಮನೆ ಇಲವಾಲದಿಂದ ಹೊಸವರ್ಷದ ಸಂಭ್ರಮ ಹೊತ್ತು ಹಿರಿಕ್ಯಾತನಹಳ್ಳಿಯ ಶಾಲೆಗೆ ಬೈಕಿನಲ್ಲಿ ತೆರಳುತ್ತಿದ್ದರು.
ಮೈಸೂರು-ಬಂಟ್ವಾಳ ರಾಷ್ಟೀಯ ಹೆದ್ದಾರಿಯ ಬನ್ನಿಕುಪ್ಪೆ ಗ್ರಾಮದ ಬಳಿ ಎದುರಿನಿಂದ ವೇಗವಾಗಿ ಬಂದ ಕಾರೊಂದು ಬೆಕಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮಹೇಶ್ ಕೆಳಬಿದ್ದು, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ಕಾರು ಎದುರಿಗೆ ಬರುತ್ತಿದ್ದ ಮತ್ತೂಂದು ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಮೋರಿಗೆ ಮಗುಚಿ ಬಿದ್ದಿದೆ.
ಕಾರಿನಲ್ಲಿದ್ದವರು ದಕ್ಷಿಣ ಕನ್ನಡ ಜಿಲ್ಲೆಯವರೆಂದು ತಿಳಿದುಬಂದಿದ್ದು, ನಾಲ್ವರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಎಎಸ್ಐ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಶಿಕ್ಷಕ ಮಹೇಶ್ರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಗಳಿಗೆ ಒಪ್ಪಿಸಲಾಯಿತು. ಶವಾಗಾರದ ಬಳಿ ಕುಟುಂಬದವರ ರೋಧನ ಎಂಥವರ ಕರಳು ಹಿಂಡುವಂತಿತ್ತು. ಶಾಲೆಯಲ್ಲೂ ಗುರುಗಳ ನಿಧನಕ್ಕೆ ಸಹೋದ್ಯೋಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದರು.