Advertisement

ಸರಣಿ ಅಪಘಾತ; ಸವಾರ ಬ್ಯಾಂಕ್‌ ಉದ್ಯೋಗಿ ಸಾವು

12:42 AM Jun 23, 2023 | Team Udayavani |

ಕೈಕಂಬ/ಮಂಗಳೂರು: ಮಂಗಳೂರು-ಮೂಡುಬಿದಿರೆ ರಸ್ತೆಯ ಗುರುಪುರ ಪೇಟೆ ಬಳಿ ಖಾಸಗಿ ಬಸ್ಸು, ಪಿಕಪ್‌ ವಾಹನ, ಶಾಲಾ ಬಸ್ಸಿಗೆ ಹಾಗೂ ಬೈಕ್‌ಗೆ ಢಿಕ್ಕಿ ಹೊಡೆದ ಕಾರಣ ಬೈಕ್‌ ಸವಾರ ಗಂಭೀರ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನ ಪ್ಪಿದ ಘಟನೆ ಗುರುವಾರ ಬೆಳಗ್ಗೆ ಸುಮಾರು 9.15ಕ್ಕೆ ನಡೆದಿದೆ.

Advertisement

ಬೈಕ್‌ ಸವಾರ ಪೊಳಲಿಯ ಕರಿಯಂಗಳ ಗ್ರಾಮದ ದಿ| ಅಣ್ಣಿ ಪೂಜಾರಿ ಅವರ ಪುತ್ರ ಸಂತೋಷ್‌ (34) ಮೃತಪಟ್ಟವರು. ಅವರು 8 ತಿಂಗಳ ಹೆಣ್ಣು ಮಗು ಹಾಗೂ ಪತ್ನಿ, ತಾಯಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸಂತೋಷ್‌ 2021ರ ಡಿಸೆಂಬರ್‌ ತಿಂಗಳಿನಲ್ಲಿ ಮದುವೆಯಾಗಿದ್ದರು. ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರಾಗಿದ್ದರು. ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವಾಮಂಜೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು.

ಗುರುಪುರ ಸಹಕಾರಿ ಸಂಘದ ಎದುರು ರಸ್ತೆ ಉಬ್ಬು ಸಮೀಪ ಖಾಸಗಿ ಬಸ್‌, ಪಿಕಪ್‌ ವಾಹನ, ಶಾಲಾ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಬೈಕ್‌ಗೆ ಢಿಕ್ಕಿಯಾದ ಕಾರಣ ಬೈಕ್‌ ಹಾಗೂ ಸವಾರನನ್ನು ಸುಮಾರು ದೂರ ಬಸ್‌ ಎಳೆದುಕೊಂಡು ಹೋಗಿತ್ತು. ಇದರಿಂದ ಸಂತೋಷ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಶಾಲಾ ಬಸ್ಸಿನ ಹಿಂಬದಿಗೆ ಹಾನಿಯಾಗಿದೆ.

ಸಂಚಾರ ವ್ಯತ್ಯಯ
ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸುಮಾರು ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಜೂ. 15ರಂದು ಅಲ್ಲಿಯೇ ಸಮೀಪದಲ್ಲಿ ಮಣ್ಣು ಹೇರಿಕೊಂಡು ಹೋಗುತ್ತಿದ್ದ ಲಾರಿ ಮಗುಚಿ ಬಿದ್ದಿತ್ತು. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮನೆ-ಮಂದಿಗೆ ಸಾಂತ್ವನ ಹೇಳಿದರು.

ಕಚೇರಿ ಮುಂಭಾಗದಲ್ಲೇ ನಡೆದ ಅಪಘಾತ
ಸಂತೋಷ್‌ ಅವರು ಕೆಲಸ ಮಾಡುತ್ತಿದ್ದ ಸಹಕಾರಿ ಸಂಘದ ಗುರುಪುರ ಪ್ರಧಾನ ಕಚೇರಿ ಮುಂಭಾಗದಲ್ಲೇ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ರಸ್ತೆಯಲ್ಲಿ ವೇಗ ತಡೆಗಾಗಿ ನಾಲ್ಕೈದು ಹಂಪ್‌ಗ್ಳನ್ನು ಅಳವಡಿಸಲಾಗಿದ್ದು, ಬೈಕ್‌ ನಿಧಾನ ಮಾಡಿದಾಗ ಹಿಂದೆ ಕೈಕಂಬದಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಜಪೆ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next