ಜಮ್ಮು/ಹೊಸದಿಲ್ಲಿ: ಕೇಂದ್ರ ಸರಕಾರ ಪಾಕಿಸ್ಥಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದಕ್ಕೆ ಸಾಕ್ಷ್ಯವೇನಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ನಡೆದ ಭಾರತ್ ಜೋಡೋ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ ಅವರು, “2019ರಲ್ಲಿ ನಡೆದ ಪುಲ್ವಾಮಾ ದಾಳಿ ಕುರಿತು ಇದುವರೆಗೂ ಸಂಸತ್‌ಗೆ ವರದಿ ಸಲ್ಲಿಕೆಯಾಗಿಲ್ಲ. ಸುಳ್ಳಿನ ಆಧಾರದಲ್ಲಿ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ,’ ಎಂದು ಟೀಕಿಸಿದರು.
“ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್ನ 40 ಯೋಧರು ಹುತಾತ್ಮರಾದರು. ಯೋಧರನ್ನು ಏರ್‌ಲಿಫ್ಟ್ ಮಾಡುವಂತೆ ಸಿಆರ್‌ಪಿಎಫ್ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಆದರೆ ಅದಕ್ಕೆ ಅವರು ಒಪ್ಪಿರಲಿಲ್ಲ. ಇಷ್ಟು ದೊಡ್ಡ ಭದ್ರತಾ ವೈಫಲ್ಯ ಹೇಗೆ ಆಯಿತು?. ಈ ಬಗ್ಗೆ ಸಂಸತ್‌ಗೆ ಇದುವರೆಗೂ ಕೇಂದ್ರ ಸರಕಾರ ವರದಿ ಸಲ್ಲಿಸಿಲ್ಲ,’ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದರು.
ಭದ್ರತಾ ಪಡೆಗಳಿಗೆ ಅವಮಾನ: ಸಿಂಗ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, “ಈ ಮೂಲಕ ಭದ್ರತಾ ಪಡೆಗಳನ್ನು ಕಾಂಗ್ರೆಸ್ ಅವಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗಿನ ದ್ವೇಷದಿಂದ ಕಾಂಗ್ರೆಸ್ ಕುರುಡಾಗಿದೆ,’ ಎಂದು ದೂರಿದೆ. “ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಎನ್ನುತ್ತಿದ್ದಾರೆ. ಆದರೆ ಅವರ ಪಕ್ಷದ ನಾಯಕರು ದೇಶವನ್ನು ವಿಭಜಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಭಾರತ್ ತೋಡೋ ಯಾತ್ರೆ ಆಗಿದೆ. ಭದ್ರತಾ ಪಡೆಗಳ ವಿರುದ್ಧ ಮಾತನಾಡಿದರೆ ಭಾರತ ಸಹಿಸುವುದಿಲ್ಲ,’ ಎಂದು ಬಿಜೆಪಿ ಹೇಳಿದೆ.