ವಾಷಿಂಗ್ಟನ್: ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಿವೃತ್ತಿ ಹೇಳುತ್ತಾರಾ? ತಮ್ಮ ಮೆಚ್ಚಿನ ಆಟಗಾರ್ತಿಯ ಬಗ್ಗೆ ಇದೊಂದು ಪ್ರಶ್ನೆ ಅಭಿಮಾನಿಗಳಿಗಿದ್ದೇ ಇದೆ. ಅದಕ್ಕೆ 23 ಸಿಂಗಲ್ಸ್ ಗ್ರ್ಯಾನ್‌ಸ್ಲಾéಮ್ ವಿಜೇತೆ ಸೆರೆನಾ ಪರೋಕ್ಷ ಉತ್ತರವನ್ನೂ ನೀಡಿದ್ದಾರೆ.
ಈ ತಿಂಗಳ 29ರಿಂದ ಆರಂಭವಾಗಲಿರುವ ಯುಎಸ್ ಓಪನ್ ನಂತರ ತಾನು ನಿವೃತ್ತಿಯಾಗುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅವರು 1999ರಲ್ಲಿ ಮೊದಲ ಬಾರಿ ಯುಎಸ್ ಓಪನ್ ಗೆದ್ದಿದ್ದರು. ಹಾಗಾಗಿ ಈ ಬಾರಿಯ ಯುಎಸ್ ಓಪನ್ ನಂತರವೇ ಟೆನಿಸ್ ಬಾಳ್ವೆಯನ್ನು ಮುಗಿಸುವುದು ಅವರ ಯೋಜನೆ. ಹೀಗೆಂದು ಅವರು ವೋಗ್ ನಿಯತಕಾಲಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಾಸ್ತವವಾಗಿ ಅವರು ನಿವೃತ್ತಿ ಎನ್ನುವ ಪದವನ್ನು ಇಷ್ಟಪಡುವುದಿಲ್ಲವಂತೆ. ವಿಕಾಸ ಎನ್ನುವುದನ್ನು ನಂಬುತ್ತಾರೆ. ಹಾಗಾಗಿ ಟೆನಿಸ್ ಬಿಟ್ಟ ನಂತರ ಮುಂದೇನು ಎನ್ನುವ ಬಗ್ಗೆ ಈಗಲೇ ಯೋಚನೆ ಶುರು ಮಾಡಿದ್ದೇನೆ. ನನ್ನ ಆಸಕ್ತಿಯ ಇತರೆ ವಿಷಯಗಳಲ್ಲಿ ವಿಕಾಸಗೊಳ್ಳಲು ಬಯಸುತ್ತೇನೆ. ಮುಖ್ಯವಾಗಿ ಕ್ಯಾಪಿಟಲ್ ಫರ್ಮ್ ಬೆಳೆಸುವುದು, ಇನ್ನೊಂದು ಮಗುವನ್ನು ಹೊಂದುವುದು ನನ್ನಆದ್ಯತೆಯಾಗಿದೆ ಎಂದಿದ್ದಾರೆ. 2017ರಲ್ಲಿ ಅವರು ಟೆನಿಸ್ ಆಡುತ್ತಿದ್ದಾಗಲೇ ಗರ್ಭಿಣಿಯಾಗಿದ್ದರು! ಈ ಬಾರಿಯಂತೂ ಹಾಗೆ ಮಾಡಲು ತಾನು ಸಿದ್ಧವಿಲ್ಲ ಎಂದಿದ್ದಾರೆ.
ಇದನ್ನು ನೋಡಿದಾಗ ಅವರು ನಿವೃತ್ತಿಯಾಗುವುದು ಖಚಿತವೆನಿಸುತ್ತದೆ.
ಅವರು ಇದುವರೆಗೆ 23 ಗ್ರ್ಯಾನ್‌ಸ್ಲಾಮ್ ಟೆನಿಸ್ ಗೆದ್ದು, ಆಧುನಿಕ ಮಹಿಳಾ ಟೆನಿಸ್‌ನಲ್ಲಿ ಗರಿಷ್ಠ ಪ್ರಶಸ್ತಿ ಗೆದ್ದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆದರೆ ಅವರಲ್ಲೊಂದು ಕೊರಗು ಉಳಿದೇ ಇದೆ.
ಸಾರ್ವಕಾಲಿಕವಾಗಿ ಗರಿಷ್ಠ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಗೆದ್ದ ಆಟಗಾರ್ತಿಯೆನಿಸಿಕೊಳ್ಳಲು ಅವರಿಗೆ ಇನ್ನೂ ಎರಡು ಪ್ರಶಸ್ತಿಗಳು ಬೇಕು. ಮಾರ್ಗರೆಟ್ ಕೋರ್ಟ್ 24 ಪ್ರಶಸ್ತಿ ಗೆದ್ದಿದ್ದಾರೆ. ಸೆರೆನಾ 25 ಗೆದ್ದರೆ ಈ ದಾಖಲೆಯೂ ಅವರ ಹೆಸರಿಗೆ ಸೇರಿಕೊಳ್ಳಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಟೆನಿಸ್‌ನಲ್ಲಿ ಅವರ ಸಾರ್ವಭೌಮತ್ವ ಮುಗಿದಿದೆ. ಗೆಲ್ಲುವ ಸಾಧ್ಯತೆಗಳು ಬಹಳ ಕಡಿಮೆಯಿವೆ. ಆದ್ದರಿಂದಲೇ ನಿವೃತ್ತಿ ಅವರ ಆದ್ಯತೆಯಾಗಿರಬಹುದು.