Advertisement
ಆಟದ ಪ್ರೀತಿಯೆಂದರೆ ಅದು. ಮಗುವನ್ನು ಪಡೆದ ಕೇವಲ ನಾಲ್ಕು ತಿಂಗಳಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಟೆನಿಸ್ ಅಂಕಣಕ್ಕೆ ಮರಳಿದ್ದಾರೆ. ಬಾಣಂತನ ಮುಗಿದಿದೆ! ಅಗ್ರಪಟ್ಟದ ಆಳ್ವಿಕೆ, ಗರಿಷ್ಠ ಗ್ರ್ಯಾನ್‌ಸ್ಲಾಮ್ ಗಳಿಕೆಯ ಸಾಧನೆಗಳ ನಂತರ ಆಟಗಾರರೊಬ್ಬರು ಸಂಸಾರ, ಮಕ್ಕಳು, ಮನೆ ಎಂದುಕೊಳ್ಳದೆ ಮತ್ತೆ ತಮ್ಮ ವೃತ್ತಿಪರ ಚಟುವಟಿಕೆಗೆ ಮರಳುವುದನ್ನು ಏನೆನ್ನಬೇಕು? ಸಿಂಪಲ್ಲಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಆಟದ ಪ್ರೀತಿಯೆಂದರೆ ಅದು!
ಕಳೆದ ವರ್ಷ ಆಸ್ಟ್ರೇಲಿಯನ್ ಗ್ರ್ಯಾನ್‌ಸ್ಲಾಮ್ ಆಡುವ ಸಮಯದಲ್ಲಿ ತಾವು “ಆ್ಯಕ್ಸಿಡೆಂಟಲ್ ಆಗಿ ಗರ್ಭಿಣಿಯಾಗಿರುವುದು ಸೆರೆನಾ ಗಮನಕ್ಕೆ ಬಂದಿತ್ತು. ಇದೆಲ್ಲ ಸುದ್ದಿ ಮತ್ತು ಅದು ಕೊಡುವ ಸುಸ್ತಿನ ನಡುವೆಯೂ ಅಕ್ಕ ವೀನಸ್‌ರಿಗೂ ಮಣ್ಣು ಮುಕ್ಕಿಸಿ ಏಳನೇ ಆಸ್ಟ್ರೇಲಿಯನ್ ಗ್ರ್ಯಾನ್‌ಸ್ಲಾಮ್ ಗೆದ್ದದ್ದೂ ಆಯ್ತು. ಇದರ ಜೊತೆಗೆ WTA ನಂಬರ್ ಒಂದು ಕ್ರಮಾಂಕದ ಬೋನಸ್ ಕೂಡ ಸಿಕ್ಕಿತ್ತು. ಮಾರ್ಗರೇಟ್ ಕೋರ್ಟ್‌ರ ಸಾರ್ವಕಾಲಿಕ 24 ಗ್ರ್ಯಾನ್‌ಸ್ಲಾಮ್‌ಗಿಂತ ಒಂದು ಕಡಿಮೆ ಇರುವಾಗಲೇ ಸೆರೆನಾ ರ್ಯಾಕೆಟ್ ಸಂನ್ಯಾಸ ಸ್ವೀಕರಿಸುವುದು ಅನಿವಾರ್ಯವಾಗಿತ್ತು. ಸೆಪ್ಟೆಂಬರ್‌ನಲ್ಲಿ ಮಗಳು ಅಲೆಕ್ಸಿಸ್ ಒಲಂಪಿಯಾ ಒಹಾನಿಯನ್ ಜೂನಿಯರ್ ಅವತರಿಸಿದಳು. ಆ ನಂತರ ನವೆಂಬರ್‌ನಲ್ಲಿ ದೀರ್ಘಕಾಲದ ಗೆಳೆಯ, ಉದ್ಯಮಿ ಅಲೆಕ್ಸಿಸ್ ಒಹಾನಿಯನ್ ಅವರನ್ನು ಸೆರೆನಾ ಮದುವೆಯಾದರು. ಆದರೆ ಮದುವೆಯ ನಂತರವೂ ಅವರ ತುಡಿತ ಟೆನಿಸ್ ಕಡೆಗಿತ್ತು.
Related Articles
Advertisement
ಆಸ್ಟ್ರೇಲಿಯಾದ ಎವೋನೇ ಗೊಲಗಾಂಗ್ 76ರಲ್ಲಿ ಅಗ್ರಪಟ್ಟ ಏರಿದವರು ಮಗುವಿನ ನಂತರ ಆಸ್ಟ್ರೇಲಿಯನ್, ವಿಂಬಲ್ಡನ್ ಗೆದ್ದರು. ತೀರಾ ಇತ್ತೀಚೆಗೆ ಕಿಂ ಕ್ಲಿಸ್ಟರ್ 2008ರಲ್ಲಿ ಮಗು ಪಡೆದ ನಂತರ 2010ರ ಯುಎಸ್ ಓಪನ್, 2011ರ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಪ್ರಶಸ್ತಿ ಅಂಕಣದಲ್ಲಿ ಮಗುವಿನೊಂದಿಗೆ ಕಾಣಿಸಿದ ಕ್ಲಿಸ್ಟರ್ ಫೋಟೋ ದೊಡ್ಡ ಮಟ್ಟದ “ಲೈಕ್‌ಗೆ ಕಾರಣವಾಗಿತ್ತು. ಇನ್ನೂ ಎರಡು ಪ್ರಮುಖ ಪ್ರಶಸ್ತಿಗಳ ನಂತರ ಕಿಂ ಕೂಡ ಗುಡ್‌ಬೈ ಹೇಳಲೇಬೇಕಾಯಿತು.
ಪಟ್ಟಿಯನ್ನು ಹೀಗೇ ಮುಂದುವರಿಸುತ್ತಾ ಹೋಗಬಹುದು, ಲಿಂಡ್ಸೆ ಡೆವನ್‌ಫೋರ್ಟ್, ಕಟೆರಿನಾ ಬೊನಾxರೆನ್ಕೋ, ತಾಜಾನಾ ಮಾರಿಯಾ…ಹೀಗೆ ಹಲವರು ಈ ಸಂದರ್ಭದಲ್ಲಿ ನೆನಪಾಗುತ್ತಿದ್ದಾರೆ. ಸ್ವಾರಸ್ಯ ಎಂದರೆ ಸೆರೆನಾ ಜೊತೆ ಅವರ ಹಲವು ವರ್ಷಗಳ ಎದುರಾಳಿ ವಿಕ್ಟೋರಿಯಾ ಅಜರೆಂಕಾ ಕೂಡ ಇದೀಗ ಅಂಕಣಕ್ಕೆ ಮರಳುತ್ತಿದ್ದಾರೆ. ಈ ಎರಡು ಬಾರಿಯ ಆಸ್ಟ್ರೇಲಿಯನ್ ಚಾಂಪಿಯನ್ ಕೂಡ ಮೊದಲ ಮಗು ಪಡೆದ ನಂತರ ಸ್ಟಾನ್‌ಫೋರ್ಡ್ ಮೂಲಕ ಅಮ್ಮ ಆಟಗಾರ್ತಿಯಾಗಿ ಸಾಮರ್ಥ್ಯ ಪರೀಕ್ಷಿಸುತ್ತಿದ್ದಾರೆ!
ಮತ್ತೆ ಅವಘಡದ ಸೌಲಭ್ಯ!ಟೂರ್ನಿಯಲ್ಲಿ ಮಹತ್ವದ ಸಾಧನೆ ಮಾಡಲು ಶ್ರೇಯಾಂಕ ಅನುಕೂಲಕರವಾಗುತ್ತದೆ. ದೀರ್ಘಕಾಲದಿಂದ ಗಾಯಗೊಂಡು ಟೆನಿಸ್‌ನಿಂದ ಹೊರಗಿದ್ದವರಿಗೆ WTA ಒಂದು ಸೌಲಭ್ಯ ಒದಗಿಸುತ್ತದೆ. 2 ಗ್ರ್ಯಾನ್‌ಸ್ಲಾಮ್ ಸೇರಿದಂತೆ ವರ್ಷದ 8 ಟೂರ್ನಿಗಳಲ್ಲಿ ಸೀಡಿಂಗ್‌ಗೆ ಕೋರಿಕೆ ಸಲ್ಲಿಸಲು ಅನುವು ಮಾಡಿಕೊಟ್ಟಿದೆ. ಸಂಘಟಕರು ಮಾನ್ಯತೆ ನೀಡಿದರೆ ಅಂಥವರಿಗೆ ಶ್ರೇಯಾಂಕ ನೀಡಬಹುದು. ಈ ಅವಕಾಶದಲ್ಲಿ ಪ್ರಗ್ನೆನ್ಸಿಯೂ ಸೇರಿದೆ, ಅದೂ ಒಂದು ರೀತಿಯ ಅವಘಡವೇ ತಾನೇ!? ಆದರೆ ಈ ರಿಯಾಯ್ತಿಯಲ್ಲಿ ಟೂರ್ನಿಯ ಸಂಘಟಕರದ್ದೇ ಅಂತಿಮ ಮಾತು. ಹಾಗಾಗಿ ಸೆರೆನಾರಿಗೆ ಶ್ರೇಯಾಂಕ ಸಿಗುವ ಕುರಿತು ಈವರೆಗೆ ಖಚಿತವಾಗಿ ತಿಳಿಸಲಾಗಿಲ್ಲ. ಸದ್ಯ ಸೆರೆನಾ ಸಮಸ್ಯೆ ಎದುರಾಳಿಗಳದ್ದಲ್ಲ. ಆಕೆಯ ಮಗಳು ಹಾಗೂ ಅದರ ಹೊಸ ಹಲ್ಲುಗಳದ್ದು. ಈಗಾಗಲೇ ಆಕೆ ಟ್ವಿಟರ್‌ನಲ್ಲಿ ಸಲಹೆ ಕೊಡ್ರಪ್ಪಾ ಎಂದು ಕೇಳಿದ್ದಾರೆ. ಹಲ್ಲು ಮೂಡುವ ಸಂದರ್ಭದಲ್ಲಿ ಮೂಡುವ ಇರುಸುಮುರಿಸಿನ ಕಾರಣ ಮಗು ಕೈ ಮೇಲೆಯೇ ನಿದ್ದೆ ಹೋಗಲು ತವಕಿಸುತ್ತದೆ. ಸೆರೆನಾಗೆ ಇದು ಇಷ್ಟ ಮತ್ತು ಕಷ್ಟ. ಟೆನಿಸ್ ಆಟದ ವಿಷಯದಲ್ಲಿ ಸೆರೆನಾಗೆ ಸಲಹೆ ನೀಡಿ ಸಹಾಯ ಮಾಡಲಾಗದವರು ಕೂಡ ಈ ಮಗು ಆರೈಕೆಯ ವಿಚಾರದಲ್ಲಿ ಸಹಾಯ ಹಸ್ತ ಚಾಚಬಹುದು! ಮಾ.ವೆಂ.ಸ.ಪ್ರಸಾದ್