Advertisement

28ರಂದು ರಾಷ್ಟ್ರವ್ಯಾಪಿ ಔಷಧ ಮಳಿಗೆಗಳ ಮುಷ್ಕರ

06:05 AM Sep 25, 2018 | Team Udayavani |

ಬೆಂಗಳೂರು: ಆನ್‌ಲೈನ್‌ನಲ್ಲಿ ಔಷಧ ಮಾರಾಟ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖೀಲ ಭಾರತ ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಸಂಸ್ಥೆಯು ಸೆ.28ಕ್ಕೆ ರಾಷ್ಟ್ರವ್ಯಾಪಿ ಔಷಧ ಮಳಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಆ ದಿನ ಔಷಧ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಮೂಡಿದೆ.

Advertisement

ಈ ನಡುವೆ ಆರೋಗ್ಯ ಇಲಾಖೆಯೂ ಸೆ.28ರಂದು ಯಾವುದೇ ತೊಂದರೆಯಾಗದಂತೆ ಅಗತ್ಯ ಪ್ರಮಾಣದಲ್ಲಿ ಔಷಧ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಇನ್ನೊಂದೆಡೆ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಔಷಧ ಮಳಿಗೆಗಳು, ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂ, ಕಾರ್ಪೋರೇಟ್‌ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳು ಮುಷ್ಕರದಿಂದ ವಿನಾಯ್ತಿ ಹೊಂದಿವೆ. ಸೆ.28ರಂದು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಔಷಧಗಳು ಲಭ್ಯವಿರಲಿವೆ ಎಂದು ಔಷಧ ನಿಯಂತ್ರಣ ಮಂಡಳಿ ತಿಳಿಸಿದೆ.

ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿಯಂತ್ರಿಸಿ ನಿಗದಿಪಡಿಸುತ್ತದೆ. ಅದರಂತೆ ಗರಿಷ್ಠ ಮಾರಾಟ ಬೆಲೆ (ಎಂ.ಆರ್‌.ಪಿ) ನಿಗದಿಯಾಗಲಿದೆ. ಆದರೆ ಆನ್‌ಲೈನ್‌ನಲ್ಲಿ ಶೇ.50, ಶೇ.60ರಷ್ಟು ರಿಯಾಯ್ತಿ ದರದಲ್ಲಿ ಔಷಧ ಪೂರೈಸುವುದಾಗಿ ಇ- ಫಾರ್ಮಸಿ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇಷ್ಟು ಕಡಿಮೆ ಬೆಲೆಯಲ್ಲಿ ಔಷಧ ಮಾರಾಟ ಹಾಗೂ ಗುಣಮಟ್ಟ ಪರಿಶೀಲಿಸಬೇಕಾದ ಔಷಧ ನಿಯಂತ್ರಣ ಮಂಡಳಿ ಇತ್ತ ಗಮನ ಹರಿಸದ ಕಾರಣ ನಿಯಂತ್ರಣವೇ ಇಲ್ಲದಂತಾಗಿದೆ. ಆ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖೀಲ ಭಾರತ ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಸಂಸ್ಥೆಯ ರಾಜ್ಯಾಧ್ಯಕ್ಷ ಆರ್‌.ರಘುನಾಥರೆಡ್ಡಿ ಹೇಳಿದ್ದಾರೆ.

ಔಷಧ ದಾಸ್ತಾನು, ಪೂರೈಕೆ, ಮಾರಾಟಕ್ಕೆ ಸಂಬಂಧಪಟ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಿದ್ದರೂ ಭಾರಿ ರಿಯಾಯ್ತಿ ಹೆಸರಿನಲ್ಲಿ ಔಷಧಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಳಪೆ ಗುಣಮಟ್ಟದ, ಪರ್ಯಾಯ ಔಷಧಗಳ ಮಾರಾಟಕ್ಕೆ ಅವಕಾಶ ನೀಡಿದಂತಾಗಿದೆ ಎಂದು ದೂರಿದರು.

ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಎರಡು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕೇಂದ್ರ ಸರ್ಕಾರ ಇದೀಗ ಕರಡು ಅಧಿಸೂಚನೆ ಹೊರಡಿಸಿದೆ. ಕೂಡಲೇ ಈ ಕರಡು ಅಧಿಸೂಚನೆ ಹಿಂಪಡೆದು ಇ- ಫಾರ್ಮಸಿಗೆ ಅವಕಾಶ ನೀಡದಂತೆ ಒತ್ತಾಯಿಸಿ ಸೆ.28ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ದೇಶಾದ್ಯಂತ 8.5 ಲಕ್ಷ ಔಷಧ ಮಳಿಗೆಗಳಿದ್ದು, ರಾಜ್ಯದಲ್ಲಿ 24,000ಕ್ಕೂ ಹೆಚ್ಚು ಔಷಧಾಲಯಗಳಿವೆ. ಬೆಂಗಳೂರಿನಲ್ಲಿ 6,500 ಔಷಧ ಮಳಿಗೆಯಿದ್ದು, ಸೆ.28ರಂದು ಮಳಿಗೆಗಳನ್ನು ಬಂದ್‌ ಮಾಡುವ ಮೂಲಕ ಕರಡು ಅಧಿಸೂಚನೆ ಕೈಬಿಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

Advertisement

ಆಯ್ದ ಔಷಧಾಲಯಗಳಿಗೆ ವಿನಾಯ್ತಿ
ಕೆಲ ಸಂಸ್ಥೆಗಳು ಸೆ.28ರಂದು ಔಷಧ ಮಳಿಗೆಗಳ ಮುಷ್ಕರಕ್ಕೆ ಕರೆ ನೀಡಿವೆ. ಆದರೆ ರಾಜ್ಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಔಷಧಾಲಯ, ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂ, ಕಾರ್ಪೋರೇಟ್‌ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳು ಮುಷ್ಕರದಿಂದ ವಿನಾಯ್ತಿ ಹೊಂದಿದ್ದು, ಸೆ.28ರಂದು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಔಷಧ ನಿಯಂತ್ರಣ ಮಂಡಳಿ ತಿಳಿಸಿದೆ.

ಸೆ.28ರಂದು ಸಾರ್ವಜನಿಕರಿಗೆ ಔಷಧ ಲಭ್ಯತೆ ಬಗ್ಗೆ ರಾಜ್ಯದ ಎಲ್ಲ ಜಿಲ್ಲಾ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರಿಗೆ ಮಾಹಿತಿ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜತೆಗೆ ಔಷಧ ಲಭ್ಯತೆ ಬಗ್ಗೆ ಮಾಹಿತಿ ನೀಡಲು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಅವರನ್ನು ಸಂಪರ್ಕಿಸುವಂತೆ ಕೋರಿದೆ.

ಔಷಧ ದಾಸ್ತಾನಿಗೆ ಸೂಚನೆ
ಔಷಧಾಲಯಗಳ ಮುಷ್ಕರ ಕರೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲ್ಲೂಕು/ ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕ ಜೀವ ರಕ್ಷಕ ಔಷಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆಯೇ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next