ಹಾಸನ: ಕೊರೊನಾ ವೈರಸ್ ಬಗ್ಗೆ ದೇಶಾದ್ಯಂತ ಆತಂಕ ಹೆಚ್ಚಿದೆ. ಅದೃಷ್ಟವಶಾತ್ ಹಾಸನ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ವೈರಸ್ ಸೋಂಕಿತರ ವರದಿಯಾಗಿಲ್ಲ. ಆದರೂ ಹಾಸನ ಜಿಲ್ಲಾಡಳಿತ ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಾಗಿರುವ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗಾಗೇ ವಿಶೇಷ ವಾರ್ಡ್‌ನ ವ್ಯವಸ್ಥೆ ಮಾಡಿದೆ.
ಹಾಗೆಯೇ ಜಿಲ್ಲೆಯ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗಳಲಿಯೂ ವಿಶೇಷ ವಾರ್ಡುಗಳ ವ್ಯವಸ್ಥೆ ಮಾಡಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ, ತಪಾಸಣೆ ನಡೆಸುವ ವೈದ್ಯಕೀಯ ತಂಡ ರಚನೆ ಮಾಡಿದೆ.
ವಿದೇಶದಿಂದ ಬರುವವರಿಗೆ ಕಡ್ಡಾಯ ತಪಾಸಣೆ: ಜಿಲ್ಲೆಗೆ ಭೇಟಿ ನೀಡುವ ಎಲ್ಲ ವಿದೇಶಿ ಪ್ರಜೆಗಳನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಲೇ ಬೇಕು. ಎಲ್ಲ ಹೊಟೇಲ್‌ಗಳ ಮಾಲೀಕರು ವಿದೇಶ ದಿಂದ ಬರುವವರಿಗೆ ಅರಿವು ನೀಡುವ ಜೊತೆಗೆ ಆರೋಗ್ಯ ಇಲಾಖೆಗೂ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ತಾಕೀತು ಮಾಡಿದೆ. ಜತೆಗೆ ಪ್ರವಾಸಿ ತಾಣಗಳಲ್ಲಿ ಮಾಹಿತಿ ಹಾಗೂ ತಪಾಸಣೆ ಕೇಂದ್ರ ಗಳನ್ನು ಸ್ಥಾಪಿಸಿದೆ. ಆಸ್ಪತ್ರೆಗಳಲ್ಲಿ ಕೊರೊನಾ ಸಹಾಯ ಕೋಶ ಸ್ಥಾಪಿಸಿ, ಸಾರ್ವಜನಿಕರ ಕರೆಗಳನ್ನು ದಿನದ 24 ಗಂಟೆ ಸ್ವೀಕರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೊನಾ ಸಂಕಷ್ಟದ
ರೋಗಿಗಳ ತಪಾಸಣೆಗೆ ಪ್ರತ್ಯೇಕ ಕೊಠಡಿ ಮೀಸಲಿರಿಸಿ ಅಲ್ಲಿಂದಲೇ ಕಫ ಸಂಗ್ರಹಿಸಿ ಪರೀಕ್ಷೆಗೆ ಕಳುಸಬೇಕು. ರೋಗಿ ಗಳಿಗೆ ಚಿಕಿತ್ಸೆ ನೀಡುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ಧರಿಸಬೇಕು ಎಂದು ಜಿಲ್ಲಾಡಳಿತವು ನಿರ್ದೇಶನ ನೀಡಿದೆ.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಈಗಾಗಲೇ ಕೊರೊನಾ ವೈರಸ್ ಬಗ್ಗೆ ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲ್ಲ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ, ಆಗಾಗ್ಗೆ ಸ್ವಚ್ಛತಾ ಕಾರ್ಯ, ಔಷಧಿ ಸಿಂಪಡಣೆ ಮಾಡಬೇಕು. ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.