Advertisement

13 ಜಿಲ್ಲೆಗಳ ಪ್ರತ್ಯೇಕ ರಾಜ್ಯ: ಜನವರಿ 1ಕ್ಕೆ ಉ.ಕ.ರಾಜ್ಯೋತ್ಸವ

06:40 AM Sep 24, 2018 | |

ಬಾಗಲಕೋಟೆ: ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಬೇಡಿಕೆ ಹೊಸ ತಿರುವು ಪಡೆದಿದ್ದು, ಪ್ರತ್ಯೇಕ ರಾಜ್ಯ ಮಾಡಲೇಬೇಕೆಂಬ ನಿರ್ಣಯದೊಂದಿಗೆ ಭಾನುವಾರ ಪಂಚ ನಿರ್ಣಯ ಕೈಗೊಳ್ಳಲಾಗಿದೆ.

Advertisement

ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಜಿಲ್ಲೆಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಒಳಗೊಂಡು ಸುದೀರ್ಘ‌ 3 ಗಂಟೆಗಳ ಸಭೆ ನಡೆಸಿದ್ದು, 13 ಜಿಲ್ಲೆಗಳು ಒಳಗೊಂಡ ಪ್ರತ್ಯೇಕ ರಾಜ್ಯ, ಹೊಸ ರಾಜ್ಯಕ್ಕೆ ಉತ್ತರ ಕರ್ನಾಟಕ ಹೆಸರು, ಕೇಸರಿ, ಹಳದಿ, ಹಸಿರು ಬಣ್ಣ ಹಾಗೂ ಮಧ್ಯದಲ್ಲಿ ಹೊಸ ರಾಜ್ಯದ ಭೌಗೋಳಿಕ ನಕ್ಷೆ ಇರುವ ಧ್ವಜ, ಪ್ರತಿ ವರ್ಷ ಜನವರಿ 1ರಂದು ಉತ್ತರ ಕರ್ನಾಟಕ ರಾಜ್ಯೋತ್ಸವ ಆಚರಣೆ ಒಳಗೊಂಡ ಐದು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಒಟ್ಟು 196 ಜನರು ಲಿಖೀತ ಅಭಿಪ್ರಾಯ ಮಂಡಿಸಿದರು. ಅದರಲ್ಲಿ ಪ್ರತ್ಯೇಕ ರಾಜ್ಯದಲ್ಲಿ 13 ಜಿಲ್ಲೆ ಒಳಗೊಳ್ಳಬೇಕು ಎಂಬುದಕ್ಕೆ 89 ಜನ, ಬಾಗಲಕೋಟೆ ರಾಜಧಾನಿ ಆಗಬೇಕು ಎಂಬುದಕ್ಕೆ 71, ಉತ್ತರ ಕರ್ನಾಟಕ ಹೆಸರಿನ ಹೊಸ ರಾಜ್ಯ ಸ್ಥಾಪಿಸಬೇಕೆಂಬುದಕ್ಕೆ 65 ಜನ, ಕೇಸರಿ-ಹಳದಿ-ಹಸಿರು ಮತ್ತು ಭೌಗೋಳಿಕ ನಕ್ಷೆ ಒಳಗೊಂಡ ಹೊಸ ಧ್ವಜಕ್ಕೆ 73 ಜನ, ಜ.1ರಂದು ಉ.ಕ. ರಾಜ್ಯೋತ್ಸವ ಆಚರಣೆಗೆ 59 ಜನ ಲಿಖೀತ ಅಭಿಪ್ರಾಯ ಮಂಡಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉ.ಕ. ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ, ಈವರೆಗೆ ನಾವು ಉ.ಕ. ಅಭಿವೃದ್ಧಿ ಮಾಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುತ್ತಿದ್ದೆವು. ಇನ್ನು ಪ್ರತ್ಯೇಕ ರಾಜ್ಯಕ್ಕಾಗಿಯೇ ನಿರಂತರ ಹೋರಾಟ ನಡೆಯಲಿದೆ. ಪ್ರತ್ಯೇಕ ರಾಜ್ಯ ಕುರಿತು 13 ಜಿಲ್ಲೆಗಳಲ್ಲೂ ಅಭಿಯಾನ ಮಾಡುತ್ತೇವೆ. ಶಾಲೆ, ಕಾಲೇಜು, ಸಾರ್ವಜನಿಕ ಸಭೆ, ಸಮಾರಂಭ ಮಾಡಿ ಉತ್ತರಕ್ಕೆ ಆಗಿರುವ,  ಆಗುತ್ತಿರುವ ಅನ್ಯಾಯದ ಅಂಕಿ-ಅಂಶಗಳನ್ನು ದಾಖಲೆ ಸಮೇತ ಇಡುತ್ತೇವೆ. ಡಾ.ಅಂಬೇಡ್ಕರ್‌ ಅವರು ಸಂವಿಧಾನದಲ್ಲೇ ತಿಳಿಸಿದಂತೆ ಅಭಿವೃದ್ಧಿಗಾಗಿ ಚಿಕ್ಕ ಚಿಕ್ಕ ರಾಜ್ಯ, ಜಿಲ್ಲೆ ಅಗತ್ಯ ಎಂಬ ಅಭಿಪ್ರಾಯವನ್ನು ಕೇವಲ ಜಿಲ್ಲೆ, ತಾಲೂಕಿಗೆ ಬಳಕೆ ಮಾಡಲಾಗುತ್ತಿದೆ. ಅಭಿವೃದ್ಧಿಗಾಗಿ ಪ್ರತ್ಯೇಕ ಜಿಲ್ಲೆ, ತಾಲೂಕು, ಗ್ರಾಮಗಳನ್ನು ವಿಂಗಡಿಸಲಾಗಿದೆ. ಅದೇ ರೀತಿ ಉ.ಕ. ಪ್ರತ್ಯೇಕ ರಾಜ್ಯ ಮಾಡಲೇಬೇಕು ಎಂದರು.

ಪ್ರಧಾನಿ-ರಾಷ್ಟ್ರಪತಿ ಭೇಟಿ : ದಕ್ಷಿಣದವರಿಗೆ ರೇಷ್ಮೆ, ಉತ್ತರದವರಿಗೆ ಖಾದಿ ಕೊಡಲಾಗಿದೆ. ಮನೆಯ ಯಜಮಾನ ಆದವರು (ಪ್ರಧಾನಿ-ರಾಷ್ಟ್ರಪತಿ) ಇಬ್ಬರು ಅಣ್ಣ-ತಮ್ಮಂದಿರಿಗೆ ಸಮನಾಗಿ ಮನೆಯ ಭಾಗ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸುತ್ತೇವೆ. ಉತ್ತರಕ್ಕೆ ಈವರೆಗೆ ಆದ ಅನ್ಯಾಯದ ಕುರಿತು ದಾಖಲೆ ಸಮೇತ ಕೋರ್ಟ್‌ ಮೊರೆ ಹೋಗಿ, ಪ್ರತ್ಯೇಕ ರಾಜ್ಯ ಕೇಳುತ್ತೇವೆ. ಪ್ರತ್ಯೇಕ ರಾಜ್ಯಕ್ಕೆ ಈ ಭಾಗದ ಹಲವು ರಾಜಕೀಯ ನಾಯಕರ ಬೆಂಬಲವೂ ಇದೆ ಎಂದರು.

Advertisement

ನಿಡಸೋಸಿ-ಬಾಗಲಕೋಟೆಯ ಶ್ರೀ ಪ್ರಭು ಸ್ವಾಮೀಜಿ, ಮನ್ನಿಕಟ್ಟಿಯ ಶ್ರೀ ಶಿವಕುಮಾರ ಸ್ವಾಮೀಜಿ, ಹೈಕೋರ್ಟ್‌ ವಕೀಲ ಅಮೃತೇಶ ಪಿ.ಎನ್‌, ಹೋರಾಟ ಸಮಿತಿಯ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಗೌರವ ಅಧ್ಯಕ್ಷ ಪಾಲಾಕ್ಷಿ ಬಾಣದ, ಉ.ಕ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ನಿರ್ದೇಶಕ ಮಾರುತಿ ಜಡಿಯವರ ಮುಂತಾದವರು ಪಾಲ್ಗೊಂಡಿದ್ದರು.

ಅಭಿವೃದ್ಧಿಗಾಗಿ ಜಿಲ್ಲೆ, ತಾಲೂಕು, ಗ್ರಾಮ ವಿಂಗಡಣೆ ಮಾಡಲಾಗುತ್ತದೆ. ಅದೇ ರೀತಿ ಪ್ರತ್ಯೇಕ ರಾಜ್ಯ ಮಾಡಿದರೆ ತಪ್ಪಲ್ಲ. ಈಗ ಹೋರಾಟಕ್ಕೆ ಒಂದು ಶಿಸ್ತು-ಗಂಭೀರತೆ ಬಂದಿದೆ. ನಿರ್ಣಯಗಳನ್ನೂ ಕೈಗೊಂಡಿದ್ದಾರೆ. ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರತ್ಯೇಕ ರಾಜ್ಯ ಕೇಳಲಾಗುತ್ತಿದೆ.
– ಪಂಚಮಶಿವಲಿಂಗೇಶ್ವರ (ಪ್ರಭು) ಸ್ವಾಮೀಜಿ, ನಿಡಸೋಸಿ-ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next