Advertisement

ಪ್ರತ್ಯೇಕ ಧರ್ಮ ಶಿಫಾರಸು ಪರಿಶೀಲನೆಯಲ್ಲಿದೆ: ಕೇಂದ್ರ

06:00 AM Jun 20, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸು ಕೇಂದ್ರ ಗೃಹ ಇಲಾಖೆಯ
ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ವಿಚಾರದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಆದೇಶ ರದ್ದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಕೃಷ್ಣದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠಕ್ಕೆ, ಕೇಂದ್ರ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.

ಪ್ರತ್ಯೇಕ ಧರ್ಮ ಶಿಫಾರಸಿನ ವಿಚಾರ ಕುರಿತು ಅಖೀಲ ಭಾರತ ವೀರಶೈವ ಮಹಾಸಭಾದ ಮನವಿಗೆ ಹಿಂದಿದ್ದ ಕೇಂದ್ರ ಸರ್ಕಾರ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಜಾತಿ ಕಾಲಂ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು 2013ರ ನವೆಂಬರ್‌ 14ರಂದು ಅಧಿಸೂಚನೆ ಹೊರಡಿಸಿತ್ತು. ಜತೆಗೆ 2011ರ ಜನಗಣತಿಯ ಸಮೀಕ್ಷೆಯಲ್ಲಿ ಲಿಂಗಾಯತ, ವೀರಶೈವ ಸಮುದಾಯಗಳು ಹಿಂದೂ ಧರ್ಮದ ವ್ಯಾಪ್ತಿಯಲ್ಲಿಯೇ ಬಂದಿವೆ. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಈ ಹಿಂದೆ ಸಾಕಷ್ಟು ಸಾಮಾಜಿಕ ಹಾಗೂ
ಇತಿಹಾಸದ ಅಂಶಗಳನ್ನು ಅವಲೋಕಿಸಿ ಲಿಂಗಾಯತ ಹಿಂದೂ ಧರ್ಮದ ಅಡಿಯಲ್ಲಿಯೇ ಬರಲಿದೆ. ಪ್ರತ್ಯೇಕ ಧರ್ಮದ ಸ್ಥಾನ ಮಾನ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂಬ ವಿವರಗಳನ್ನೊಳಗೊಂಡ ಅಫಿಡವಿಟ್‌ನ್ನು ಕೇಂದ್ರ ಸರ್ಕಾರದ ಪರ ವಕೀಲರು ನ್ಯಾಯ
ಪೀಠಕ್ಕೆ ಸಲ್ಲಿಸಿದರು.

ಅಲ್ಲದೆ, ರಾಜ್ಯ ಸರ್ಕಾರ ಕಳುಹಿಸಿರುವ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಪರಿಶೀಲನೆಯಲ್ಲಿದ್ದು ಸ್ಪಷ್ಟ ನಿಲುವು ತಿಳಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ನ್ಯಾಯ ಪೀಠಕ್ಕೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಪೀಠ, ಆಗಸ್ಟ್‌ 29ಕ್ಕೆ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next