Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ರಾಜ್ಯಸರ್ಕಾರ ರೈತರು ಸಹಕಾರಿ ಸಂಘಗಳಲ್ಲಿ ಪಡೆದಿರುವ ಎಲ್ಲಾ ಸಾಲಮನ್ನಾ ಮಾಡಬೇಕು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಕೃಷಿ ಸಂಬಂಧಿಸಿದ ಸಾಲಗಳನ್ನು ಮನ್ನಾ ಮಾಡಬೇಕು, ರೈತರು ಮುಂದಿನ ಬೆಳೆ ಬೆಳೆಯಲು ಹೊಸದಾಗಿ ಸಾಲ ನೀಡಬೇಕೆಂದು ಒತ್ತಾಯಿಸಿದರು.
Related Articles
Advertisement
ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು, ಜತೆಗೆ ಈ ಸಾಳಿನ ಕಬ್ಬಿಗೆ ಮುಂಗಡ ಹಣ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರೈತ ಮುಖಂಡರಾದ ಅಶ್ವಥ್ ರಾಜೇ ಅರಸ್, ಹೊಸಕೋಟೆ ಬಸವರಾಜ್, ಲೋಕೇಶ್ ರಾಜೇ ಅರಸ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪುನರ್ ಪರಿಶೀಲಿಸಿ: ರಾಜ್ಯ ರೈತಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯಸರ್ಕಾರ ಘೋಷಿಸಿರುವ ಸಹಕಾರಿ ಬ್ಯಾಂಕ್‌ಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲಮನ್ನಾದಿಂದ ರೈತರ ಕಷ್ಟ ನಿವಾರಣೆಯಾಗುವುದಿಲ್ಲ, ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಂಪೂರ್ಣ ಸಾಲಮನ್ನಾ ಆಗಬೇಕು.
ಜತೆಗೆ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವು ಮನ್ನಾ ಆಗಬೇಕು. ಸರ್ಕಾರ ನಮ್ಮ ಬೇಡಿಕೆ ಈಡೇರಿಸದೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಆಗಸ್ಟ್ 9ರಂದು ರಾಜಾÂದ್ಯಂತ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ವರಕೂಡು ಕೃಷ್ಣೇಗೌಡ ಸೇರಿದಂತೆ ಹಲವು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಯುವ ಕಾಂಗ್ರೆಸ್ ಪ್ರತಿಭಟನೆ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಕೇಂದ್ರ ಸರ್ಕಾರದಿಂದ ಮನ್ನಾ ಮಾಡಿಸುವಂತೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಇರುವ ಜಲದರ್ಶಿನಿ ಅತಿಥಿ ಗೃಹದ ಪ್ರವೇಶ ದ್ವಾರದ ಎದುರು ಪ್ರತಿಭಟನೆ ನಡೆಸಿದರು.
ಸತತ ಬರಗಾಲದಿಂದ ರಾಜ್ಯದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಲವು ಬಾರಿ ಕೇಂದ್ರ ಕೃಷಿ ಸಚಿವರು, ಪ್ರಧಾನಿ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದಲ್ಲದೆ, ಸರ್ವಪಕ್ಷ ನಿಯೋಗ ಕರೆದೊಯ್ದು ಸಾಲಮನ್ನಾಕ್ಕೆ ಒತ್ತಾಯಿಸಿದಾಗಲೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇದೀಗ ಸಹಕಾರಿ ಬ್ಯಾಂಕುಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಾ ಮಾಡಿದ್ದಾರೆ.
ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕೂಡ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಸಿನ್ ಖಾನ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸುರೇಶ್, ಕೋಟೆ ಪ್ರಸನ್ನಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.