Advertisement

ತರಕಾರಿ ಖರೀದಿಗೆ ಮಂಗಳೂರಿಗೆ ತೆರಳುವ ವಾಹನಗಳಿಗೆ ಪ್ರತ್ಯೇಕ ಪಾಸ್‌

11:21 PM Jul 09, 2020 | Sriram |

ಕಾಸರಗೋಡು: ಜಿಲ್ಲೆಯಿಂದ ತರಕಾರಿ ಖರೀದಿಗೆ ಮಂಗಳೂರಿಗೆ ತೆರಳುವ ವಾಹನಗಳಿಗೆ ಪ್ರತ್ಯೇಕ ಪಾಸ್‌ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್ ಕೋರ್‌ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು.ಆರ್‌.ಟಿ.ಒ. ಪಾಸ್‌ ಮಂಜೂರು ಮಾಡಲಿದೆ. ವಾಹನದ ಚಾಲಕ ಮತ್ತು ಕ್ಲೀನರ್‌ಗಳಿಗೆ ಪ್ರತ್ಯೇಕ ಪಾಸ್‌ ಇರುವುದು. ವಾಹನಗಳಲ್ಲಿ ತೆರಳುವವರು ಪ್ರತಿ ವಾರಕ್ಕೊಮ್ಮೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಪಡಬೇಕಿದ್ದು, ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗುರುತು ಚೀಟಿ ಕಡ್ಡಾಯ
ಗಡಿ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಆಗಮಿಸುವವರಿಗೆ ಗುರುತು ಚೀಟಿ ಕಡ್ಡಾಯ ಮಾಡಲಾಗಿದೆ. ಇತರ ರಾಜ್ಯಗಳಿಗೆ ವಿವಾಹ ಸಂಬಂಧ ಸಮಾರಂಭಗಳಿಗೆ ತೆರಳುವವರಿಗೆ ನೂತನವಾಗಿ ಜು. 31ರ ವರೆಗೆ ಪಾಸ್‌ ನೀಡುವುದಿಲ್ಲ. ಈ ಸಂಬಂಧ ಈಗಾಗಲೇ ಪಾಸ್‌ ಇರುವ ಕುಟುಂಬದಲ್ಲಿ 5 ಮಂದಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ.

65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ, 10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳಿಗೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಇಲ್ಲ. ಸಾರ್ವಜನಿಕ ಸಮಾರಂಭದಲ್ಲಿ 10ಕ್ಕಿಂತ ಹೆಚ್ಚು ಮಂದಿ ಭಾಗವಹಿಸಕೂಡದು. ಸುಭಿಕ್ಷ ಕೇರಳಂನಂತಹಾ ಕಾರ್ಯಕ್ರಮಗಳ ಉದ್ಘಾಟನ ಸಭೆಗಳನ್ನು ಜು. 31ರ ವರೆಗೆ ನಡೆಸಕೂಡದು. ಜನ ಗುಂಪು ಸೇರಬಾರದು. ಕ್ರೀಡಾ ಸ್ಪರ್ಧೆ ನಡೆಸಲು ಜು. 31ರ ವರೆಗೆ ಅನುಮತಿಯಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಣ್ಮಕಜೆ ಪಂ. ಗಡಿ ಪ್ರದೇಶದಲ್ಲಿ ತಾತ್ಕಾಲಿಕ ಪಡಿತರ ಅಂಗಡಿಯನ್ನು ಆರಂಭಿಸಲು ಜಿಲ್ಲಾ ಸಪ್ಲೈ ಅಧಿಕಾರಿಗೆ ಆದೇಶ ನೀಡಲಾಗಿದೆ.

ಸಭೆಯಲ್ಲಿ ಹೆಚ್ಚುವರಿ ದಂಡಾಧಿಕಾರಿ ಎನ್‌. ದೇವಿದಾಸ್‌, ಉಪಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌, ವಲಯ ಕಂದಾಯಾಧಿಕಾರಿ ಆರ್‌. ಅಹಮ್ಮದ್‌ ಕಬೀರ್‌, ಡಿ.ವೈ.ಎಸ್‌.ಪಿ. ಸುನಿಲ್‌ ಕುಮಾರ್‌ ಸಹಿತ ಜಿಲ್ಲಾ ಕೋವಿಡ್ ಕೋರ್‌ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

ಹೆಚ್ಚಿನ ಮಾಹಿತಿಗೆ ಕರೆಮಾಡಿ
ಕೋವಿಡ್‌ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಸಂಬಂಧ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕೋವಿಡ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 04994 255001ಗೆ ಕರೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next