ಧಾರವಾಡ: ಮುಂಬರುವ ಅಧಿವೇಶನದಲ್ಲಿ ರಾಜ್ಯದ ಎಲ್ಲ ಅಸಂಘಟಿತ ಕಾರ್ಮಿಕರ ಭದ್ರತೆಗೆ ಪ್ರತ್ಯೇಕವಾದ ಕಾನೂನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಅರೆಬೈಲ್ ಶಿವರಾಮ ಹೆಬ್ಟಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಇಲಾಖೆ ಫಲಾನುಭವಿಗಳಿಗೆ ಪರಿಹಾರ ಚೆಕ್‌ಗಳ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಘಟಿತ ಹಾಗೂ ವಲಸೆ ಕಾರ್ಮಿಕರ ಸಂಖ್ಯೆಗನುಗುಣವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕ್ಷೌರಿಕ, ಮಡಿವಾಳ, ಟೇಲರ್ ವೃತ್ತಿ ಮಾಡುವ ಅಸಂಘಟಿತ ಕಾರ್ಮಿಕರ ಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹಿಸಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ ಎಂದರು.
ಕಾರ್ಮಿಕ ಇಲಾಖೆ ಕಾರ್ಮಿಕ-ಮಾಲೀಕರ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಕೋವಿಡ್-19 ಬಂದಿರುವುದರಿಂದ ಕಾರ್ಮಿಕ ವರ್ಗ ಹಾಗೂ ಉದ್ಯಮ ವರ್ಗಕ್ಕೆ ಅನೇಕ ಪಾಠಗಳನ್ನು ಕಲಿಸಿದೆ. ಕಾರ್ಮಿಕ ವರ್ಗದ ಶ್ರಮದಿಂದ ದೇಶದ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಕಾರ್ಮಿಕರ ಹಿತ ರಕ್ಷಣೆಗೆ ವಿವಿಧ ಕಾನೂನುಗಳು ಅಸ್ತಿತ್ವದಲ್ಲಿದ್ದರೂ ಉದ್ಯೋಗ ಕಡಿತ ಹಾಗೂ ಉತ್ಪಾದನೆಗಳ ಸ್ಥಗಿತದ ಹಿನ್ನೆಲೆಯಲ್ಲಿ ಇಲಾಖೆ ಮಾನವೀಯತೆ ಆಧಾರದಿಂದ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ. ಇತ್ತಿಚಿಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಕೈಗಾರಿಕಾ ನೀತಿಯು ಕಾರ್ಮಿಕ ವರ್ಗಕ್ಕೆ ಪೂರಕವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುವಾಗ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಮಾಡಬೇಕು. ಮಾಸ್ಕ್, ಸ್ಯಾನಿಟೈಸರ್ ನಿರಂತರವಾಗಿ ಬಳಸಬೇಕು. ರಾಜ್ಯ ಸರ್ಕಾರ ಲಾಕ್‌ಡೌನ್ ಸಂದರ್ಭ ಸೇರಿದಂತೆ ವಿವಿಧ ಕಾಲಾವ ಧಿಯಲ್ಲಿ ಸಂಘಟಿತ, ಅಸಂಘಟಿತ ಮತ್ತು ವಲಸೆ ಕಾರ್ಮಿಕರಿಗೆ ಊಟ, ತಾತ್ಕಾಲಿಕ ವಸತಿ, ಆಹಾರ ಕಿಟ್ ಮತ್ತು ಪರಿಹಾರ ಧನ ನೀಡಿ ಧೈರ್ಯ ತುಂಬಿದೆ. ಕೋವಿಡ್ ದಂತಹ ಕಷ್ಟ ಕಾಲವನ್ನು ಕಾರ್ಮಿಕರು ಸೇರಿದಂತೆ ಎಲ್ಲರೂ ಸಮರ್ಥವಾಗಿ ಎದುರಿಸಬೇಕು. ಕಾರ್ಮಿಕರು ಭರವಸೆ ಕಳೆದುಕೊಳ್ಳದೇ ಬದುಕು ಕಟ್ಟಿಕೊಳ್ಳಬೇಕು. ಸೆಪ್ಟೆಂಬರ್ 1ರಿಂದ ಪೂರ್ವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಕೈಗಾರಿಕೆ ಇತರ ಚಟುವಟಿಕೆ ಆರಂಭಿಸಲು ಸರ್ಕಾರ ಅನುಮತಿ ನೀಡಲಿದೆ. ತುರ್ತಾಗಿ ರಾಷ್ಟ್ರದಲ್ಲಿ ಆರ್ಥಿಕ ಚಟುವಟಿಕೆಗಳ ಪುನರಾರಂಭ ಮಾಡುವ ಅಗತ್ಯವಿದೆ ಎಂದರು.
ಸ್ಮಾರ್ಟ್ ಕಾರ್ಡ್ ವಿತರಣೆ: ಸಭೆಯ ನಂತರ ಕಾರ್ಮಿಕ ಇಲಾಖೆಯ ಮದುವೆಯ ಧನಸಹಾಯ, ಶೈಕ್ಷಣಿಕ ಧನ ಸಹಾಯ, ಅಂತ್ಯಸಂಸ್ಕಾರ ಧನಸಹಾಯ, ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಧನ ಚೆಕ್‌ಗಳನ್ನು ವಿವಿಧ ಕಾರ್ಮಿಕ ಫಲಾನುಭವಿಗಳಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಹಮಾಲರು, ಅಕ್ಕಸಾಲಿಗರು, ಮಡಿವಾಳರು, ಮನೆಗೆಲಸದವರು, ಟೈಲರ್, ಕ್ಷೌರಿಕ, ಚಿಂದಿ ಆಯುವ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ ಸೇರಿದಂತೆ ಕಾರ್ಮಿಕ ಇಲಾಖೆ ವಿವಿಧ ಅಧಿಕಾರಿಗಳು, ಕಾರ್ಮಿಕ ಸಂಘಟನೆಯ ಮುಖಂಡರು, ಅಸಂಘಟಿತ ವಲಯದ ಸಂಘಟನೆಗಳ ಪ್ರತಿನಿಧಿ ಗಳು, ಫಲಾನುಭವಿಗಳು ಸಭೆಯಲ್ಲಿದ್ದರು.