ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಂಡಿದ್ದ ಏರುಗತಿಯಿಂದ ವಿಮುಖವಾಗಿ ಇಂದು ಬುಧವಾರದ ವಹಿವಾಟನ್ನು 194 ಅಂಕಗಳ ನಷ್ಟದೊಂದಿಗೆ 39,756.81 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸಾಗರೋತ್ತರ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಬೇಕಾಬಿಟ್ಟಿ ಮಾರಾಟ ಪ್ರವೃತ್ತಿಯೇ ಇಂದು ಮುಂಬಯಿ ಶೇರು ಪೇಟೆಯಲ್ಲೂ ಕಾಣಿಸಿಕೊಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕಗಳ ಪತನವನ್ನು ಕಂಡಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 59.40 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,906.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಅತೀ ದೊಡ್ಡ ಲೂಸರ್ ಎನಿಸಿಕೊಂಡ ಎಸ್ ಬ್ಯಾಂಕ್ ಶೇ.3.34ರ ನಷ್ಟಕ್ಕೆ ಗುರಿಯಾಯಿತು. ಇತರ ಲೂಸರ್‌ಗಳಾದ ಟಾಟಾ ಸ್ಟೀಲ್, ಒಎನ್‌ಜಿಸಿ, ವೇದಾಂತ, ಸನ್ ಫಾರ್ಮಾ, ಟಿಸಿಎಸ್, ಆರ್‌ಐಎಲ್, ಎಚ್ ಯು ಎಲ್, ಐಟಿಸಿ ಶೇರುಗಳು ಶೇ.2.60 ಇಳಿಕೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು 10 ಪೈಸೆಗಳ ಏರಿಕೆಯನ್ನು ಕಂಡು 69.34 ರೂ. ಮಟ್ಟಕ್ಕೆ ಏರಿತು. ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಇಂದು ಶೇ.2.57ರ ಇಳಿಕೆಯನ್ನು ಕಂಡು ಬ್ಯಾರಲ್ ಗೆ 60.69 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,679 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 998 ಶೇರುಗಳು ಮುನ್ನಡೆ ಸಾಧಿಸಿದವು; 1,522 ಶೇರುಗಳು ಹಿನ್ನಡೆಗೆ ಗುರಿಯಾದವು; 159 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.