ಮುಂಬಯಿ : ಬೆಳಗ್ಗಿನ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 147 ಅಂಕಗಳ ನಷ್ಟದೊಂದಿಗೆ 36,373.44 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿತು.
ಇಂದಿನ ಸೆನ್ಸೆಕ್ಸ್ ಕುಸಿತಕ್ಕೆ ಲಾಭ ನಗದೀಕರಣ ಒಂದು ಕಾರಣವಾದರೆ, ಇನ್ನೊಂದು ಮುಖ್ಯ ಕಾರಣ ಸಂಸತ್ತಿನಲ್ಲಿ ಇಂದು ವಿರೋಧ ಪಕ್ಷಗಳು ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿರುವುದು. ಈ ಗೊತ್ತುವಳಿಯ ಮೇಲಿನ ಚರ್ಚೆಯ ದಿನಾಂಕವನ್ನು ಇನ್ನು 2 – 3 ದಿನಗಳ ಒಳಗೆ ತಾನು ಪ್ರಕಟಿಸುವುದಾಗಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ತೂಗುಯ್ನಾಲೆಯಂತೆ ಓಲಾಡಿ 427 ಅಂಕಗಳ ಏರಿಳಿತಗಳನ್ನು ಕಂಡಿತು. ಖರೀದಿ – ಮಾರಾಟ ಪ್ರಕ್ರಿಯೆಗಳು ಸಾಗುತ್ತಲೇ ಇದ್ದವು. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 196.19 ಅಂಕಗಳನ್ನು ಸಂಪಾದಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 27.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,980.45 ಅಂಕಗಳ ಮಟ್ಟಕ್ಕೆ ಕುಸಿಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಬುಧವಾರ ಒಟ್ಟು 2,727 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 888 ಶೇರುಗಳು ಮುನ್ನಡೆ ಕಂಡವು; 1,704 ಶೇರುಗಳು ಹಿನ್ನಡೆಗೆ ಗುರಿಯಾದವು; 135 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.