ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 400ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಮೋದಿ ಭರ್ಜರಿ ಗೆಲುವಿನ ಬಲದಲ್ಲೇ ಡಾಲರ್ ಎದುರು ರೂಪಾಯಿ ಇಂದು 23 ಪೈಸೆಗಳ ಉತ್ತಮ ಏರಿಕೆಯನ್ನು ದಾಖಲಿಸಿ 69.78 ರೂ. ಮಟ್ಟಕ್ಕೆ ಜಿಗಿಯುವಲ್ಲಿ ಸಫಲವಾಯಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 96.15 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,907.54 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.90 ಅಂಕಗಳ ಮುನ್ನಡೆಯೊಂದಿಗೆ 1,685.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ಆರಂಭಿಕ ವಹಿವಟಿನಲ್ಲಿ ಟಾಪ್ ಗೇನರ್‌ಗಳಾಗಿ ಮೂಡಿ ಬಂದ ಲಾರ್ಸನ್, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಟಾಟಾ ಮೋಟರ್, ಬಜಾಜ್ ಫಿನಾನ್ಸ್, ಏಶ್ಯನ್ ಪೇಂಟ್, ಮಹೀಂದ್ರ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಇನ್‌ಫೋಸಿಸ್ ಮತ್ತು ಅವಳಿ ಎಚ್ ಡಿ ಎಫ್ ಸಿ ಶೇ.2ರ ಏರಿಕೆಯನ್ನು ದಾಖಲಿಸಿದವು.
ನಿನ್ನೆ ಗುರುವಾರ ಸೆನ್ಸೆಕ್ಸ್ 1,000 ಕ್ಕೂ ಅಧಿಕ ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ ಮೊದಲ ಬಾರಿಗೆ 40,000 ಅಂಕಗಳ ದಾಖಲೆಯ ಮಟ್ಟವನ್ನು ತಲುಪಿ ಬಳಿಕ ಲಾಭನಗದೀಕರಣದಿಂದಾಗಿ ದಿನಾಂತ್ಯಕ್ಕೆ 200 ಅಂಕಗಳ ನಷ್ಟವನ್ನು ಕಂಡಿತ್ತು.
ಇತರ ಏಶ್ಯನ್ ಶೇರು ಪೇಟೆಗಳಾದ ಚೀನ, ಜಪಾನ್ ಮತ್ತು ಕೊರಿಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಹಿನ್ನಡೆಯನ್ನು ಕಂಡವು. ಬ್ರೆಂಟ್ ಕಚ್ಚಾತೈಲ ಶೇ.1.21ರ ಏರಿಕೆಯನ್ನು ದಾಖಲಿಸಿ ಬ್ಯಾರಲ್‌ಗೆ 68.57 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.