ಮುಂಬಯಿ : ಟರ್ಕಿ ಕರೆನ್ಸಿ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಬಿಕ್ಕಟ್ಟಿಗೆ ಕಾರಣವಾಗಬಹುದೆಂಬ ಭೀತಿಯಲ್ಲಿ ವಿದೇಶಿ ಬಂಡವಾಳದ ಹೊರ ಹರಿವು ತೀವ್ರವಾಗಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 188.44 ಅಂಕಗಳ ನಷ್ಟದೊಂದಿಗೆ 37,663.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟನ್ನು 50.05 ಅಂಕಗಳ ನಷ್ಟದೊಂದಿಗೆ 11,385.05 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ದೇಶದ ವಾಣಿಜ್ಯ ಕೊರತೆಯು ಜುಲೈಯಲ್ಲಿ ಐದು ವರ್ಷಗಳ ಗರಿಷ್ಠ ಮಟ್ಟವಾಗಿ 18 ಬಿಲಿಯ ಡಾಲರ್‌ಗೆ ತಲುಪಿರುವುದು ಶೇರು ಮಾರುಕಟ್ಟೆಯಲ್ಲಿ ಕಳವಳಕ್ಕೆ ಕಾರಣವಾಯಿತು.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯ 70.32 ರೂ.ಗಳ ಹೊಸ ಸಾರ್ವಕಾಲಿಕ ತಳಮಟ್ಟವನ್ನು ತಲುಪಿರುವುದು ಶೇರು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,861 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,180 ಶೇರುಗಳು ಮುನ್ನಡೆ ಕಂಡವು; 1,542 ಶೇರುಗಳು ಹಿನ್ನೆಡೆಗೆ ಗುರಿಯಾದವು; 139 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.