ಮುಂಬಯಿ : ದಿನಪೂರ್ತಿಯ ವಹಿವಾಟಿನಲ್ಲಿ ನಿರಂತರ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 86 ಅಂಕಗಳ ಏರಿಕೆಯೊಂದಿಗೆ 39,615.90 ಅಂಕಗಳ ಮಟ್ಟದಲ್ಲಿ ತೃಪ್ತಿಕರವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.90 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,870.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿ ಹೇಳುವುದಾದರೆ ಈ ವಾರ ಸೆನ್ಸೆಕ್ಸ್ ಕಂಡ ನಷ್ಟ 98.30 ಅಂಕ, ನಿಫ್ಟಿ ಕಂಡ ನಷ್ಟ 52.15 ಅಂಕ.
ಇಂದಿನ ಟಾಪ್ ಗೇನರ್‌ಗಳ ಪೈಕಿ ಇಂಡಸ್ ಇಂಡ್, ಬಜಾಜ್ ಫಿನಾನ್ಸ್, ಮಹೀಂದ್ರ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ವೇದಾಂತ ಶೇರುಗಳು ಶೇ.1.90 ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 20 ಪೈಸೆಯ ಕುಸಿತವನ್ನು ಕಂಡು 69.48 ರೂ. ಗೆ ಇಳಿಯಿತು. ಬ್ರೆಂಟ್ ಕಚ್ಚಾ ತೈಲ ಶೇ.1.02ರ ಏರಿಕೆಯನ್ನು ಕಂಡು ಬ್ಯಾರಲ್ ಗೆ 62.41 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,621 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,055 ಶೇರುಗಳು ಮುನ್ನಡೆ ಸಾಧಿಸಿದವು; 1,421ಶೇರುಗಳು ಹಿನ್ನಡೆಗೆ ಗುರಿಯಾದವು; 145 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.