Advertisement

ಕಾಂಗ್ರೆಸ್‌ ನಾಯಕರ ವಿರುದ್ಧ ಸೀನಿಯರ್ಸ್ ಗರಂ

11:14 PM May 31, 2019 | Lakshmi GovindaRaj |

ಬೆಂಗಳೂರು: ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಪಕ್ಷದ ಹಿರಿಯ ನಾಯಕರು ಗರಂ ಆಗಿದ್ದಾರೆ.

Advertisement

ಗುರುವಾರ ಸಂಜೆ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಹಿರಿಯ ನಾಯಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಲಾಭವಾಗಿಲ್ಲ. ಮೈತ್ರಿ ಮಾಡಿಕೊಳ್ಳುವಾಗ ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದೀರಿ. ಈಗ ಚುನಾವಣೆಯಲ್ಲಿ ಸೋತ ತಕ್ಷಣ ಹಿರಿಯ ನಾಯಕರ ಅಭಿಪ್ರಾಯ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ನಡೆಸುವಾಗ ಹಿರಿಯ ನಾಯಕರು ನೀಡಿರುವ ಯಾವ ಸಲಹೆಗಳನ್ನೂ ಪರಿಗಣಿಸದಿರುವಾಗ ಈಗ ನೀಡುವ ಸಲಹೆಗಳನ್ನು ಎಷ್ಟರ ಮಟ್ಟಿಗೆ ಪರಿಗಣಿಸುತ್ತೀರಿ ಎಂದು ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಎಸ್‌.ಆರ್‌. ಪಾಟೀಲ್‌, ಮೋಟಮ್ಮ ಸೇರಿ ಅನೇಕರು ಪಕ್ಷದ ಮುಖಂಡರ ನಡವಳಿಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಪಡೆದ ಮತಗಳು ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳ ಮತಗಳನ್ನು ಸೇರಿಸಿದರೆ, ಮೈತ್ರಿ ಅಭ್ಯರ್ಥಿಗಳಿಗೆ ಹೆಚ್ಚು ಮತಗಳು ದೊರೆಯಬೇಕಿತ್ತು.

Advertisement

ಆದರೆ, ಎರಡೂ ಪಕ್ಷಗಳ ಮತಗಳನ್ನು ಕೂಡಿಸಿದರೂ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗಳಿಸಿದಷ್ಟು ಮತಗಳು ಬಂದಿಲ್ಲ. ಜೆಡಿಎಸ್‌ನವರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿಲ್ಲ. ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಪಕ್ಷಕ್ಕೆ ಭವಿಷ್ಯದಲ್ಲಿ ಏನು ಪ್ರಯೋಜನ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ ಎರಡೂ ಪಕ್ಷಗಳ ಮತಗಳನ್ನು ಕೂಡಿದರೆ, 18ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಿತ್ತು. ಆದರೆ, ಕೇವಲ ಒಂದು ಸ್ಥಾನ ಗೆಲ್ಲುವಂತಾಗಿದೆ. ಅದೂ ಅವರು ಪಕ್ಷದ ವರ್ಚಸ್ಸಿನಿಂದ ಗೆಲುವು ಪಡೆದಿಲ್ಲ. ಅವರ ಸ್ವಂತ ಶಕ್ತಿಯಿಂದ ಗೆದ್ದಿದ್ದಾರೆ.

ಈ ಚುನಾವಣೆಯಲ್ಲಿ ಜವಾಬ್ದಾರಿ ಹೊತ್ತವರ ಸಾಧನೆ ಶೂನ್ಯ ಎಂದು ಆರೋಪಿಸಿದ್ದಾರೆ. ಒಂದು ವೇಳೆ ನಿರೀಕ್ಷಿಸಿದಷ್ಟು ಸ್ಥಾನಗಳು ಲಭ್ಯವಾಗಿದ್ದರೆ, ಹಿರಿಯ ನಾಯಕರನ್ನು ಯಾವುದಕ್ಕೂ ಪರಿಗಣಿಸುತ್ತಿರಲಿಲ್ಲ. ಈಗ ಸೋಲಾಗಿರುವುದರಿಂದ ಅಭಿಪ್ರಾಯ ಪಡೆಯಲು ಮುಂದಾಗಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ವಾಸ್ತವ ಸ್ಥಿತಿಯನ್ನು ಹೈ ಕಮಾಂಡ್‌ ಗಮನಕ್ಕೆ ತಾರದೇ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೀರ. ಇದರಿಂದ ಹೈಕಮಾಂಡ್‌ಗೂ ರಾಜ್ಯದ ವಾಸ್ತವ ಪರಿಸ್ಥಿತಿ ಅರಿವಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

ಶಾಸಕರ ಬಾಯಿಗೆ ಬೀಗ ಹಾಕಿ: ಮೈತ್ರಿ ಸರ್ಕಾರದಲ್ಲಿ ಹಾಲಿ ಶಾಸಕರು ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ, ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಮೊದಲು ಅವರ ಬಾಯಿಗೆ ಬೀಗ ಹಾಕಿ, ಸಂಪುಟ ವಿಸ್ತರಣೆಗೆ ಶಾಸಕರ ಅಭಿಪ್ರಾಯದಂತೆ ಮುನ್ನಡೆಯಿರಿ ಎಂಬ ಸಲಹೆ ನೀಡಿದ್ದಾರೆ.

ವೇಣುಗೋಪಾಲ್‌ ವಿರುದ್ಧವೂ ಅಸಮಾಧಾನ: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ವಿರುದ್ಧವೂ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತು ರಾಜ್ಯದಲ್ಲಿ ಪಕ್ಷವನ್ನೇ ಮುಳುಗಿಸಿದ್ದೀರಿ, ದೇಶದಲ್ಲಿಯೂ ಪಕ್ಷ ಮುಳುಗುವಂತೆ ಮಾಡಿದ್ದೀರಾ ಎಂದು ಅವರ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಸಮಜಾಯಿಷಿ: ನಾಯಕರ ಮಾತುಗಳಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿಯಲ್ಲಿ ಮುಂದುವರಿಯುವುದು ಅನಿವಾರ್ಯವಾಗಿದೆ. ತಕ್ಷಣಕ್ಕೆ ಚುನಾವಣೆ ಎದುರಿಸಿದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ. ಹೀಗಾಗಿ ಜೆಡಿಎಸ್‌ ಜತೆಗಿನ ಮೈತ್ರಿ ಮುಂದುವರಿಯುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next