ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು ಬುಧವಾರ ಬೆಳಿಗ್ಗೆ ನವದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
1929, ಜನವರಿ 10 ರಂದು ಜನಿಸಿದ ಅವರು 1950 ರಲ್ಲಿ ಬಾಂಬೆ ಹೈಕೋರ್ಟ್‌ನ ವಕೀಲರಾಗಿ ವೃತ್ತಿ ಆರಂಭಿಸಿದರು. 1961 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ದೇಶದ ಪ್ರಮುಖ ವಕೀಲರಲ್ಲಿ ಓರ್ವರಾಗಿದ್ದರು.
ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಫಾಲಿ ನಾರಿಮನ್ ಅವರ ನಿಧನದ ಬಗ್ಗೆ X ನಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ, ನಾರಿಮನ್ ನಿಧನದಿಂದ “ಒಂದು ಯುಗದ ಅಂತ್ಯವಾಗಿದೆ. ಫಾಲಿ ನಾರಿಮನ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಜೀವಂತ ದಂತಕತೆಯಾಗಿದ್ದ ಅವರು ಕಾನೂನು ಕ್ಷೇತ್ರ ಹಾಗೂ ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿಯಾಗಿರುತ್ತಾರೆ. ಎಂದು ಬರೆದಿಕೊಂಡಿದ್ದಾರೆ.
ಖ್ಯಾತ ನ್ಯಾಯಶಾಸ್ತ್ರಜ್ಞರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.