Advertisement

ಬಿಜೆಪಿಯಿಂದ 3ನೇ ದರ್ಜೆ ರಾಜಕಾರಣ

03:04 PM Mar 19, 2023 | Team Udayavani |

ಮಂಡ್ಯ: ಬಿಜೆಪಿ, ಆರೆಸ್ಸೆಸ್‌ ಹಾಗೂ ಸಂಘ ಪರಿವಾರಗಳು ಮಂಡ್ಯದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ ಹೆಸರಿನಲ್ಲಿ ಕಟ್ಟುಕಥೆ ಕಟ್ಟಿ ಮಂಡ್ಯ ಸಂಸ್ಕೃತಿಗೆ ಮಸಿ ಬಳಿಯುವ ಮೂಲಕ 3ನೇ ದರ್ಜೆಯ ರಾಜಕಾರಣ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ಜಗದೀಶ್‌ ಕೊಪ್ಪ ಹೇಳಿದರು.

Advertisement

ಹೆಸರು ಉಲ್ಲೇಖವೇ ಇಲ್ಲ: ಮಂಡ್ಯ ಜಿಲ್ಲೆಯೂ ಹಿಂದಿನಿಂದಲೂ ಸೌಹಾರ್ದತೆಗೆ ಹೆಸರಾಗಿದೆ. ಟಿಪ್ಪುವಿನ ಚರಿತ್ರೆ ಕುರಿತು ಇಡೀ ಜಗತ್ತಿನಾದ್ಯಂತ ಒಟ್ಟು 600ಕ್ಕೂ ಹೆಚ್ಚು ಕೃತಿಗಳಿವೆ. ಈ ಎಲ್ಲಾ ಪುಸ್ತಕಗಳಲ್ಲಿ ಎಲ್ಲೂ ಉರಿಗೌಡ, ದೊಡ್ಡನಂಜೇಗೌಡ ಎಂಬ ಹೆಸರು ಉಲ್ಲೇಖವೇ ಇಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದ ಕಪೋಲ ಕಲ್ಪಿತ ಪಾತ್ರಗಳೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಪಪಡಿಸಿದರು.

ಬಹಿರಂಗ ಚರ್ಚೆಗೆ ಪಂಥಾಹ್ವಾನ: ಟಿಪ್ಪುವಿನ ಇತಿಹಾಸದ ಇಂಚಿಂಚು ವಿಷಯಗಳನ್ನು ಬ್ರಿಟಿಷ್‌ ಕೃತಿಕಾರರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಟಿಪ್ಪುವಿನ ಇತಿಹಾಸ ಕುರಿತು 1830ರಿಂದ ಅಮೇರಿ ಕಾದ ಕೊಲಂಬಿಯಾ ವಿವಿ ದಾಖಲೆಗಳ ಸಮೇತ ಸಂಗ್ರಹಣೆ ಮಾಡಿದೆ. ಕೃತಿಕಾರ ವಿಲಿಯಂ ಡಾರ್ಲಿ ಪಲ್‌ ಹೇಳುವ ಪ್ರಕಾರ ಬ್ರಿಟೀಷ್‌ ಸೇನೆಯೂ ಸುತ್ತುವರೆದು ಬ್ರಿಟಿಷ್‌ ಸೈನಿಕನೊಬ್ಬ ಗುಂಡಿನ ದಾಳಿಗೆ ಒಳಗಾಗಿ ಟಿಪ್ಪು ಸಾವಿಗೀಡಾದ ಎಂಬುದು ದಾಖಲಾಗಿದೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಆದರೆ ಎಲ್ಲೂ ಕತ್ತಿಯಿಂದ ಸತ್ತಿದ್ದಾನೆ ಎಂಬ ದಾಖಲೆ ಇಲ್ಲ. ಈ ಬಗ್ಗೆ ಯಾರು ಬೇಕಾದರೂ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ದಿವಾನ್‌ ಪೂರ್ಣಯ್ಯ ಇತಿಹಾಸದಲ್ಲೂ ಇಲ್ಲ: ಕಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್‌ ಹಾಲ್‌ ನಲ್ಲಿ ಎಲ್ಲಾ ದಾಖಲೆ ಲಭ್ಯವಿದೆ. ಅಲ್ಲಿಯೂ ಉರಿಗೌಡ, ದೊಡ್ಡನಂಜೇಗೌಡನ ಉಲ್ಲೇಖವಿಲ್ಲ. ಅಲ್ಲದೇ ಮೈಸೂರಿನ ದಿವಾನರಾಗಿದ್ದ ದಿವಾನ್‌ ಪೂರ್ಣಯ್ಯ ದಾಖಲಿಸಿರುವ ಇತಿಹಾಸದಲ್ಲಿಯೂ ಉರಿಗೌಡ, ದೊಡ್ಡನಂಜೇಗೌಡನ ಪ್ರಸ್ತಾಪವಿಲ್ಲ. ಅಲ್ಲ ದೇ ಪಾಶ್ಚಾತ್ಯ ಕೃತಿಕಾರ ಬ್ರೆಯಬೆಡ್‌ ದಾಖಲಿಸಿರುವ ಕೃತಿಗಳಲ್ಲೂ ಉಲ್ಲೇಖವಿಲ್ಲ ಎಂದರು.

ಹ.ಕ.ರಾಜೇಗೌಡರು ಲಾವಣಿ ಸಂಗ್ರಹ ಮಾಡಿಲ್ಲ: ಹ.ಕ.ರಾಜೇಗೌಡರು ಟಿಪ್ಪುವಿನ ಕುರಿತ ಲಾವಣಿ ಸಂಗ್ರಹ ಮಾಡಿದ್ದಾರೆ ಎಂದು ಸುಳ್ಳು ಲಾವಣಿ ಬಿಡುಗಡೆ ಮಾಡಿದ್ದಾರೆ. ನಿನ್ನೆ ಮೊನ್ನೆಯಷ್ಟೇ ಬಿಜೆಪಿ, ಸಂಘಪರಿವಾರ ಲಾವಣೆಯೊಂದನ್ನು ಮುನ್ನೆಲೆಗೆ ತಂದಿದ್ದಾರೆ. ವಾಸ್ತವವಾಗಿ ಅದು ಸಂಘಪರಿವಾರದ ಸೃಷ್ಟಿಯೇ ಹೊರತು ಹ.ಕ.ರಾಜೇಗೌಡರ ಸಂಗ್ರಹವಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಅಧಿಕೃತ ದಾಖಲೆಗಳಿಲ್ಲ: ಪ್ರಕಾಶಕ ಅಭಿರುಚಿ ಗಣೀಶ್‌ ಮಾತನಾಡಿ, ಉರೀಗೌಡ, ದೊಡ್ಡನಂಜೇ ಗೌಡ ಇದ್ದರು ಎಂಬುದಕ್ಕೆ ಯಾವುದೇ ಅ ಧಿಕೃತ ದಾಖಲೆಗಳು ಲಭ್ಯವಾಗಿಲ್ಲ. ಇನ್ನು ಬಿಜೆಪಿ, ಆರ್‌ಎಸ್‌ ಎಸ್‌ ಯಾವುದೇ ದಾಖಲೆ ನೀಡುತ್ತಿಲ್ಲ. ಇದರಿಂದಾಗಿ ಸುಳ್ಳೆಂಬುದು ಸಾಬೀತಾಗುತ್ತದೆ ಎಂದು ಹೇಳಿದರು.

ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು, ರೈತ ಮುಖಂಡ ಕೆ.ಬೋರಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ, ಉಗ್ರನರಸಿಂಹೇ ಗೌಡ, ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಹಾಗೂ ಪ್ರಕಾಶಕ ಅಭಿರುಚಿ ಗಣೇಶ್‌ ಇದ್ದರು.

ಸುವರ್ಣ ಮಂಡ್ಯ ಪುಸ್ತಕದ ಲೇಖನದಲ್ಲಿ ಉಲ್ಲೇಖ : ಸಾಹಿತಿ ಹ.ಕ.ರಾಜೇಗೌಡ ಅವರು ಬರೆದಿರುವ ಸುವರ್ಣ ಮಂಡ್ಯ ಎಂಬ ಪುಸ್ತಕದ ಲೇಖನದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ ಎಂಬ ಹೆಸರು ಉಲ್ಲೇಖೀಸಿದ್ದಾರೆ. 1994ರಲ್ಲಿ ನಡೆದ 63ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೇ.ಜ.ಗೌ ಸಂಪಾದಕತ್ವದಲ್ಲಿ ಸುವರ್ಣ ಮಂಡ್ಯ ಪುಸ್ತಕ ಬಿಡುಗಡೆ ಮಾಡಲಾಗಿತ್ತು. ಅದೇ ಪುಸ್ತಕವನ್ನು ಮತ್ತೆ 2006ರಲ್ಲಿ ಮಂಡ್ಯ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷ್ಕೃತ ಆವೃತ್ತಿಯಾಗಿ ಮುದ್ರಣಗೊಂಡಿದೆ. ಆ ಪುಸ್ತಕದಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿದೆ. ಆದರೆ ಪುಸ್ತಕದಲ್ಲಿ ಟಿಪ್ಪುವನ್ನು ಕೊಂದಿದ್ದು ಉರಿಗೌಡ, ದೊಡ್ಡನಂಜೇಗೌಡ ಎಂಬ ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಹೈದರಾಲಿ ಹಾಗೂ ಟಿಪ್ಪು ವಿರುದ್ಧ ಉರಿಗೌಡ ಮತ್ತು ದೊಡ್ಡನಂಜೇಗೌಡ ಮುಂತಾದವರು ಸೆಟೆದು ನಿಂತರು ಎಂದು ಹೇಳಲಾಗಿದೆ. ಈ ಪುಸ್ತಕದಲ್ಲಿ ದಾಖಲಾಗಿರುವ ಪ್ರತಿಯನ್ನು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌ ಬಿಡುಗಡೆ ಮಾಡಿದ್ದಾರೆ.

ಮೀಸೆ ಬೋಳಿಸುವೆ: ಜಗದೀಶ್‌ ಸವಾಲು : ಉರಿಗೌಡ ಮತ್ತು ದೊಡ್ಡ ನಂಜೇಗೌಡ ಟಿಪ್ಪು ಅವರನ್ನು ಕೊಂದಿರುವುದನ್ನು ಮೈಸೂರಿನ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಾಬೀತುಪಡಿಸಿದರೆ ಮೀಸೆ ಮತ್ತು ತಲೆಯನ್ನು ಬೋಳಿಸಿಕೊಂಡು ಕತ್ತೆ ಮೇಲೆ ಮೆರವಣಿಗೆ ಹೋಗುತ್ತೇನೆ ಎಂದು ಹಿರಿಯ ಪತ್ರಕರ್ತ ಜಗದೀಶ್‌ಕೊಪ್ಪ ಸವಾಲು ಹಾಕಿದರು. ಟಿಪ್ಪುವನ್ನು ಕೊಂದಿರುವುದರ ಬಗ್ಗೆ ನಾನು ಸಾರ್ವಜನಿಕ ಚರ್ಚೆಗೆ ಸಿದ್ಧ. ಅವರೇ ವೇದಿಕೆ ಸಿದ್ಧಪಡಿಸಲಿ ಎಂದು ಸವಾಲು ಹಾಕಿದರು. ಇನ್ನು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿವೆ. ಈ ಬಗ್ಗೆ ಜನತೆ ಎಚ್ಚರ ವಹಿಸಬೇಕೆಂದರು.

ಎಲ್ಲೂ ದಾಖಲಿಲ್ಲ: ಸ್ಪಷ್ಟನೆ : ಟಿಪ್ಪುವಿನ ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದ್ದವು. ಆಗ 8 ಮಂದಿ ಗೌಡರು ಸ್ತ್ರೀಯರ ವೇಷ ಧರಿಸಿ ಅತ್ಯಾಚಾರಿಗಳನ್ನು ಕೊಲ್ಲುವ ಮೂಲಕ ಮೈಸೂರು ಮಹಾರಾಣಿ ಅಮ್ಮಣ್ಣಿಯಮ್ಮನವರ ಪರ ಕೆಲಸ ಮಾಡುತ್ತಿದ್ದರು. ಆದರೆ, 8 ಮಂದಿ ಗೌಡರಲ್ಲಿ ಉರಿಗೌಡ, ದೊಡ್ಡನಂಜೇಗೌಡ ಹೆಸರಿಲ್ಲ. ಇದು ಸೀತಾಳದಂಡು ಲೇಖನದಲ್ಲಿ ಉಲ್ಲೇಖವಾಗಿದೆ. ಇದನ್ನೇ ಹ.ಕ.ರಾಜೇಗೌಡರು ಉಲ್ಲೇಖೀಸಿರಬಹುದು. ಹ.ಕ.ರಾಜೇಗೌಡರ ಇತಿಹಾಸ ಶೋಧ ಪುಸ್ತಕ ಸೇರಿ 40 ಪುಸ್ತಕಗಳಲ್ಲಿ ಎಲ್ಲೂ ದಾಖಲಿಸಿಲ್ಲ. ಬ್ರೈಡ್  ಎಂಬ ಬ್ರಿಟಿಷ್‌ ಅಧಿಕಾರಿಯನ್ನು ಟಿಪ್ಪು ಏಳೆಂಟು ವರ್ಷ ಬಂಧನದಲ್ಲಿರಿಸಿದ್ದನು. ಆತ ಬಿಡುಗಡೆಯಾದ ಬ್ರಿಟಿಷ್‌ ಸೈನ್ಯದೊಂದಿಗೆ ಬಾಬುರಾಯನ ಕೊಪ್ಪಲು ಕಡೆಯಿಂದ ದಾಳಿ ಮಾಡಿದ್ದನು. ಆಗ ಟಿಪ್ಪು ಗುಂಡೇಟಿನಿಂದ ಸತ್ತಿದ್ದನು. ಅದನ್ನು ಬ್ರೆçಡ್‌ ಅಧಿಕಾರಿಯೇ ಕಂಡು ಹಿಡಿದು ಟಿಪ್ಪುವಿನ ಶವ ಗುರುತಿಸಿದ್ದ ಬಗ್ಗೆ ದಾಖಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next