Advertisement
ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡ ಗೌರಿ ಲಂಕೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಯಿತಾದರೂ ಅಷ್ಟರಲ್ಲಿ ಪ್ರಾಣ ಬಿಟ್ಟಿದ್ದರು. ದುಷ್ಕರ್ಮಿಗಳು ಹತ್ತಿರದಿಂದಲೇ ಗುಂಡು ಹಾರಿಸಿದ್ದು, ಎದೆ ಭಾಗಕ್ಕೆ ಎರಡು, ಹಣೆಗೆ ಒಂದು ಗುಂಡು ತಗುಲಿವೆ. ಉಳಿದ ನಾಲ್ಕು ಗುಂಡುಗಳು ಮನೆಯ ಗೋಡೆಗೆ ತಾಗಿವೆ. ದುಷ್ಕರ್ಮಿಗಳು ಮಧ್ಯಾಹ್ನದಿಂದಲೇ ರಾಜರಾಜೇಶ್ವರಿ ನಗರ ಸುತ್ತಮುತ್ತ ಓಡಾಡಿಕೊಂಡು, ಗೌರಿ ಲಂಕೇಶ್ ಅವರ ಚಲನವಲನ ಗಮನಿಸಿ, ಅವರ ಆಗಮನಕ್ಕಾಗಿ ಕಾದು ಕುಳಿತಿದ್ದರು ಎಂದು ಹೇಳಲಾಗುತ್ತಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ಪ್ರಗತಿಪರ ಸಂಘಟನೆಗಳು, ಚಿಂತಕ ಡಾ| ಕಲಬುರ್ಗಿ ಅವರ ಹತ್ಯೆ ಮಾದರಿಯಲ್ಲೇ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿವೆ.
ಈ ಮಧ್ಯೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಸ್ಪಷ್ಟಪಡಿಸಿದ್ದು, ನಗರದಲ್ಲಿ ನಾಕಾಬಂಧಿ ಮಾಡಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಸುತ್ತಮುತ್ತಲಿನ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಗೌರಿ ಲಂಕೇಶ್ ನಿವಾಸದ ಸುತ್ತುಮುತ್ತಲ ಮನೆ ಹಾಗೂ ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕೆಮರಾ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಸಾಹಿತಿಗಳಾದ ಡಾ| ಚಂದ್ರಶೇಖರ ಪಾಟೀಲ್, ಎಸ್. ಜಿ. ಸಿದ್ದರಾಮಯ್ಯ, ಕೆ. ಮರಳುಸಿದ್ದಪ್ಪ, ಬಂಜಗೆರೆ ಜಯಪ್ರಕಾಶ್, ಕೆ. ನೀಳಾ, ನರೇಂದ್ರ ನಾಯಕ್ ಸಹಿತ ಹಲವರು ಗೌರಿ ಲಂಕೇಶ್ ಹತ್ಯೆ ಖಂಡಿಸಿದ್ದು, ಇದು ಹೇಯ ಕೃತ್ಯ ಎಂದು ಹೇಳಿದ್ದಾರೆ.
Related Articles
ಹಿರಿಯ ಪತ್ರಕರ್ತ ದಿ| ಲಂಕೇಶ್ ಅವರ ಪುತ್ರಿಯಾದ ಗೌರಿ ಲಂಕೇಶ್ ಪ್ರಗತಿಪರ ಚಳವಳಿಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಜತೆಗೆ ನಕ್ಸಲೀಯ ಚಟುವಟಿಕೆಗಳಿಂದ ದೂರವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಬಯಸಿದ ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್ ಸಹಿತ ಹಲವರ ಪರ ಸರಕಾರದ ಜತೆ ಮಾತು ಕತೆ ನಡೆಸಿ ಶರಣಾಗತಿ ಮಾಡಿಸಿದ್ದರು. ಲಂಕೇಶ್ ಅವರ ನಿಧನದ ಅನಂತರ ತಮ್ಮದೇ ಸಂಪಾದಕತ್ವದ ಗೌರಿ ಲಂಕೇಶ್ ಪತ್ರಿಕೆ ಆರಂಭಿಸಿದ್ದರು.
Advertisement
ತನಿಖೆಗೆ ಆದೇಶಿಸಿದ್ದೇನೆಪ್ರಗತಿಪರ ಚಿಂತಕಿಯ ಹತ್ಯೆ ಖಂಡನೀಯ. ಘಟನೆ ಬಗ್ಗೆ ಶೀಘ್ರದಲ್ಲಿಯೇ ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದೇನೆ.
– ಸಿದ್ದರಾಮಯ್ಯ ಹತ್ಯೆ ಖಂಡನೀಯ. ತನಿಖೆ ಅನಂತರ ಯಾವ ಕಾರಣಕ್ಕೆ ಹತ್ಯೆಯಾಗಿದೆಯೋ ಗೊತ್ತಾಗಲಿದೆ. ಸೈದ್ಧಾಂತಿಕ ವಿಚಾರಕ್ಕೋ ಅಥವಾ ವೈಯಕ್ತಿಕ ವಿಚಾರಕ್ಕೋ ಎಂಬುದು ತನಿಖೆಯ ಅನಂತರವಷ್ಟೇ ಗೊತ್ತಾಗಲಿದೆ. ಆರೋಪಿಗಳು ಬೆಂಗಳೂರು ಬಿಟ್ಟು ಹೊರ ಹೋಗಲು ಸಾಧ್ಯವಿಲ್ಲ. ಆದಷ್ಟು ಬೇಗ ಬಂಧಿಸಲಾಗುವುದು.
– ರಾಮಲಿಂಗಾ ರೆಡ್ಡಿ, ಗೃಹ ಸಚಿವ