ನವದೆಹಲಿ: ಕರ್ತವ್ಯಲೋಪ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಮತ್ತು ತಿಹಾರ್ ಜೈಲಿನ ಮಾಜಿ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಅವರನ್ನು ಕೇಂದ್ರ ಗೃಹ ಸಚಿವಾಲಯ ಅಮಾನತುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
1989ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಗೋಯೆಲ್ ಅವರನ್ನು ಕಳೆದ ತಿಂಗಳು ದೆಹಲಿಯ ತಿಹಾರ್ ಜೈಲುಗಳ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಲಾಗಿತ್ತು ಮತ್ತು ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.
ತಿಹಾರ್‌ನ ಡಿಜಿಯಾಗಿದ್ದ ಅವಧಿಯಲ್ಲಿ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಗೃಹ ಸಚಿವರು ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಾನತು ಆದೇಶದಲ್ಲಿ ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸಲಾಗಿಲ್ಲ.
200 ಕೋಟಿ ರೂ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮಂಡೋಲಿ ಜೈಲಿನಲ್ಲಿರುವ ತನ್ನ ಸುರಕ್ಷತೆಗಾಗಿ ಅಧಿಕಾರಿಗೆ 12.5 ಕೋಟಿ ರೂ. ಪಾವತಿಸಿದ್ದೇನೆ ಎಂದು ಆರೋಪಿ ಸುಕೇಶ್ ಚಂದ್ರಶೇಖರ್ ಹೇಳಿಕೆಗಳನ್ನು ನೀಡಿದ ನಂತರ ಗೋಯಲ್ ಅವರನ್ನು ಹುದ್ದೆಯಿಂದ ತೆಗದುಹಾಕಲಾಗಿತ್ತು.
ಚಂದ್ರಶೇಖರ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಬರೆದ ಪತ್ರದಲ್ಲಿ , ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಪಕ್ಷದ ಪ್ರಮುಖ ಹುದ್ದೆಗಾಗಿ 50 ಕೋಟಿ ರೂ.ಗಿಂತ ಹೆಚ್ಚು ಮತ್ತು ಜೈಲಿನಲ್ಲಿರುವ ಸಚಿವ ಸತ್ಯೇಂದರ್ ಜೈನ್ ಅವರಿಗೆ 10 ಕೋಟಿ ರೂ. ನೀಡಿರುವುದಾಗಿ ಬರೆಯಲಾಗಿತ್ತು. ಜೈನ್ ಅವರು ತಿಹಾರ್‌ನಲ್ಲಿ ಸಾಕ್ಷಿಯನ್ನು ಭೇಟಿಯಾಗಿದ್ದರು ಮತ್ತು ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದರು ಎಂದು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯದಲ್ಲಿ ಹೇಳಿಕೊಂಡ ಬೆನ್ನಲ್ಲೇ ಚಂದ್ರಶೇಖರ್ ಆರೋಪ ಹೊರಬಿದ್ದಿತ್ತು.
2019 ರಲ್ಲಿ, ಚಂದ್ರಶೇಖರ್ ಜೈನ್ ತನ್ನ ಕಾರ್ಯದರ್ಶಿ ಮತ್ತು ಆಪ್ತ ಸ್ನೇಹಿತ ಸುಶೀಲ್ ಅವರನ್ನು ಜೈಲಿನಲ್ಲಿ ಭೇಟಿಯಾದರು ಮತ್ತು ಜೈಲಿನಲ್ಲಿ ಸುರಕ್ಷಿತವಾಗಿರಲು, ಮೂಲಭೂತ ಸೌಲಭ್ಯಗಳನ್ನು ಪಡೆಯಲು ರಕ್ಷಣಾ ಹಣ ಎಂದು ಪ್ರತಿ ತಿಂಗಳು ಎರಡು ಕೋಟಿ ರೂ. ಜತೆಗೆ ಸಚಿವರ ನಿಷ್ಠಾವಂತ ಸಹವರ್ತಿ ಎಂದು ಗೋಯೆಲ್‌ಗೆ 1.5 ಕೋಟಿ ರೂ.ನೀಡಿರುವುದಾಗಿ ಹೇಳಲಾಗಿದೆ.
ಎರಡು-ಮೂರು ತಿಂಗಳೊಳಗೆ 10 ಕೋಟಿ ನೀಡುವಂತೆ ಜೈನ್ ಒತ್ತಾಯಿಸಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಗೋಯೆಲ್ ದಂಧೆ ನಡೆಸುತ್ತಿರುವ ಬಗ್ಗೆ ತಾನು ಬಹಿರಂಗಪಡಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಲ್ಲದೆ, ಸಚಿವರು ಮತ್ತು ಅಧಿಕಾರಿ ಇಬ್ಬರಿಗೂ ಪಾವತಿಸಿದ ಹಣದ ಬಗ್ಗೆ ಸಿಬಿಐಗೆ ತಿಳಿಸಿದ್ದರು.